ಭಾನುವಾರ, ಏಪ್ರಿಲ್ 26, 2026

ಹೂಮಂಚ (ಪುಸ್ತಕ ಯಾನ - 405)


ಪುಸ್ತಕದ ಶೀರ್ಷಿಕೆ : ಹೂಮಂಚ 

ಲೇಖಕರು : ಚಿತ್ರಲೇಖ 

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1983

ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 160

ಬೆಲೆ : 175 ರೂ. 


ಹೂಮಂಚ ಕಾದಂಬರಿಯಲ್ಲಿ ಹಲವಾರು ಇಷ್ಟವಾಗುವ ಅಂಶಗಳಿವೆ. ಮೊದಲನೆಯದೆಂದರೆ ಇಲ್ಲಿ ಶೃಂಗಾರ ರಸ ಇದ್ದರೂ ಎಲ್ಲಿಯೂ ಅತಿಯಾಗದೆ ಅಥವಾ ಮುಜುಗರ ತರಿಸದೆ ಮಿತಿಯಲ್ಲಿಯೇ ಅದನ್ನು ಕಟ್ಟಿಕೊಟ್ಟಿರುವ ಬಗೆ.. 

ಲಘುವಾದ ಹಾಸ್ಯ, ಮಾತಿನಲ್ಲಿಯೇ ಕಾಲೆಳೆಯುವಂತಹ ಹಾಗೂ ಸ್ನೇಹಮಯವಾದ ಹಾಸ್ಯವಿದು. ಪರಸ್ಪರ ಛೇಡಿಸುವಿಕೆ, ಯಾರ ಮನಸ್ಸಿಗೂ ನೋವುಂಟು ಮಾಡಿದಂತಹ ಲಘು ಹಾಸ್ಯದ ಸಂಭಾಷಣೆ ಇಷ್ಟವಾಯಿತು. 


ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಾಳ್ಮೆ ಹೆಚ್ಚು ಎಂದೇ ಕಟ್ಟಿಕೊಟ್ಟಿರುವ ಕಾದಂಬರಿಗಳನ್ನು ಓದಿರುತ್ತೇವೆ. ಗಂಡಿನಲ್ಲಿಯೂ ಇರುವ ತಾಳ್ಮೆ ಹಾಗೂ ಮುಂದಾಲೋಚನೆಯನ್ನು ಕಟ್ಟಿಕೊಡುವ ಕಾದಂಬರಿಗಳು ಬೆರಳಣಿಕೆಯಷ್ಟನ್ನೇ ನಾನು ಓದಿರುವುದು. ಆ ಗುಂಪಿಗೆ ಇದನ್ನು ಸೇರಿಸಬಹುದು. ಉನ್ನತವಾದ ಓದು, ರೂಪ ಹಾಗೂ ಹಣ ಏನೇ ಇದ್ದರೂ ಇರಬೇಕಾದ ವಿನಯ ಎದ್ದು ಕಾಣುತ್ತದೆ. 


ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತೆಂಬಂತಿರುವ ದಾಂಪತ್ಯಗಳ ನಡುವಲ್ಲಿ, ಹಾಗೂ ಒಬ್ಬರ ದಬ್ಬಾಳಿಕೆಯನ್ನು ಸಹಿಸಿಕೊಂಡು ಇನ್ನೊಬ್ಬರು ಬದುಕಬೇಕೆಂದಿರುವ ಇನ್ನೊಂದು ರೀತಿಯ ಉಸಿರು ಕಟ್ಟಿಸುವ ದಾಂಪತ್ಯಗಳ ಹೊರತಾಗಿಯೂ ಇರುವ ಮತ್ತೊಂದು ದಾಂಪತ್ಯದ ಮುಖವನ್ನು ಇಲ್ಲಿ ತೋರಿಸುತ್ತಾರೆ. ಅದೂ ನೂತನ ದಾಂಪತ್ಯದ ಹೊಸ್ತಿಲಲ್ಲಿನ ಪ್ರಬುದ್ಧತೆ ಇಷ್ಟವಾಗುತ್ತದೆ. 


