ಪುಸ್ತಕದ ಶೀರ್ಷಿಕೆ : ನಮ್ಮೊಳಗಿನ ಬ್ರಹ್ಮಾಂಡ
ಲೇಖಕರು : ನಾಗೇಶ ಹೆಗಡೆ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 1998
ಏಳನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 160
ಬೆಲೆ : 150 ರೂ.
"ಇದರಲ್ಲಿ ನನ್ನದೇನೂ ಇಲ್ಲ, ನಾನೇನಿದ್ದರೂ ಕೇವಲ ಪೋಸ್ಟ್ ಮನ್" ಎಂದು ಶಿವರಾಮ ಕಾರಂತರು ಹಿಂದೆ ವಿಜ್ಞಾನ ಪ್ರಪಂಚವನ್ನು ಬರೆಯುವ ಸಂದರ್ಭದಲ್ಲಿ ಹೇಳಿದ್ದರು. ಈ ಮಾತು ಎಲ್ಲ ವಿಜ್ಞಾನ ಲೇಖಕರಿಗೂ ಅನ್ವಯಿಸುತ್ತದಾದರೂ.. ನಾನು ಕೊಂಚ ಸಿಅಧಿಕ ಪ್ರಸಂಗಿ ಪೋಸ್ಟ್ ಮನ್' ಅಂತಲೇ ಹೇಳಬಹುದು. ಏಕೆಂದರೆ, ಏನನ್ನೂ ಇದ್ದುದ್ದನ್ನು ಇದ್ದ ಹಾಗೆ ಬಟವಾಡೆ ಮಾಡುತ್ತಿಲ್ಲ. ನನ್ನದನ್ನೂ ಸಾಕಷ್ಟು ಸೇರಿಸಿದ್ದೇನೆ. ಸರಳವೆನಿಸಿದ್ದನ್ನು ರಮ್ಯಗೊಳಿಸಲು ಯತ್ನಿಸಿದ್ದೇನೆ ಎನ್ನುತ್ತಾ ಈ ಪುಸ್ತಕದ ಕುರಿತಾಗಿ ಲೇಖಕರು ಹೇಳುತ್ತಾರೆ. ಇದು ಸತ್ಯವೂ ಹೌದು. ಲೇಖಕರು ಇಲ್ಲಿನ ವಿಚಾರಗಳನ್ನು ಮತ್ತಷ್ಟು ರಮ್ಯಗೊಳಿಸಿ ಹೇಳಿದ್ದಾರೆ. ಆದರೆ, ಇದು ಓದುಗರಲ್ಲಿ ಆಸಕ್ತಿ ಹೆಚ್ಚಿಸಲು ಕಾರಣವಾಗುತ್ತದೆ. ಸಂಶಯಕ್ಕೆ ಅಥವಾ ವಾಸ್ತವದ ಸಂಗತಿಗಳ ಕುತೂಹಲ ತಣಿಸಿಕೊಳ್ಳಲು ಇಂದು ಹೇಗೂ ಇಂಟರ್ನೆಟ್ ಲಭ್ಯವಿದೆ. ಆದರೆ, ಈ ಲೇಖನಗಳು ಬಿಡಿಬಿಡಿಯಾಗಿ ಸುಧಾ ಹಾಗೂ ಪ್ರಜಾವಾಣಿಯಲ್ಲಿ ಪ್ರಕಟವಾದವು ಹಾಗೂ ಈ ಪುಸ್ತಕ ಮೊದಲು ಮುದ್ರಣವಾಗಿದ್ದು 1998ರಲ್ಲಿ. ಹಾಗಾಗಿ ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ಪುಸ್ತಕವನ್ನು ಓದಲು ಶುರುವಿಟ್ಟುಕೊಂಡೆ.
ಇಲ್ಲಿನ ಹೆಚ್ಚಿನ ಲೇಖನಗಳು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಗಳು.
