ಭಾನುವಾರ, ಏಪ್ರಿಲ್ 26, 2026

ದುಂಬಿ ತೊರೆಯಾಸೆ (ಪುಸ್ತಕ ಯಾನ - 428)



ಪುಸ್ತಕದ ಶೀರ್ಷಿಕೆ : ದುಂಬಿ ತೊರೆಯಾಸೆ

ಲೇಖಕರು : ನೀಳಾದೇವಿ

ಪ್ರಕಾಶಕರು : ಹೇಮಂತ ಸಾಹಿತ್ಯ

ಪ್ರಥಮ ಮುದ್ರಣ : 1970

ದ್ವಿತೀಯ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 160

ಬೆಲೆ : 80 ರೂ.


"ದುಂಬಿಗೆ ಹೂವು ಬೇಕು ! ಆದರೆ ದುಂಬಿ ಹೂವಿನ ಬಳಿ ಸುಳಿ ಗೊಡಲು ಬಾಲೆಯೊಬ್ಬಳು ಬಿಡುತ್ತಿಲ್ಲ. ಅವಳ ಮುಡಿಗೇ ಆ ಹೂವು ಕ್ಷಣಕ್ಕೇ ಬೇಕಿದೆ. ಅಡ್ಡ ಬಂದ ದುಂಬಿಗೆ ಅವಳ ತೀಕ್ಷ್ಣವಾದ ಹೊಡೆತ. ಆ ಹೊಡೆತವನ್ನು ಎದುರಿಸಲಾರದೆ,  ಹೂವಿನ ಮೇಲೆ ಕುಳಿತುಕೊಳ್ಳಲೂ ಕಾತರಿಸಿ ಎರಡೂ ಕಡೆ ಮನಸ್ಸು ಹರಿದಾಡಿ ದುಂಬಿಯ ಮನ ಧಾವತಿಗೊಳಗಾಗಿದೆ. ಪುಷ್ಪಕ್ಕೂ ತನ್ನನ್ನು ಕಿತ್ತು ಪಕಳೆ ಪಕಳೆಯಾಗಿ ಹರಿಯುವ ಆ ಕೆಟ್ಟ ಬಾಲೆ ಬೇಕಿಲ್ಲ. ನೈಸರ್ಗಿಕ ಆಕರ್ಷಣೆಗೆ ದುಂಬಿಯತ್ತವೇ ಬಾಗಿದೆ. ಮನಸ್ಸು ಹಂಬಲಿಸುತ್ತಿದೆ !"


ಹಾರಿ ಬರುವ ಶಕ್ತಿ ಇಲ್ಲದ ಹೂವನ್ನು ಗಿಡಕ್ಕೆ ಅಂಟಿಕೊಂಡಿರುವಂತೆ ಬಂಧಿಸಿರುವ ವಿಧಿಯನ್ನು ಹೇಳುತ್ತಲೇ ದುಂಬಿ-ಹೂವುಗಳ ಮೂಲಕ ಪದ್ಮಾ ಹಾಗೂ ರಂಗರಾಜರ ಸಾಂಸಾರಿಕ ಕಥೆಯನ್ನು ನಿರೂಪಿಸುತ್ತಾರೆ ಲೇಖಕಿ. ಪದ್ಮಾ ಹಾಗೂ ರಂಗರಾಜ ಇಬ್ಬರೂ ತಮ್ಮ ಸಂಸಾರ ಹೂಡಲು ಅಡ್ಡಗಾಲಾಗಿತ್ತು ರಂಗರಾಜನ ತಾಯಿ ಜಾನಕಮ್ಮ.