ಗೋಪಾಲಸ್ವಾಮಿ ಹಾಗೂ ನಳಿನಾಕ್ಷಮ್ಮನವರ ಏಕಮಾತ್ರ ಪುತ್ರ ವರುಣ್ ಆರ್ಥಿಕ ಸ್ಥಿತಿ ತೃಪ್ತಿಕರವಾಗಿದ್ದು, ಜಂಜಾಟವಿಲ್ಲದ ಕುಟುಂಬದ ಇಂಜಿನಿಯರ್ ವರ. ಆದರೆ, ತನಗೆ ತಕ್ಕನಾದ ಸಂಗಾತಿಯ ಆಯ್ಕೆಯಲ್ಲಿ ವರುಣ್ ಗೆ ತನ್ನದೇ ಆದ ಕೆಲ ಅಭಿಪ್ರಾಯಗಳಿದ್ದವು. ಮನಸ್ಸಿಗೆ ಬಾರದ ಕನ್ಯೆಯನ್ನು ಕರುಣೆಗಾಗಿ ವರಿಸಿ ನೆಮ್ಮದಿರಹಿತ ದಾಂಪತ್ಯವನ್ನು ಗಂಟು ಹಾಕಿಕೊಳ್ಳಲು ಆತ ಸಿದ್ಧವಿರಲಿಲ್ಲ. ಆದರೆ, ರತಿಯನ್ನು ಕಂಡಾಕ್ಷಣ ಈಕೆಯೇ ತನ್ನ ಪತ್ನಿ ಎಂದು ನಿರ್ಧರಿಸಿದ್ದನು. ಅದರಂತೆಯೇ ಎಲ್ಲವೂ ಸುಗಮವಾಗಿ ವಿವಾಹದಿಂದ ಹೂಮಂಚದವರೆಗೂ ಬಂದು ನಿಂತಿತ್ತು. 


ಆಧುನಿಕ ಯುಗದಲ್ಲಿ ಒಳ್ಳೆಯ ಕುಟುಂಬವೊಂದು ತನ್ನ ವಿದ್ಯಾವಂತ ಕನ್ಯೆಯ ಸಮ್ಮತಿಯೊಂದಿಗೆ ವಿವಾಹ ಕಾರ್ಯಕ್ಕೆ ತೊಡಗುವುದು ಎಂಬ ನಂಬಿಕೆಯಲ್ಲಿದ್ದವನು ಅವನು. 


ಹಿರಿಯರು ನಿಶ್ಚಯಿಸಿದ ವಿವಾಹದಿಂದ ಸಮಸ್ಯೆಗಳಿರುವುದಿಲ್ಲ ಎಂಬ ನಿರ್ಧಾರವನ್ನು ಬಾಳಲ್ಲಿ ಅಳವಡಿಸಿಕೊಂಡಿದ್ದವನು. ಆತನಿಗೆ ತಕ್ಕದಾದ ರತಿ ಕೂಡ ಪ್ರೇಮವೆಂದು ಯಾರ ಹಿಂದೆಯೂ ಹೋದವಳಲ್ಲ. ಆದರೆ, ಇಂದು ಆಕೆ ಗಂಡಸರನ್ನು ದ್ವೇಷಿಸುತ್ತೇನೆ ಎಂದು ಹೇಳಿದ ಮಾತಿಗೆ ವರುಣ್ ಬೆಚ್ಚುವಂತಾಗಿತ್ತು. 


ಟ್ಯಾಕ್ಸ್ ಆಫೀಸರ್ ಆಗಿದ್ದ ಕೇಶವರಾಯರ ಪತ್ನಿ ಸುಗುಣಮ್ಮ ಹಾಗೂ ತಾಯಿ ಮಂಗಳಮ್ಮ. ಮೂವರು ಹೆಣ್ಣು ಮಕ್ಕಳು. ತೊಟ್ಟಿಲ ಹೆಸರು ಆರತಿಯಾದರೂ ಮುಂದೆ ಶಾಲೆಗೆ ಸೇರುವಷ್ಟರಲ್ಲಿ ರತಿ ಎಂದು ಕರೆಯುತ್ತಿದ್ದರು. ರತಿಯೇ ಹಿರಿಯ ಮಗಳು. ನಂತರ ಹುಟ್ಟಿದವರು ವಸುಮತಿ ಹಾಗೂ ಕೃತ್ತಿಕಾ. ರತಿ, ಮತಿ, ಕೃತಿಯರು ಹತ್ತಿರವಾಗಿ ಕಣ್ಮಣಿಗಳಂತೆ ಬೆಳೆದರು. 


