ಪುಸ್ತಕದ ಶೀರ್ಷಿಕೆ : ಶಿವ ತಾಂಡವ
ಲೇಖಕರು : ವಿಜಯ ಸಾಸನೂರ
ಪ್ರಕಾಶಕರು : ಐ ಬಿ ಎಚ್ ಪ್ರಕಾಶನ
ಪ್ರಥಮ ಮುದ್ರಣ : 1985
ಪುಟಗಳು : 184
ಇದು ನಾನು ಓದಿದ ವಿಜಯ ಸಾಸನೂರ ಅವರ ಮೊದಲ ಕಾದಂಬರಿ.
ಶಿವ ತಾಂಡವ ಕಾದಂಬರಿ ಶುರುವಾಗುವುದು ಶಿವಪ್ರಸಾದ್ ತರಬೇತುದಾರರಿಗೆ ನೀಡುವ ಶಿಕ್ಷಣ ಹಾಗೂ ಅವರಿಗೆ ಹೇಳುವ ಕಿವಿಮಾತಿನಿಂದ. ಬಂಡುಕೋರರ ವಿರುದ್ಧ ಪೊಲೀಸ್ ಅಭ್ಯರ್ಥಿಗಳು ಮಾಡಬೇಕಾದ ಕೆಲಸಗಳಿಗಾಗಿ ಪೂರ್ವಭಾವಿ ಸಿದ್ದತೆ ಅದಾಗಿತ್ತು. ಅದಾದ ನಂತರ ಕರ್ನಲ್ ಚೋಪ್ರಾ ಅವರಿಂದ ಬಂದ ಸಂದೇಶವನ್ನು ಕಂಡು ಅಲ್ಲಿಗೆ ಹೋದಾಗ ಅವನಿಗೇ ತಿಳಿಯದಂತೆ ಅಲ್ಲಿ ಅವನಿಗೆ ನೀಡಬೇಕಾದ ಕೆಲಸಕ್ಕಾಗಿ ಅವನನ್ನು ಪರೀಕ್ಷಿಸಲಾಯಿತು. ಕರ್ನಾಟಕ ದರೋಡೆ ನಿಗ್ರಹ ಶಾಖೆಯ ಡಿ. ಐ. ಜಿ ಕೃಷ್ಣನ್ ಅವರು ಹಾಗೂ ಕರ್ನಲ್ ಚೋಪ್ರಾ ಇಬ್ಬರೂ ಸೇರಿ ಶಿವಪ್ರಸಾದ್ ನನ್ನು ಆ ಕೆಲಸಕ್ಕೆಂದು ಆಯ್ಕೆ ಮಾಡಿದರು. ತನಗೆ ಅಂತಹಾ ಮಹತ್ತರ ಕೆಲಸವನ್ನು ವಹಿಸಿದ್ದಕ್ಕೆ ಅಚ್ಚರಿಯೂ ಆಗಿತ್ತು.
ವಹಿಸಿದ ಆ ಕೆಲಸ ರಜತಾದ್ರಿಯ ರಾಕ್ಷಸನನ್ನು ಹಿಡಿಯುವುದಾಗಿತ್ತು.
ರಜತಾದ್ರಿಯ ದಾರಿಯಲ್ಲಿ ಹೊರಟ ದಾಸಯ್ಯನಿಗೆ ತಾಯವ್ವನ ಮನೆಯಲ್ಲಿ ಆತಿಥ್ಯ ದೊರೆಯಿತಾದರೂ.. ಕಾಡಿನಿಂದ ಬಂದ ತಂಡವೊಂದರಿಂದ ಆತನನ್ನು ಅನುಮಾನಿಸಿ.. ಬೇರೆ ರೀತಿಯ ಆತಿಥ್ಯವೂ ದೊರೆಯಿತು. ಆದರೆ, ಮರುದಿನ ಬೆಳಿಗ್ಗೆ ಬಂದವರೊಬ್ಬರಿಂದ ಆತನಿಗೆ ಬಿಡುಗಡೆಯೂ ಸಿಕ್ಕು ಆತ ಹೊರಟ ಸಂದರ್ಭದಲ್ಲಿ ತಾಯವ್ವ ಹೇಳಿದ್ದು.. ರಜತಾದ್ರಿಯಲ್ಲೊಬ್ಬ ರಾಕ್ಷಸನಿದ್ದಾನೆ.
