ಪುಸ್ತಕದ ಶೀರ್ಷಿಕೆ : ಪುಟ್ಟಿಗೊಂದು ಪುಟ್ಟಿ
ಲೇಖಕರು : ನಾಗತಿಹಳ್ಳಿ ಚಂದ್ರಶೇಖರ
ಪ್ರಕಾಶಕರು : ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ
ಪ್ರಥಮ ಮುದ್ರಣ : 2025
ಪುಟಗಳು : 132
ಬೆಲೆ : 180 ರೂ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ತಮ್ಮ ತಾಯ್ತನ ಹಾಗೂ ಮಕ್ಕಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದಿದ್ಧವಳಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಪುಟ್ಟಿಗೊಂದು ಪುಟ್ಟಿ ಪುಸ್ತಕ ತಂದೆ ಹಾಗೂ ಹೆಣ್ಣುಮಕ್ಕಳ ಆಪ್ತತೆಯ ಸುಂದರ ದರ್ಶನ ಮಾಡಿಸಿತು.
"ಮಗು ಒಂದು ತಿಂಗಳ ಮಗುವಾದರೆ ನಾನೂ ಒಂದು ತಿಂಗಳ ಅಪ್ಪ" ಎನ್ನುವ ಕುವೆಂಪು ಅವರ ಮಾತಿನಂತೆ ಇಲ್ಲಿ ತಂದೆಯಾಗಿ ತಾನು ಅರಳುತ್ತಾ.. ಮಗುವನ್ನು ಕಾಪಾಡುತ್ತಾ ಹೋಗುವ, ಮಗುವಿನ ಜೊತೆಗೆ ಮಗುವಾಗುವ ಪರಿ ಕಾಣುತ್ತದೆ. ಸಾಮಾನ್ಯವಾಗಿ ತಾಯಿಯೇ ಮಗುವಿನ ಲಾಲನೆ-ಪಾಲನೆ ಮಾಡಬೇಕು ಎಂಬ ದೃಷ್ಟಿಕೋನವೇ ಹೆಚ್ಚಿರುವ ದಿನಮಾನಗಳಲ್ಲಿ ಈ ಪರಿ ಬೆರಗು ಹುಟ್ಟಿಸುತ್ತದೆ. ತಾಯಿ ಉದ್ಯೋಗಸ್ಥೆಯಾಗಿ ಹೊರಗೆ ದುಡಿಯುವಾಗ, ತಂದೆ ತನ್ನ ಕೆಲಸದಲ್ಲಿಯೇ ವ್ಯಸ್ತನಾಗಿರುವಾಗ ಅಂತಹ ಮನೆಗಳಲ್ಲಿ ಮಕ್ಕಳು ಹೇಗೆ ಬೆಳೆಯುತ್ತಾರೆ ಎನ್ನುವ ಅನುಮಾನವಿದ್ದರೆ ಇಲ್ಲಿ ಅಪ್ಪನ ಅಪೂರ್ವ ಪರಿ ಸೆಳೆಯುತ್ತದೆ. ಜೊತೆಗೆ ಮಕ್ಕಳ ಪಾಲನೆಯಲ್ಲಿ ಅವರಿಗೆ ಕಥೆ ಹೇಳುವ, ಹಾಡು ಕಟ್ಟುವ ನಾಗತಿಹಳ್ಳಿಯವರು ಕಾಣುತ್ತಾರೆ.
ನಾಗತಿಹಳ್ಳಿಯವರಿಗೆ ಸಿಹಿ, ಕನಸು ಎಂಬ ಇಬ್ಬರು ಹೆಣ್ಣುಮಕ್ಕಳು. ಕನಸು ಹುಟ್ಟುವ ಸಮಯದಿಂದಲೂ.. ಆಕೆಗೊಂದು ಪುಟ್ಟಿ ಹುಟ್ಟುವ ಸಮಯದವರೆಗೂ ನಾಗತಿಹಳ್ಳಿಯವರ ಭಾಗಶಃ ಆತ್ಮಕಥನದಂತೆ ಹಾಗೂ ಕೌಟುಂಬಿಕ ಅನುಭವ ಕಥನದಂತೆಯೂ ಇದು ಭಾಸವಾಗುತ್ತದೆ. ಇವರ ವೈಯಕ್ತಿಕ ಬದುಕಿನ ಪರಿಚಯವಿರುವವರಿಗೆ ಇಲ್ಲಿರುವ ಹಲವರ ಹೆಸರುಗಳು ಪರಿಚಿತ. ಆದರೆ, ಅವರ ವೈಯಕ್ತಿಕ ಬದುಕಿನ ಪರಿಚಯವಿಲ್ಲದವರಿಗೆ ಕೆಲವು ಖ್ಯಾತನಾಮರ ಹೆಸರನ್ನು ಹೊರತುಪಡಿಸಿ ಉಳಿದವರು ಇಲ್ಲಿ ಪರಿಚಯವಾಗುತ್ತಾರೆ.