ಎಲ್ಲವೂ ಸರಿಯಾಗಿದ್ದರೆ ರತಿ ತನ್ನ ವೈವಾಹಿಕ ಬದುಕನ್ನು ಖುಷಿಯಿಂದಲೇ ಅನುಭವಿಸುತ್ತಿದ್ದಳು. ಆದರೆ, ಒಂದು ತಿಂಗಳ ಹಿಂದೆ ನಡೆದ ಒಂದು ಘಟನೆ ಆಕೆಯನ್ನು ತಲ್ಲಣಿಸುವಂತೆ ಮಾಡಿತು. ಆಕೆಯ ತಪ್ಪಿರಲಿಲ್ಲವಾದರೂ ತನ್ನನ್ನು ತಾನು ಅಪವಿತ್ರ ಎಂದು ಭಾವಿಸಿದ್ದಳು. ಆಕೆಯ ಮೇಲೆ ನಡೆದ ಅತ್ಯಾಚಾರ ಆಕೆಯ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರಿತು. ಇದು ಪೊಲೀಸ್ ಕೇಸ್ ಎಂದು ಹೋದರೆ ತನ್ನ ಮಗಳ ಬದುಕೇ ಹಾಳಾಗುತ್ತದೆಂದು ತಂದೆ ತಡೆಹಿಡಿದರು. ಉಳಿದ ಇಬ್ಬರು ಹೆಣ್ಣುಮಕ್ಕಳ ಭವಿಷ್ಯವೂ ಮುಖ್ಯವಾಗಿತ್ತವರಿಗೆ. ಅಲ್ಲದೆ, ಮಂಗಳಮ್ಮನವರಿಗೆ ಉಂಟಾದ ಅನಾರೋಗ್ಯವೂ ಸೇರಿ ಎಲ್ಲರಿಗೂ ಒಪ್ಪಿಗೆಯಾದ ವರುಣ್ ನೊಂದಿಗೆ ರತಿಯ ವಿವಾಹ ನೆರವೇರಿತು. ವರುಣ್ ಗೆ ಯಾವುದನ್ನೂ ಹೇಳಬಾರದೆಂದು ಹೇಳಿದ್ದರು. ಆದರೆ, ಈಗ ರತಿ ಪ್ರಾಮಾಣಿಕವಾಗಿ ಆತನೊಡನೆ ಎಲ್ಲವೂ ಬಿಚ್ಚಿಟ್ಟಿದ್ದಳು. 