ರಜತಾದ್ರಿಯ ಆ ರಾಕ್ಷಸ ಯಾರು..? ಎನ್ನುವ ಕುತೂಹಲದೊಂದಿಗೆ ಸಾಗುವ ಕಾದಂಬರಿ ಓದುವಾಗ ಮೊದಲಿಗೆ ತಾಂಡವೇಶ್ವರನನ್ನು ಆ ಸ್ಥಾನದಲ್ಲಿ ನಿಲ್ಲಿಸುತ್ತೇವೆ.
ಆದರೆ, ತಾಯವ್ವ ನಡೆದುಕೊಂಡ ರೀತಿ ಕಂಡಾಗ ಶ್ರೀಮಂತರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದ ದರೋಡೆಕೋರ ತಾಂಡವೇಶ್ವರ ಅದನ್ನು ಬಡವರಿಗೆ ಹಂಚುತ್ತಿದ್ದ ಪರಿ ಹಾಗೂ ಅವರ ಮನಸ್ಸಲ್ಲಿ ನೆಲೆ ನಿಂತ ಪರಿ ಕಂಡು ಆತ ನಿಜಕ್ಕೂ ರಾಕ್ಷಸನೇ..? ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ, ಪೊಲೀಸರು ಆತನನ್ನು ಬಂಧಿಸಲು ನಿರಂತರ ಹುಡುಕಾಟ ಮಾಡುತ್ತಲೇ ಇರುತ್ತಾರೆ. ಆದರೆ, ತಾಯವ್ವನಂತಹವರು ನಿರಂತರವಾಗಿ ಗುಟ್ಟು ಕಾಪಾಡಿಕೊಳ್ಳುತ್ತಲೇ ಸಾಗುತ್ತಿರುತ್ತಾರೆ.
ರಜತಾದ್ರಿಯ ಕೊನೆಯ ಹಳ್ಳಿ ಶ್ರೀಗಂಧಪುರಕ್ಕೆ ಬರುವ ದಾಸಯ್ಯ ತನ್ನ ಕಂಠಸಿರಿಯಿಂದ ಹಳ್ಳಿಯವರನ್ನು ಆಕರ್ಷಿಸಿ, ಈಶ್ವರ ದೇವಾಲಯದಲ್ಲಿ ಬೀಡು ಬಿಟ್ಟಿರುತ್ತಾನೆ. ಯಾರ ಮನೆಯಲ್ಲಿಯೂ ಏನನ್ನೂ ಬೇಡದವನಿಗೆ ಆ ಊರಿನ ತುಂಟ ಹುಡುಗ ಗೋಪಾಲನ ಮನೆಯಲ್ಲಿ ಆತಿಥ್ಯ ಕಾದಿರುತ್ತದೆ. ಹಿರಿಯ ನೀಲಜ್ಜ ಹಾಗೂ ಆತನ ಮಾತುಕತೆ ಸಾಗುತ್ತಿರುವಾಗಲೇ ಈಟಿಯಲ್ಲಿ ಚುಚ್ಚುತ್ತಲೇ ಕೆಲ ಬಂಟರಿಂದ ಮಹಲಿನ ಮನೆಯ ಆತಿಥ್ಯಕ್ಕೆ ಆಹ್ವಾನ ಬಂದಿತು. ಆ ಮಹಲಿನ ಮನೆಯೇ ಕರುಣಾಕರ ದಯಾಸಾಗರರದ್ದು. ಆ ಊರಿನಲ್ಲಿ ಆತನ ಆಜ್ಞೆಯಿಲ್ಲದೆ ಏನೂ ನಡೆಯುತ್ತಿರಲಿಲ್ಲ. ಶ್ರೀಗಂಧಪುರದ ಅನಭಿಷಿಕ್ತ ಸಾಮ್ರಾಟನಂತೆ ಮೆರೆಯುತ್ತಿದವನ ಅಹಂಕಾರ ಮೇರೆ ಮೀರಿತ್ತು. ಆತನ ಅಟ್ಟಹಾಸಕ್ಕೆ ಕೊನೆಯೇ ಇರಲಿಲ್ಲ. ತಾಂಡವೇಶ್ವರನಿಂದ ಊರಿನವರಿಗೆ ರಕ್ಷಣೆ ನೀಡುತ್ತೇನೆಂದು ನಾಯಿ, ಬಂಟರನ್ನು ಜೊತೆಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದ. ಹಾಗಾದರೆ.. ಈತ ರಜತಾದ್ರಿಯ ರಾಕ್ಷಸನೇ..?? ದಾಸಯ್ಯನಿಗೆ ಅಲ್ಲಿ ಸಿಕ್ಕ ಆತಿಥ್ಯವೇನು..?