1989ರ ಪ್ರಜಾವಾಣಿಯಲ್ಲಿ 'ಕನಸು ಹುಟ್ಟಿತು ಕೇಳಾ' ಎಂಬ ಸಣ್ಣ ಕಥೆಯೊಂದು ಪ್ರಕಟವಾಗಿತ್ತು. ಅದರಲ್ಲಿ ನಾಗತಿಹಳ್ಳಿಯವರು ಕನಸು ಪಡಿಮೂಡಿದ ದಿನಗಳಿಂದ ಕನಸು ಹುಟ್ಟಿದವರೆಗಿನ ಚಿತ್ರಣವಿದೆ. ವಾಸ್ತವವಾಗಿ ಯೋಚಿಸುವ ಅವರ ಪತ್ನಿ ಶೋಭಾ ಹಾಗೂ ಭಾವುಕತೆಯ ಇವರು ಇಬ್ಬರಲ್ಲಿಯೂ ನಡೆಯುವ ಮಾತು-ಕಥೆಗಳು, ಗಂಡು-ಹೆಣ್ಣು ಇಬ್ಬರಿಗೂ ಹೊಂದುವಂತಹ ಹೆಸರಾದ ಕನಸು ಎಂಬ ಹೆಸರನ್ನು ಕನಸು ಕಟ್ಟಿಕೊಂಡ ದಿನಗಳಿವೆ. ಇದನ್ನು ಹೇಳುತ್ತಾ ಮಗುವಿನ ಹುಟ್ಟಿನೊಂದಿಗೆ ಪ್ರಯಾಣ ಮಾಡುವ ಅನುಭವ ಎಷ್ಟು ಸೊಗಸಾದದು ಎನ್ನುತ್ತಾ.. ಹೆತ್ತವರೇ ಕಂದಮ್ಮಗಳಿಗೆ ಋಣಿಯಾಗಿರಬೇಕು ಎನ್ನುತ್ತಾರೆ.
ಶೋಭಾ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಇಬ್ಬರದ್ದೂ ಅಂತರ್ಜಾತೀಯ ವಿವಾಹ. ಕನಸು ಪುಟ್ಟಿ ಜಾತಿಗೋಡೆಗಳನ್ನು ಕೆಡವಿದ್ದು ಹೇಗೆ ಎಂಬುದನ್ನು ಹೇಳುತ್ತಲೇ.. ಅವರ ಹಳ್ಳಿಮನೆಯ ಜಾತ್ರೆಯ ಜೊತೆಗೆ ವಿದೇಶಯಾತ್ರೆಯನ್ನು ಮಾಡಿಸಿದ ಚಿತ್ರಣವಿಲ್ಲಿದೆ.
ನಾಗತಿಹಳ್ಳಿಯವರು ಕಾಲೇಜು ಮುಗಿಸಿ ಕನಸುವಿನ ಅಜ್ಜಿ ಮನೆಗೆ ಓಡೋಡಿ ಬರುವುದು, ಪುಟ್ಟಿ ಡಾರ್ಲಿಂಗ್ ಎಂದು ಕೂಗುವುದು, ಶೂ ಹಾಕಿಕೊಳ್ಳದೆ ಪುಟ್ಟಿ ಓಡಿ ಬರುವುದು ಹೀಗೆ.. ನಂತರ ಅವರೇ ಕಟ್ಟಿದ್ದ ಜೋ ಜೋ ಹಾಡುತ್ತಾ, ಕೆಲವೊಮ್ಮೆ ಅವರೇ ಮಲಗಿ ಬಿಡುವುದು ಹೀಗೆ ಮಗುವಿನ ಜೊತೆಗೆ ಮಗುವಾದುದನ್ನು ಹೇಳಿರುವ ಪರಿ ಇಲ್ಲಿದೆ.
ಸೋತಂತೆ ನಟಿಸಿ ಮಕ್ಕಳನ್ನು ಗೆಲ್ಲಿಸುವ ಆಟವನ್ನು ಹೆತ್ತವರು ಅಭಿನಯಿಸಬೇಕು ಎನ್ನುತ್ತಲೇ ಅಪ್ಪ ತನಗೆ ಮಾತ್ರ ಸೋಲಬೇಕು ಎನ್ನುವ ಕನಸುವಿನ ಆಲೋಚನೆಯನ್ನು ಚೆಂದವಾಗಿ ಹೇಳಿದ್ದಾರೆ.