ವರುಣ್ ಆಕೆಯನ್ನು ತಿರಸ್ಕರಿಸುತ್ತಾನೆ ಎಂದೇ ಭಾವಿಸಿದ್ದಳು. ಆದರೆ, ಆಕೆಯ ನಂಬಿಕೆ ತಪ್ಪು ಎನ್ನುವಂತೆ ವರುಣ್ ಸುಮ್ಮನಿದ್ದು ಬಿಟ್ಟಿದ್ದನು. ಅಲ್ಲದೆ, ಆತನ ಮನಸ್ಸಿನಲ್ಲಿಯೂ ಅಲ್ಲೋಲಕಲ್ಲೋಲವೇ ಆಗುತ್ತಿತ್ತು. ಅಂತಹ ಘಟನೆಗೆ ದೂಷಿಸುವುದಾದರೂ ಯಾರನ್ನು ಎಂಬುದೇ ಆತನಿಗೆ ಅರಿಯದಾಗಿತ್ತು. ರತಿಯನ್ನು ಮೀರಿ ನಡೆದ ಘಟನೆಯಲ್ಲಿ, ಮಗಳ ಬದುಕೇ ಮುಖ್ಯವೆಂದು ಯೋಚಿಸುವ ತಂದೆ ಎಲ್ಲರ ದೃಷ್ಟಿಯಲ್ಲಿ ನಿಂತು ನೋಡಿದರೂ ಇಂತಹವರನ್ನು ತಪ್ಪಿತಸ್ಥರೆಂದು ಹೇಳಲಾಗಲಿಲ್ಲ ಅವನಿಗೆ. ಅಲ್ಲದೆ, ಆತ ಒಬ್ಬನೇ ಮಗನಾಗಿದ್ದರಿಂದ ತನ್ನ ತಂದೆ-ತಾಯಿಯರಿಗೆ ಈ ವಿಚಾರದಲ್ಲಿ ನೋವುಂಟು ಮಾಡಬಾರದೆಂದು ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರುವಂತೆ ವರ್ತಿಸುತ್ತಿದ್ದರು ವರುಣ್ ಹಾಗೂ ರತಿ.


ಮುಂದೆ ಮಂಗಳಮ್ಮನವರ ಸಾವುಂಟಾದಾಗ ವರುಣ್ ಮನೆಯ ಮಗನಂತೆ ನಿಂತು ಎಲ್ಲ ಕಾರ್ಯಗಳಲ್ಲಿಯೂ ಸಹಕಾರ ನೀಡುತ್ತಾನೆ. ಬಂದತಿಗೆ ಆತನ ವರ್ತನೆ ಒಂದು ಬಿಡಿಸಲಾರದ ಒಗಟಿನಂತಾಗುತ್ತದೆ. ವರುಗ ಆಕೆಯನ್ನು ಪ್ರೇಮಿಸಿ, ಆರಾಧಿಸುತ್ತಿದ್ದರೂ ಅದನ್ನು ಗುರುತಿಸದ ರತಿ ತನ್ನ ಸಮಸ್ಯೆಯೇ ದೊಡ್ಡದೆಂದು ಅದರಲ್ಲಿಯೇ ಮುಳುಗಿ ಹೋಗಿರುತ್ತಾಳೆ. ಅಷ್ಟಕ್ಕೂ ಆಕೆಯ ಮನಸ್ಸಿನ ಮೇಲೆ ಬಿದ್ದಿದ್ದೇನೂ, ಚಿಕ್ಕಪುಟ್ಟ ಬರೆ ಅಲ್ಲವಲ್ಲ. 


ಏಕಾಂತದಲ್ಲಿ ಹಾಗೂ ವರುಣ್ ಜೊತೆ ಇರುವಾಗಲೆಲ್ಲ ಇರುಸು-ಮುರಿಸಿನ ಭಾವನೆಯನ್ನು ಅನುಭವಿಸುತ್ತಿದ್ದ ರತಿ ಅತ್ತೆ-ಮಾವನ ತಂಪಾದ ಆರೈಕೆಯಲ್ಲಿ ಹಾಗೂ ವಾರಾಂತ್ಯಗಳಲ್ಲಿ ಬರುತ್ತಿದ್ದ ತಂಗಿಯರ ಜೊತೆಯಲ್ಲಿ ಹೊಂದಿಕೊಳ್ಳುತ್ತಿದ್ದವರನ್ನು ನೋಡಿ ಖುಷಿಪಡುತ್ತಿರುತ್ತಾಳೆ. ಮನಸ್ಸಿನಲ್ಲಿ ಆರಾಧಿಸುತ್ತಿರುತ್ತಾಳಾದರೂ ತನ್ನ ಭಾವನೆಗಳನ್ನು ಬಿಚ್ಚಿಟ್ಟು, ಹಂಚಿಕೊಳ್ಳಲು ಸಿದ್ದಲಿರುವುದಿಲ್ಲ.