ಶಿವಪ್ರಸಾದ್ ಈಗ ಶ್ರೀಗಂಧಪುರದ ಇನ್ಸ್ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಳ್ಳಲೆಂದು ಬಂದಾಗಿತ್ತು. ಅದುವರೆಗೂ ಅಲ್ಲಿದ್ದವರೆಲ್ಲರೂ ಆತನ ಖಾಸಗಿ ಬಂಟರಂತೆಯೇ ವರ್ತಿಸುತ್ತಿದ್ದರು. ಈಗ ಆ ಇಡೀ ಪರಿಸರವೇ ಬದಲಾಗಿತ್ತು. ಶಿವಪ್ರಸಾದ್ ಮೊದಲಿಗೆ ದಯಾಸಾಗರನ ಹಂಗಿನಿಂದ ಹೊರ ಬಂದು ಕಟ್ಟಡವನ್ನೇ ತ್ಯಜಿಸಿದ. ಆತನ ಜೊತೆಗೆ ಪತ್ನಿ ಭವಾನಿಯೂ ಇದ್ದಳು. ಆಕೆ ವೃತ್ತಿಯಲ್ಲಿ ಡಾಕ್ಟರ್. ಆದರೆ, ಆ ಹಳ್ಳಿಯಲ್ಲಿ ಅದುವರೆಗೂ ಪೂಜಾರಿಯಾಗಿದ್ದ ಧನ್ವಂತರಿಯೇ ಅಲ್ಲಿನವರಿಗೆ ಬೇಕಾದ ಮದ್ದು ನೀಡುತ್ತಿದ್ದದ್ದು. ಭವಾನಿಯ ಚಿಕಿತ್ಸೆಯನ್ನು ಪಡೆಯಲು ಯಾರೂ ಮುಂದಾಗಲಿಲ್ಲ. ಆದರೆ, ಒಂದು ಪ್ರಸಂಗ ಎಲ್ಲರ ನಂಬಿಕೆಯನ್ನು ಬುಡಮೇಲಾಗಿಸಿ.. ಭವಾನಿಯ ಕೈಗುಣವನ್ನು ಎಲ್ಲರಿಗೂ ಪರಿಚಯಿಸಿತು. ಆ ಪ್ರಸಂಗವನ್ನು ನೀವೇ ಓದಿ ಅರಿಯಿರಿ. ಆಕೆ ಹಾಗೂ ಆಕೆಯ ಆಂಬುಲೆನ್ಸ್ ಸುತ್ತಮುತ್ತಲಿನ ಹಳ್ಳಿಯವರಿಗೂ ಚಿಕಿತ್ಸಾ ಕೇಂದ್ರವಾಯಿತು. ಧನ್ವಂತರಿಯ ಮಗನ ಬದುಕು ಭವಾನಿಯಿಂದಲೇ ಬದಲಾಯಿತು.
ಊರಿನಲ್ಲಿ ಸಿದ್ದೇಶ್ವರ ಜಾತ್ರೆಯ ಸಮಯದ ಅಗ್ರಪೂಜೆಯ ಸಂದರ್ಭದಲ್ಲಿ ಆ ಅಗ್ರಪೂಜೆ ಸಲ್ಲುತ್ತಿದ್ದದ್ದು ಸಹ್ಯಾದ್ರಿಯ ಶಾಸಕ ಗುಣಸಾಗರ್ ಅವರಿಂದ. ಆತ ದಯಾಸಾಗರನ ಬಾವ. ಆತನೂ ದಯಾಸಾಗರನಿಗಿಂತ ಯಾವುದರಲ್ಲಿಯೂ ಕಡಿಮೆ ಇರಲಿಲ್ಲ. ರಾಜಕೀಯ ಬಲ ಕಂಡು ದಯಾಸಾಗರ ತನ್ನ ತಂಗಿಯನ್ನು ಆತನಿಗೆ ಮದುವೆ ಮಾಡಿಕೊಟ್ಟಿದ್ದ. ತಾಂಡವೇಶ್ವರ ಪ್ರತಿಬಾರಿಯೂ ಜಾತ್ರೆಗೆ ಬರುತ್ತಿದ್ದ. ಆದರೆ, ಪೊಲೀಸರಿಗೆ ಮಾತ್ರ ಸಿಕ್ಕುತ್ತಿರಲಿಲ್ಲ. ಈ ಬಾರಿ ಶಿವಪ್ರಸಾದ್ ದೆಸೆಯಿಂದ ಅಗ್ರಪೂಜೆಯ ವಿಧಿವಿಧಾನವೇ ಬದಲಾಗಿತ್ತು.