ಕಣ್ಣಪ್ಪನವರು ಪದ್ಮಾಳಿಗೆ ಸಾಕಷ್ಟು ವರಗಳನ್ನು ಹುಡುಕಿದರೂ ಚಾಕಚಕ್ಯತೆ ಇಲ್ಲದೆ, ತಾಯಿಯಿಲ್ಲದ ಪದ್ಮಾಳ ವಿವಾಹ ಹಾಗೆಯೇ ಉಳಿದಿತ್ತು. ವರನನ್ನು ನೋಡಲು ಹೋಗಿ ಹಾಸನದಿಂದ ಮೈಸೂರಿಗೆ ರೈಲಿನಲ್ಲಿ ಬರುವಾಗ ತಮ್ಮ ಮುಂದೆ ಕುಳಿತಿದ್ದ ತಾಯಿ-ಮಗನ ಪರಿಚಯವಾಗಿ ಮುಂದೆ ಆ ಹುಡುಗನ ಜೊತೆ ಪದ್ಮಳ ವಿವಾಹ ನಿಶ್ಚಯವಾಯಿತು. ಮೊದಮೊದಲಿಗೆ ಒಳ್ಳೆಯವರಂತೆಯೇ ಕಂಡ ಜಾನಕಮ್ಮ ನಂತರ ತಮ್ಮ ನಿಜರೂಪ ತೋರಿಸಲು ಶುರು ಮಾಡಿದ್ದರು. ಎಲ್ಲರೂ ಬಾಯಿ ಬಿಟ್ಟು ವರದಕ್ಷಿಣೆ, ವರೋಪಚಾರ ಕೇಳಿದರೆ ಇವರು ಆ ಹೆಸರಿನಲ್ಲಿ ಕೇಳದೆ ವಂಶಪಾರಂಪರ್ಯವಾಗಿ ಬಂದ ಚಿನ್ನ, ಬೆಳ್ಳಿಗಳೆಲ್ಲವನ್ನೂ ತಮ್ಮ ವಶ ಮಾಡಿಕೊಂಡಿದ್ದರು. ಜೊತೆಗೆ ಜಾನಕಮ್ಮನವರ ಮಡಿಯ ವಿಚಾರವಂತೂ ಅವರ ಅನುಕೂಲಶಾಸ್ತ್ರ, 


ಪದ್ಮಾಳ ಸೋದರಮಾವ ಕಿಟ್ಟುವಿಗೆ ಮೊದಲೇ ಈ ವಿಚಾರ ತಿಳಿದಿದ್ದರೆ ವರನ ಕುರಿತು ವಿಚಾರಿಸುತ್ತಿದ್ದನೇನೋ.. ಆದರೆ, ಹೆಚ್ಚು ಕಾಲಾವಕಾಶ ಸಿಗದೆ ಎಲ್ಲವೂ ತರಾತುರಿಯಲ್ಲಿಯೇ ನಿಶ್ಚಯವಾಯಿತು. ಸಾಲ ಮಾಡಿ ಮಗಳಿಗೆ ವಜ್ರದ ಬೆಂಡೋಲೆಯನ್ನು ಹಾಕಿದರು ಕಣ್ಣಪ್ಪನವರು. ತಾನು ಲಾಯರ್ ಆಫೀಸಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದ. ಆದರೆ, ರಂಗರಾಜನ ಕೆಲಸ ಅಲ್ಲಿ ಗುಮಾಸ್ತನದ್ದಾಗಿತ್ತು, ಇದನ್ನು ತಿಳಿದರೂ ಕಿಟ್ಟುವಿಗೆ ಹೇಳಲಾಗಲಿಲ್ಲ. 


ಮಗ, ಸೊಸೆಯೊಟ್ಟಿಗೆ ಸಂಸಾರ ಹೂಡಲು ಕಣ್ಣಪ್ಪನವರನ್ನು ಹಣ ಕೇಳಿದರು ಜಾನಕಮ್ಮ. ಅಲ್ಲಿಂದ ಹಣ ಸಿಗದ್ದಕ್ಕೆ ಜಾನಕಮ್ಮ ಅವರಿಬ್ಬರ ನಡುವೆ ಅಡ್ಡಗಾಲಾದರು. ಇನ್ನು ಊರಿನಲ್ಲಿಯೂ ವಿಚಿತ್ರ ಪರಿಸ್ಥಿತಿ. ಯಾರೂ ಇವರನ್ನು ತಮ್ಮೊಡನೆ ಸೇರಿಸುತ್ತಿರಲಿಲ್ಲ. ಅಲ್ಲದೆ, ಸುಳ್ಳು ಹೇಳಿ ತಮ್ಮದೆಂದು ಹೇಳಿಕೊಂಡ ಹೊಲ, ಆಸ್ತಿಯೂ ಇವರದ್ದಾಗಿರಲಿಲ್ಲ. ಬದಲಾಗಿ ಆಕೆ ಹಣವನ್ನು ಬಡ್ಡಿಗೆ ಬಿಟ್ಟು ಅದರಿಂದ ಬಂದ ಸಂಪಾದನೆಯಲ್ಲಿ ಬದುಕುತ್ತಿದ್ದರು.