ನಾಗತಿಹಳ್ಳಿಯವರ ಸಿನಿಮಾ ಎಂದರೆ ಎಂದಿಗೂ ತಟ್ಟನೆ ನೆನಪಾಗುವುದು ಅಮೆರಿಕ ಅಮೆರಿಕ. ಪುಟ್ಟಿಯ ಏಳನೆಯ ವಯಸ್ಸಿನಿಂದ ಶುರುವಾಗುವ ಈ ಕನಸು ಅವಳ ಹಾಗೂ ಲೇಖಕರ ಇಬ್ಬರ ವ್ಯಕ್ತಿತ್ವದ ಭಾಗವಾಗಿರುವುದನ್ನು, ಅಪ್ಪ-ಅಮ್ಮ-ಮಗಳು ಕೂಡಿ ಕಂಡಿರುವ ಸಂಕಟ, ಸಂಭ್ರಮ, ತಲ್ಲಣಗಳನ್ನು ಹೇಳಿದ್ದಾರೆ.
ಶೋಭಾ ಅವರು ವಿದೇಶದಲ್ಲಿ ಕೆಲಸ ಕೆಲಸ ಮಾಡುವ ಸಂದರ್ಭದಲ್ಲಿ ಕನಸು ಅಮ್ಮನನ್ನು ಮಿಸ್ ಮಾಡಿಕೊಳ್ಳದಂತೆ ನೋಡಿಕೊಳ್ಳುತ್ತಾ.. ಕನಸುವಿನ ಜೊತೆಗೆ ಹಾರಿದ ಮೊದಲ ವಿದೇಶಿ ಯಾತ್ರೆ, ಸ್ಯಾನ್ ಫ್ರಾನ್ಸಿಸ್ಕೋ ತಲುಪುವವರೆಗೂ ಹಾಗೂ ತಲುಪಿದ ನಂತರ ಅಲ್ಲಿ ಬದಲಾದ ಅವರ ಹಾಗೂ ಪುಟ್ಟಿಯ ದಿನಚರಿಗಳನ್ನು ಹೇಳುತ್ತಾರೆ.
ಭಾರತದಲ್ಲಿನ ಶಾಲೆಗೂ ಅಲ್ಲಿನ ಶಾಲೆಗೂ ಇರುವ ವ್ಯತ್ಯಾಸ, ಕನಸುವಿನ ಕ್ಲಾಸ್ ಟೀಚರ್, ಕನಸುವಿನ ಆಲೋಚನೆ ಬದಲಾದದ್ದು, ಮತ್ತೆ ಆಕೆಯನ್ನು ಅರಬಿಂದೋ ಶಾಲೆಗೆ ಸೇರಿಸಿದ ಪ್ರಸಂಗಗಳನ್ನು ಹೇಳಿದ್ದಾರೆ.
"ಆರಂಭಿಕ ವರ್ಷಗಳಲ್ಲಿ ಜೋಕರ್ ನಂತೆ ನಗಿಸುವ ತಂದೆಯಾಗಿದ್ದವನು, ಸಾವಕಾಶವಾಗಿ ಟೀಚರ್ ಆಗತೊಡಗಿದೆ. ಮಕ್ಕಳಿಗೆ ಸ್ನೇಹಶೀಲ ಶಿಕ್ಷಕರಾಗುವುದು ಬಹಳ ಮುಖ್ಯ" ಎನ್ನುತ್ತಾರೆ.
ಕನಸು ಪುಟ್ಟಿ ಸಾವಕಾಶವಾಗಿ ಸ್ವತಂತ್ರ್ಯವಾಗತೊಡಗಿದ್ದು, ಸೈಕಲ್ ಚೆನ್ನಾಗಿ ಕಲಿತದ್ದು, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಗಂಭೀರವಾಗಿ ಓದುತ್ತಾ ಕುಳಿತದ್ದು.. ಹೀಗೆ ಎಲ್ಲವನ್ನು ಹೇಳುತ್ತಾರೆ.
ನವೋದಯ ಕಳೆದು ನವ್ಯ ಬಂದಂತೆ ಎನ್ನುತ್ತಾ ಸಿಹಿ ಪುಟ್ಟಿ ಹುಟ್ಟಿದ್ದನ್ನು ಹೇಳುತ್ತಾರೆ. ಎರಡನೆ ರಾಜಕುಮಾರಿ ಅವತರಿಸುತ್ತಿದ್ದಂತೆ, ಮೊದಲ ರಾಜಕುಮಾರಿ ತಾವು ಪುಟ್ಟಿ ಎಂಬುದನ್ನು ಮರೆತು ಲಿಟಲ್ ಮದರ್ ಆಗಿ ಭಡ್ತಿ ಪಡೆದ ಪರಿ ಇಲ್ಲಿದೆ.