ಅಡವಿ ರಾಜಾ ಎಂದೇ ಖ್ಯಾತನಾಗಿದ್ದ ತಾಂಡವೇಶ್ವರನ ಅಡಗುತಾಣಕ್ಕೂ ಕಾಲಿಟ್ಟ ಶಿವಪ್ರಸಾದ್. ಅದು ಹೇಗೆ ಹಾಗೂ ಯಾರಿಂದ ಎಂಬುದರ ಸ್ವಾರಸ್ಯವನ್ನು ನೀವೇ ಓದಿ ಸವಿಯಿರಿ.
ಶಿವಪ್ರಸಾದ್ ತಾಂಡವೇಶ್ವರನ ಬೆನ್ನು ಬೀಳಲು ಕಾರಣ ಆತನಿಗೆ ವಹಿಸಲಾಗಿದ್ದ ಕೆಲಸವೆಂದರೆ ಕೇವಲ ಅದು ಮಾತ್ರವಲ್ಲ. ಇನ್ಸ್ಪೆಕ್ಟರ್ ಗುರುಪ್ರಸಾದ್ ಕೊಲೆಯಾಗಿದ್ದರ ಹಿಂದೆ ಆತನೇ ಇದ್ದಾನೆ ಎನ್ನುವುದು. ಆದರೆ, ಅದಕ್ಕೂ ತಾಂಡವ ಅಡವಿ ಸೇರಿದ್ದಕ್ಕೂ ಇರುವ ನಂಟು ಶಿವಪ್ರಸಾದ್ ಗೆ ತಿಳಿಯುತ್ತದೆ. ಆತನ ಶಾಂತ ಸ್ವಭಾವದ ಅಣ್ಣ ಶಾಂತರಸ ಸತ್ತು ತಾಯಿಯಂತಹಾ ಅತ್ತಿಗೆ ಸುಂದರಿ ಹುಚ್ಚಿಯಾಗಿದ್ದರ ಹಿಂದೆ ಇರುವ ಕಾರಣ ಮನಕಲಕುತ್ತದೆ. ಎಲ್ಲದರ ಮೂಲ ಕಾರಣ ದಯಾಸಾಗರ ಎಂದು ತಿಳಿದು ಆತನನ್ನು ಕೊಂದು ತಾನಾಗಿಯೇ ಶರಣಾಗುತ್ತೇನೆ ಎನ್ನುವವನನ್ನು ಕಂಡ ಶಿವಪ್ರಸಾದ್ ಪ್ರತಿಕ್ರಿಯೆ ಏನಿತ್ತು..?
ತಾಂಡವನನ್ನು ಅಡವಿಯಿಂದ ಹೊರಗೆ ಕರೆತರಲು ಹಾಗೂ ದಯಾಸಾಗರನಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲು ಇದ್ದ ಕೊಂಡಿ ಚಂಪಾ.