ಯೌವ್ವನದ ದಿನಗಳು ಹಾಗೆಯೇ ಕಳೆದು ಹೋಗುತ್ತಿದ್ದವು. ಇದ್ದಕ್ಕಿದ್ದಂತೆಯೇ ಒಂದು ದಿನ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದ ರಂಗರಾಜನನ್ನು ಕಂಡು ಪದ್ಮಾಳಿಗೆ ಅಚ್ಚರಿಯಾಯಿತು. ನಂತರ ನಿಜ ವಿಚಾರ ತಿಳಿದು ದೊಡ್ಡ ಕಂದಕವೂ ಉಂಟಾಯಿತು. ಮಡಿಯ ಹೆಸರಲ್ಲಿ ವಿದ್ಯಾವಂತೆಯಾಗಿದ್ದ ಹಾಡುಗಾರ್ತಿಯಾಗಿದ್ದ ಪದ್ಮಾಳನ್ನು ಕಟ್ಟುಪಾಡಿನೊಳಗೆ ಕೂಡಿ ಹಾಕಿದ್ದರು ಜಾನಕಮ್ಮ. 


ಮದುವೆಯಾದ ಎರಡು ವರ್ಷಗಳಲ್ಲಿ ಒಮ್ಮೆಯೂ ತವರಿಗೆ ಹೋಗಿರಲಿಲ್ಲ ಪದ್ಮಾ. ಅಕ್ಕರೆಯಿಂದ ಕರೆಯಲು ತಾಯಿಯೂ ಬದುಕಿರಲಿಲ್ಲ. ಮಗಳನ್ನು ತವರಿಗೆ ಕರೆಸಿಕೊಂಡರೆ ಮತ್ತೆ ಹಣದ ಬೇಡಿಕೆಯಿಟ್ಟು ಕರೆದೊಯ್ಯದೆ ಉಳಿದರೆ ಎಂಬ ಭಯ ಕಣ್ಣಪ್ಪನವರಿಗೆ. ಜಾನಕಮ್ಮ ಹಾಗೂ ರಂಗರಾಜರೇ ಮುಂದಾಗಿ ಆಕೆಯನ್ನು ತವರಿಗೆ ಕಳುಹಿಸಲು ನಿಂತರಾದರೂ.. ಕಿಟ್ಟು ಅದೇ ಸಮಯಕ್ಕೆ ಊರಿಗೆ ಬರುತ್ತಿದ್ದದ್ದು ರಂಗರಾಜನ ಮನಸ್ಸಿನಲ್ಲಿ ಅನುಮಾನದ ಬೀಜವನ್ನು ಹುಟ್ಟಿಸಿತ್ತು. ಅದಕ್ಕೂ ಮೂಲ ಜಾನಕಮ್ಮನೇ..


ಕಳೆಕಳೆಯಾಗಿದ್ದ ಪದ್ಮಾ ಈಗ ಅವಳೆಯೇ ಎಂದು ಗುರುತಿಸಲಾಗದಷ್ಟು ಬದಲಾಗಿದ್ದಳು. ಬಸವಳಿದಿದ್ದ ಅವಳನ್ನು ತವರಿನಲ್ಲಿ ಆರೈಕೆ ಮಾಡಿದ ಸಂದರ್ಭದಲ್ಲಿ ತಿಳಿದದ್ದು ಆಕೆ ಗರ್ಭಿಣಿ ಎಂದು. ಮೈಸೂರಿನಲ್ಲಿ ಡಾ|| ವತ್ಸಲಾ ಬಳಿಯಲ್ಲಿ ಚಿಕಿತ್ಸೆಗೂ ಹೋಗಿ ಬಂದಳು. 