ವರ್ಷವೊಂದು ಕಳೆದರೂ ತಮ್ಮ ದಾಂಪತ್ಯದ ಗುಟ್ಟನ್ನು ಇಬ್ಬರೂ ಬಿಚ್ಚಿಟ್ಟಿರುವುದಿಲ್ಲ. ವರುಣ್ ನ ಸಹೋದ್ಯೋಗಿಯ ಮಗು ವನೀತಾಳ ಹುಟ್ಟುಹಬ್ಬಕ್ಕೆ ಹೋಗಿ ಬಂದಾಗ ರತಿಯ ಮನಸ್ಸು ಬದಲಾಗಿರುತ್ತದೆ. 


ಮತಿಯ ವಿವಾಹ ಡಾಕ್ಟರ್ ವರನಾದ ಮಾಧವನೊಂದಿಗೆ ನಿಶ್ಚಯವಾಗಿ, ವಿವಾಹವಾಗಿ ಮುಂಬೈಗೆ ಹೋಗುತ್ತಾಳೆ. ನಾಲ್ಕು ತಿಂಗಳಲ್ಲಿ ಆಕೆ ತಾಯಿಯಾಗುವ ವಿಚಾರಗಳು ಈಕೆಗೆ ಪತ್ರ ಮುಖೇನ ತಲುಪುತ್ತದೆ. 


ಕೃತಿ ಹಾಗೂ ವರುಣ್ ಒಡನಾಟವನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಬದತಿಯ ಮನಸ್ಸಿನಲ್ಲಿ ಮೂಡುವ ಭಾವಗಳೇನು..? ಕೃತಿಯ ಮನೋಭಾವ ಹಾಗೂ ರತಿಯ ಮನೋಭಾವವನ್ನು ಹಿರಿಯರು ಕಂಡದ್ದೇಗೆ..? ಲವಲವಿಕೆಯ ಕೃತಿ ಎಲ್ಲರಿಗೂ ಮೆಚ್ಚುಗೆಯಾದಾಗ, ರತಿಯ ಮನಸ್ಸು ಏನೆಲ್ಲವನ್ನು ಯೋಚಿಸುತ್ತದೆ..?


ಮನಸ್ಸಿನ ಗಾಯಕ್ಕೆ ಕಾಲವೇ ಮದ್ದು ಎನ್ನುವುದು ಹೌದಾದರೂ.. ಆ ಮನಸ್ಸಿನ ಗಾಯ ಮಾಯಿಸಲು ಪ್ರೀತಿಯ ಮದ್ದು ಅಷ್ಟೇ ಅವಶ್ಯಕತೆ ಇದೆ. ರತಿಯ ಪ್ರೀತಿ ಉಳಿಯಿತೇ ಅಥವಾ ಗಗಮ ಕುಸುಮವಾಯಿತೇ..? ರತಿಯ ಮದುವೆಯ ಹೂಮಂಚದಿಂದ ಹಿಡಿದು ಕೃತಿಯ ಮದುವೆಯ ಹೂಮಂಚದವರೆಗಿನ ಕಥೆಯನ್ನು ನೀವೇ ಓದಿ ನೋಡಿ. 


ಬಹುಶಃ ರತಿಯನ್ನು ಮನೋವೈದ್ಯರ ಬಳಿ ಆಕೆಯ ತಂದೆ ಆ ಸಮಯದಲ್ಲಿಯೇ ಕರೆದೊಯ್ದಿದ್ದರೆ ಹೀಗಾಗುತ್ತಿತ್ತೇ ಎಂಬ ಪ್ರಶ್ನೆ ಇದ್ದರೂ ನಿಷ್ಕಲ್ಮಶ ಪ್ರೀತಿ ಅದಕ್ಕಿಂತ ಹೆಚ್ಚಿನ ಮುಲಾಮಾಗಬಹುದು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಸೂಕ್ಷ್ಮ ಮನಸ್ಸಿನ ಹೆಣ್ಣು ರತಿ, ಲವಲವಿಕೆಯ ಕೃತಿ ಮತ್ತು ಜೆಂಟಲ್ ಮನ್ ವರುಣ್ ಆಪ್ತವಾಗುತ್ತಾರೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