ಕನಸು ಹಾಗೂ ಸಿಹಿ ಇಬ್ಬರ ನಡುವೆಯೂ 10 ವರ್ಷದ ಅಂತರ. ಕನಸು ಪುಟ್ಟಿಯ ಬಾಲ್ಯದ ದಿನಗಳು ಸಿಹಿ ಪುಟ್ಟಿಯಿಂದ ಪುನರಾವರ್ತನೆಯಾಗುತ್ತಿದ್ದ ಪರಿಯನ್ನು ಅನುಭವಿಸುತ್ತಾರೆ. ಅವರು ಹಾಗೂ ಕನಸು ಇಬ್ಬರೂ ಸೇರಿ ಸಿಹಿಯನ್ನು ರೇಗಿಸುವುದನ್ನು ಸಿಹಿಯಾಗಿಯೇ ಹೇಳುತ್ತಾರೆ.
ಕನಸು ಪುಟ್ಟಿಯ ಮೇಲೆ ಸಿಹಿ ಪುಟ್ಟಿ, ಸಿಹಿ ಪುಟ್ಟಿಯ ಮೇಲೆ ಕನಸು ಪುಟ್ಟಿ ಆಗಾಗ ಚಾಡಿ ಹೇಳುತ್ತಿದ್ದ ವಿಚಾರಗಳು ಇವರಿಗೆ ಹೇಗನಿಸುತ್ತಿತ್ತು ಎಂಬುದನ್ನು ಹೇಳುತ್ತಾರೆ.
ಸಿಹಿಕನಸು ರಂಗಮಂದಿರ ಹಾಗೂ ಟೆಂಟ್ ಸಿನಿಮಾ ಶಾಲೆ ಎರಡೂ ಮಕ್ಕಳಂತೆಯೇ ಬೆಳೆದ ಹಾಗೂ ಆವರಿಸಿದ ಪರಿ ಇಲ್ಲಿದೆ.
ಹೆತ್ತವರು ಮಾತ್ರ ಮಕ್ಕಳಿಗೆ ಗುರುಗಳಲ್ಲ, ಮಕ್ಕಳು ಸಹ ಹೆತ್ತವರಿಗೆ ಗುರುಗಳಾಗುತ್ತಾರೆ. ಅವರ ಎರಡು ಸಂಧಿಗ್ಧ ಪರಿಸ್ಥಿತಿಗಳಲ್ಲಿ ಸಿಹಿ ಪುಟ್ಟಿ ಗುರುವಾಗಿದ್ದು, ಮಾರ್ಗದರ್ಶಕಗಳಾಗಿದ್ದು ಹೇಗೆ ಎನ್ನುವುದನ್ನು ಹೇಳುವಾಗ ಇದುದ್ದನ್ನು ಇದ್ದುದಂತೆಯೇ ಸ್ವೀಕರಿಸುವ ವಾಸ್ತವತೆಯನ್ನು ಕಲಿಸುವ ಮಕ್ಕಳು ಬೆಳೆದ ಪರಿಯೇ ಅನನ್ಯವಲ್ಲವೇ ಎನಿಸುತ್ತದೆ.
ಮಕ್ಕಳ ಮದುವೆ ಹೆತ್ತವರ ಕಣ್ಣಲ್ಲಿ ನಿಜಕ್ಕೂ ಕನಸು ನನಸಾಗುವ ಸುದಿನ. ಕನಸು ಮದುವೆಯಾದ ದಿನ ಹಾಗೂ ಆ ಮದುವೆಗೆ ವರನ ಆಯ್ಕೆ ಹೀಗೆ ಎಲ್ಲವನ್ನು ಹೇಳುತ್ತಾರೆ. ಕನಸುವಿನ ಮದುವೆ ನಡೆದ ರೀತಿ ಹಾಗೂ ಕನಸುವಿನ ಭವಿಷ್ಯದಲ್ಲಿ ಲೀಲಾ ಪುಟ್ಟಿ ಬಂದ ಭವಿಷ್ಯ ಕಾಣುತ್ತದೆ.