ಮತ್ತೆ ಪದ್ಮಾಳನ್ನು ಅತ್ತೆ ಮನೆಗೆ ಸೇರಿಸಲು ಹೊರಟ ಕಣ್ಣಪ್ಪನವರಿಗೆ ದೊಡ್ಡ ಆಘಾತವೇ ಕಾದಿತ್ತು. ಊರಿನವರೆಲ್ಲರೂ ಜಾನಕಮ್ಮನವರು ಹಾಗೂ ರಂಗರಾಜನನ್ನು ದೂರವಿಟ್ಟ ಕಾರಣ ಎಳೆಎಳೆಯಾಗಿ ತಿಳಿಯುತ್ತಾ ಬಂದಿತ್ತು.


ರಂಗರಾಜನಿಗೆ ಪದ್ಮಾ ಮೂರನೆಯ ಮಡದಿ ಎಂಬ ಸತ್ಯವೇ ಆಘಾತಕಾರಿಯಾಗಿತ್ತು. ಅದು ಮೊದಲಿಬ್ಬರೂ ಬದುಕಿರುವಾಗಲೇ ಪದ್ಮಾಳನ್ನು ವಿವಾಹ ಮಾಡಿಕೊಂಡಿದ್ದ.


ಕಟ್ಟುಪಾಡಿನಲ್ಲಿ ಸಿಕ್ಕಿಸಿ ಬಸವಳಿಸಲು ಹೊರಟರವರನ್ನು ಮೆಟ್ಟಿ ನಿಂತು ವೈದ್ಯಳಾಗಿ ತನ್ನ ಬದುಕು ಕಟ್ಟಿಕೊಂಡಿದ್ದಳು ವತ್ಸಲಾ, ಅವಳೇ ಪದ್ಮಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದು, ಆದರೆ, ಇಬ್ಬರಿಗೂ ಪರಸ್ಪರರ ಸಂಬಂಧ ತಿಳಿದಿರಲಿಲ್ಲವಷ್ಟೇ.


ಏಕೈಕ ಮಗಳಾಗಿ ಬೆಳೆದಿದ್ದ ನಾಗಮಣಿ ಕಪ್ಪಾಗಿದ್ದರೂ.. ತಂದೆ-ತಾಯಿಯರ ಕಣ್ಮಣಿ. ಹಣದ ದುರಾಸೆಗೆ ಬಿದ್ದು ಆಕೆಯನ್ನು ತವರಿಗಟ್ಟಿದ್ದರು. ಅವಳಿಗೆ ಈಗಾಗಲೇ ಹೆಣ್ಣುಮಗುವಿತ್ತು. ಆದರೆ ನಾಗಮಣಿಯ ಅಂತ್ಯ ದುರಂತವಾಗಿತ್ತು. 


ಪಾಪನನ್ನು ಮನೆ ಸೇರಿಸಲು ಬಂದವರಿಗೆ ಪದ್ಮಾ ಹಾಗೂ ಕಣ್ಣಪ್ಪನವರ ಭೇಟಿಯಾಗಿತ್ತು. ಅಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಈಗ ಬೆಳಕಿಗೆ ಬಂದಿತ್ತು.