ಪಂಚಾಯಿತಿಯ ಅಧಿಕಾರಿ ಗುರುದತ್ತನ ಏಕೈಕ ಮಗಳೇ ಚಂಪಾ. ದಯಾಸಾಗರ ಮದುವೆಯಾಗಿದ್ದರೂ.. ಹೆಂಡತಿಯಿಂದ ಏನನ್ನೂ ನಿರೀಕ್ಷಿಸುವಂತಿರಲಿಲ್ಲ. ಆಗ ಮೋಸದ ಜಾಲದಿಂದ ಚಂಪಾಳನ್ನು ಹಿಡಿತದಲ್ಲಿಟ್ಟುಕೊಂಡಿದ್ದ. ಚಂಪಾ ಆತನ ಕಾರಣದಿಂದ ಅಡಕತ್ತರಿಯಲ್ಲಿ ಸಿಲುಕಿದ್ದೇಕೆ..? ಮುಂದೆ ಅವಳ ಬದುಕಲ್ಲಿ ಬಲರಾಮ ಎಂಬ ಯುವಕ ಬರುತ್ತಾನೆ..ಆತ ಮಾನವಿಕ ಶಾಸ್ತ್ರದ ಸಂಶೋಧಕನೆಂದು ಪರಿಚಯಿಸಿಕೊಳ್ಳುತ್ತಾನೆ. ದಯಾಸಾಗರ ಆತನನ್ನು ಪರೀಕ್ಷಿಸುತ್ತಾನೆ. ನಂತರ ಆತನ ಕುಟುಂಬದ ಚರಿತ್ರೆ ಬರೆಯಲು ಅನುಮತಿಸುತ್ತಾನೆ. ತಾನೇ ಚಂಪಾಳ ಮನೆಯಲ್ಲಿರಲು ವ್ಯವಸ್ಥೆಯನ್ನೂ ಮಾಡುತ್ತಾನೆ. ಇಲ್ಲಿ ಬಲೆ ಬೀಸಿದ್ದು ಯಾರು..? ಬಲೆಯಲ್ಲಿ ಬಿದ್ದವರಾರು ಎಂದು ನೀವೇ ಓದಿ ನೋಡಿ.
ಕುಟಿಲ ಬುದ್ಧಿಯಲ್ಲಿ ದಯಾಸಾಗರ ಹಾಗೂ ಗುಣಸಾಗರರಿಗೆ ಜೊತೆಯಾದವನು ಚತುರಾಕ್ಷ. ಗುಣಸಾಗರ ತನಗಿದ್ದ ರಾಜಕೀಯ ಪ್ರಭಾವ ಬಳಸಿ ಶಿವಪ್ರಸಾದ್ ವರ್ಗಾವಣೆಗೆ ಪ್ರಯತ್ನಿಸುತ್ತಾನೆ. ಆದರೆ, ಅದು ಸಾಧ್ಯವಾಗದ್ದು ಏಕೆ..?
ಶಿವಪ್ರಸಾದ್ ಹಾಗೂ ತಾಂಡವೇಶ್ವರ ಇಬ್ಬರಲ್ಲಿ ಈ ದುಷ್ಟಕೂಟವನ್ನು ಮಟ್ಟ ಹಾಕಿದ್ದು ಯಾರು..? ಭವಾನಿ ತನ್ನ ವೃತ್ತಿಧರ್ಮವನ್ನು ಪಾಲಿಸಿದಳೇ ಅಥವಾ ಶಿವಪ್ರಸಾದ್ ಪತ್ತೇದಾರಿಕೆಯಲ್ಲಿ ನೆರವಾದಳೇ..? ಸುಂದರಿ ಗುಣವಾದಳೇ..?
ಪಾರ್ವತಿ ಪರಮೇಶ್ವರರ ಜೋಡಿಯಂತೆ ಶಿವಪ್ರಸಾದ್ ಹಾಗೂ ಭವಾನಿಯ ಜೋಡಿ ಸೆಳೆಯುತ್ತದೆ. ಅಂತೆಯೇ ಭವಾನಿಯ ಪ್ರಬುದ್ಧ ಆಲೋಚನೆಯೂ..
ಶಿವಪ್ರಸಾದ್ ನ ತಾಂಡವನೃತ್ಯದಂತಹಾ ಕಾರ್ಯಾಚರಣೆ ಹಾಗೂ ನಡೆಗಳು ಹಾಗೂ ಶಿವಪ್ರಸಾದ್ ಹಾಗೂ ತಾಂಡವೇಶ್ವರ ಇಬ್ಬರ ನಡವಳಿಕೆ ಬೇರೆ ಇದ್ದರೂ.. ಇಬ್ಬರ ಗುರಿ ಒಂದೇ ಆದ ಪರಿಯನ್ನು ಕಟ್ಟಿಕೊಡುವ, ಒಂದೊಳ್ಳೆ ಸಿನಿಮಾ ಆಗುವ ಕಥಾವಸ್ತುವಿನ ಕಾದಂಬರಿಯನ್ನು ಓದಿರದಿದ್ದಲ್ಲಿ ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