ಪಯಣ ಪಯಣ ಪಯಣ
ನನ್ನ ಸಿಹಿಯ ಪಯಣ
ಎನ್ನುತ್ತಾ ಸೂರ್ಯಗೀತೆಯಂತೆಯೇ ಸಿಹಿಯ ಇನ್ನೊಂದು ಪಯಣವನ್ನು ಹೇಳುತ್ತಾರೆ.
ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ಚೋಟಾ ಭೂಮಿಕಳಾಗಿ ಕನಸು ಪುಟ್ಟಿ ಕಾಣಿಸಿಕೊಂಡಂತೆ, ಸಿಹಿ ಪುಟ್ಟಿ ಒಂದೆರಡು ಶಾಟ್ ಗಳಲ್ಲಿ ಅಮೃತಧಾರೆಯಲ್ಲಿ ಕಾಣಿಸಿಕೊಂಡದ್ದನ್ನು ಹೇಳುತ್ತಾರೆ.
ಪುಟ್ಟಿಗೊಂದು ಪುಟ್ಟಿಯಾದ ಲೀಲಾಳ ಕುರಿತ ಪುಟ್ಟ ಪದ್ಯವನ್ನು ಕಟ್ಟಿದ್ದಾರೆ.
ಲೀಲ ಲೀಲ ಲೀಲ
ಎಂಥ ಮೋಹ ಜಾಲ!
ಕನಸಿಗೊಂದು ಬಾಲ
ಲೀಲ ನಮ್ಮ ಜೀವ
ಲೀಲ ನಮ್ಮ ಪ್ರಾಣ
ಲೀಲ ಲೀಲ ಲೀಲ
ಕನಸು ಪುಟ್ಟಿಗೂ ಇವರಿಗೂ ಮೊದಲ ಬಾರಿಗೆ ಜೋರು ಜಗಳವಾದದ್ದು ಲೀಲಾ ಪುಟ್ಟಿಯ ವಿಷಯಕ್ಕೆ ಎನ್ನುತ್ತಾ ಮಗುವಿನ ಸ್ಲೀಪ್ ಟ್ರೈನಿಂಗ್ ಕುರಿತಾಗಿ ಕನಸು ಹಾಗೂ ನಾಗತಿಹಳ್ಳಿಯವರ ಎರಡು ನೋಟಗಳನ್ನೂ ಹೇಳುತ್ತಾರೆ. ಯೋಚನೆಗಳು ಅಪ್ಡೇಟ್ ಆಗುವ ಪರಿ ಒಂದೆಡೆ ಕಂಡರೆ, ಅದನ್ನು ಸ್ವೀಕರಿಸಲು ಒದ್ದಾಡುವ ಪರಿ ಇನ್ನೊಂದೆಡೆ ಕಾಣುತ್ತದೆ.
ಇದು ಪುಟ್ಟಿಯರ ಕೆಲವು ನೋಟಗಳಷ್ಟೇ.. ಇಲ್ಲಿ ಹಲವಾರು ಭಾಗಗಳು ಚಂದವಾಗಿ ಕಾಣಸಿಗುತ್ತವೆ. ನಾಗತಿಹಳ್ಳಿಯವರ ಅನುಭವಕಥನ ಸಿಗುತ್ತದೆ.
"ಈ ಕೃತಿಯನ್ನು ಕನಸು ಪುಟ್ಟಿ ಬರೆದ ಕಾವ್ಯದೊಂದಿಗೆ ಅಂತ್ಯಗೊಳಿಸುತ್ತಿದ್ದೇನೆ. ಆದರೆ, ಇದು ಅಂತ್ಯವಲ್ಲ. ಇಲ್ಲಿ ಯಾವುದಕ್ಕೂ ಆರಂಭವೂ ಇಲ್ಲ. ಅಂತ್ಯವೂ ಇಲ್ಲ. ಇರುವುದು ಒಂದು ಚಲನೆಯ ಸ್ಥಿತಿ. ಒಂದು ಚಲಿಸುವ ಅವಸ್ಥೆ. ನಿರಂತರ ಬದಲಾಗುತ್ತಿರುವ ಅವಸ್ಥೆ." ಎನ್ನುತ್ತಾರೆ
ನನಗೆ ಹಿತವೆನಿಸಿದ ಇಷ್ಟವಾದ ಕೆಲ ವಿಚಾರಗಳನ್ನು ಮಾತ್ರವೇ ಇಲ್ಲಿ ಪ್ರಸ್ತಾಪಿಸಿದ್ದೇನೆ. ಇಂತಹ ಹಲವಾರು ಸಂಗತಿಗಳನ್ನು ನಿಮ್ಮದಾಗಿಸಿಕೊಳ್ಳಲು ಈ ಪುಸ್ತಕವನ್ನು ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