ಪಾಪಳನ್ನು ಪದ್ಮಾಳೇ ತಾಯಿಯಾಗಿ ಪೋಷಿಸುವ ನಿರ್ಧಾರ ತಳೆಯುತ್ತಾಳಾದರೂ.. ಅದು ಸುಲಭವಿತ್ತೇ..? ಆಕೆಯ ಮಗು ಏನಾಯ್ತು..? ಅವಳ ಆ ನಿರ್ಧಾರಕ್ಕೆ ಪಾಪನನ್ನು ಕಳಿಸಲು ಬಂದಿದ್ದವರು ಒಪ್ಪಿದರೆ..? ಜಾನಕಮ್ಮನ ದುರಾಸೆಯಲ್ಲಿ ರಂಗರಾಜನ ಪಾಪಕೃತ್ಯದ ಪಾಲು ಎಷ್ಟಿತ್ತು..? ಎಲ್ಲರಿಗೂ ಡಾ|| ವತ್ಸಲಳಂತಹ ಬದುಕು ಸಿಗುವುದೇ..? ವತ್ಸಲ ಈಗ ಹೇಗಿದ್ದಳು..? ಅವಳಿಗೆ ಈ ಎಲ್ಲ ವಿಚಾರದ ಅರಿವಾಯಿತೇ..? ಪದ್ಮಾಳ ತವರು ಮನೆಯಲ್ಲಿ ಆಕೆಗೆ ಸಿಕ್ಕ ಪ್ರತಿಕ್ರಿಯೆ ಏನು..? ಜಾನಕಮ್ಮ ಹಾಗೂ ರಂಗರಾಜನಿಗೆ ತಕ್ಕ ಶಾಸ್ತಿಯಾಯಿತೇ..?


ಈ ಕಾದಂಬರಿ ಮೊದಲ ಮುದ್ರಣವಾಗಿರುವುದು 1970ರಲ್ಲಿ. ಅಂದಿನ ಮುನ್ನುಡಿಯಲ್ಲಿಯೇ ಈ ಕಾದಂಬರಿಯ ಕಾಲ ಒಂದೂವರೆ ದಶಕ ಹಿಂದಿನದ್ದು ಎಂದು ಲೇಖಕಿ ಉಲ್ಲೇಖಿಸಿದ್ದಾರೆ.  ಅಂತಹ ಕಾಲಘಟ್ಟವನ್ನು ದಾಟಿ ಈಚೆಗೆ ಬಂದಿದ್ದೇವಾದರೂ.. ಹೆಣ್ಣುಮಕ್ಕಳ ಮದುವೆಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎನ್ನುವ ವಿಚಾರ ಎಂದಿಗೂ ಬದಲಾಗಿಲ್ಲ. ಹೆಣ್ಣುಮಕ್ಕಳ ಕಷ್ಟ-ನಿಷ್ಠೂರಗಳು ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿದೆ ಎನ್ನಿಸಿತು.


ವತ್ಸಲಾ, ನಾಗಮಣಿ ಹಾಗೂ ಪದ್ಮಾ ಈ ಮೂವರು ಹೆಣ್ಣುಮಕ್ಕಳ ವಿವಿಧ ಬವಣೆಗಳು, ವಿವಿಧ ವರ್ತನೆಗಳು ಅವರು ಬೆಳೆದ ಪರಿಸರ, ಕಷ್ಟವನ್ನು ಎದುರಿಸಿದ ರೀತಿ ಎಲ್ಲವೂ ವಿಭಿನ್ನ.


ಇಂದಿಗೂ ಬೆರಳೆಣಿಕೆಯಷ್ಟು ವಿವಾಹಗಳಲ್ಲಿ ಇಂತಹ ಮೋಸ ನಡೆಯಬಹುದಾದರೂ.. ಇಂದು ಇದಕ್ಕೆ ನ್ಯಾಯಾಂಗದ ರಕ್ಷಣೆ, ಶಿಕ್ಷೆ ಇದೆ. ಆದರೆ, ಮನೆಯಲ್ಲಿ ನಡೆಯುವ ಶೋಷಣೆಗಳಿಗೆ ಹಲವಾರು ಮುಖಗಳು. ಅಂತಹ ಕಾಲಘಟ್ಟ ಹಾಗೂ ಸಮಸ್ಯೆಯನ್ನು ದಿಟ್ಟವಾಗಿ ತೆರೆದಿಟ್ಟಿರುವ ಕಾದಂಬರಿ ಇದು.  


ಹೆಣ್ಣುಮಕ್ಕಳು ವೈವಾಹಿಕ ಸಮಸ್ಯೆಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಧನಾತ್ಮಕವಾಗಿ ಕಾಣುವಂತೆ ಹಾಗೂ ಪ್ರೇರೇಪಕವಾಗುವಂತೆ ಕಟ್ಟಿಕೊಟ್ಟಿರುವ ಕಾದಂಬರಿ ಇದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