ಒಂದು ಜೀವದ ಜೀವ ತಳೆಯುವಿಕೆ ಹೇಗಾಗುತ್ತದೆ.. ಅದರಲ್ಲಿ ಗಂಡು ಹಾಗೂ ಹೆಣ್ಣಿನ ಜೀವಕೋಶಗಳು ಹಾಗೂ ಸೃಷ್ಟಿಕ್ರಿಯೆಯ ವಿಸ್ಕೃತ ಒಳನೋಟವಿದೆ. ಕೃತಕ ಗರ್ಭಧಾರಣೆಯ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಹೀಗೆ ಒಂದು ಜೀವದಿಂದ ಮತ್ತೊಂದು ಜೀವ ಜೀವ ತಳೆಯುವ ಈ ಕ್ರಿಯೆಯಲ್ಲಿ ಜೀವಕೋಶದ ಪಾತ್ರ ಎಷ್ಟಿರುತ್ತದೆ ಹಾಗೂ ಹೇಗಿರುತ್ತದೆ ಎಂಬ ಜೀವಕಣದೊಳಗಿನ ಅದ್ಭುತ ಪ್ರಪಂಚವನ್ನು ತೆರೆದಿರುತ್ತಾರೆ.
ತಂದೆಯ ಅಥವಾ ತಾಯಿಯ ಹೋಲಿಕೆಯನ್ನು ನಾವು ಮಾಡುವಾಗ ಅದಕ್ಕೆ ಮುಖ್ಯ ಕಾರಣವಾಗುವುದು ಅವರ ದೇಹದಲ್ಲಿ ಅವರಿಂದ ಬಂದ ವಂಶವಾಹಿಗಳು. ಈ ವಂಶವಾಹಿ ಎಂಬ ಮಹಾಮೋಜಣಿಯಲ್ಲಿ ವರ್ಣತಂತುಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಬಿಡಿಸಿಟ್ಟಿದ್ದಾರೆ. ಜೀನ್ ಗಳನ್ನು ಮಹಾಸ್ವಾರ್ಥಿ ಎಂದು ಲೇಖಕರು ಕರೆದಿರುವುದು ಏಕೆ ಓದಿ ನೋಡಿ.
ಕ್ವಾಂಟಮ್ ಪ್ರಜ್ಞೆಯ ಕುರಿತು ಹೇಳುವಾಗಲೇ ಇಲ್ಲಿ ಒಂದು ಕಡೆ ಹೃದಯದಲ್ಲೂ ಮೆದುಳು ಎಂದು ಪ್ರಸ್ತಾಪಿಸುತ್ತಾರೆ. ನನಗೆ ಕೆ.ಎನ್ ಗಣೇಶಯ್ಯನವರ 'ಹೊಕ್ಕಳ ಮೆದುಳು' ಎಂಬ ಕಥಾಂಬರಿಯ ನೆನಪಾಯಿತು. ಆದರೆ, ಇಲ್ಲಿ ಹೃದಯದಲ್ಲಿ ಮಾತ್ರವಲ್ಲ ದೇಹದ ಪ್ರತಿಯೊಂದು ಕಣದಲ್ಲಿಯೂ ಮೆದುಳು ಇದೆ ಎಂಬ ಅಂಶವನ್ನು ಜೀವವಿಜ್ಞಾನಿಗಳು ಒಪ್ಪಿಕೊಳ್ಳತೊಡಗಿದ್ದಾರೆ ಎನ್ನುತ್ತಾರೆ. ಈ ಅಚ್ಚರಿಯ ವಿಚಾರವನ್ನು ನೀವೇ ಓದಿ ಅರಿಯಿರಿ.
ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲೂ ಒಂದು ಅಗೋಚರ ಗಡಿಯಾರ ಇರುತ್ತದೆ. ಕೆಲವರಲ್ಲಿ ಅದು ಶೀಘ್ರ, ಕೆಲವರಲ್ಲಿ ವೇಗ, ಕೆಲವರಲ್ಲಿ ಸಮವೇ ಗ ಹೀಗೆ ವಯಸ್ಸು ಮತ್ತು ಆಯಸ್ಸನ್ನು ತೀರ್ಮಾನಿಸುವುದು ಯಾವುದು ಹಾಗೂ ಹೇಗೆ..? ಈ ಅಧ್ಯಾಯ ಕೊಂಚ ಹಾಸ್ಯಮಯವಾಗಿ ಸಾಗುತ್ತದೆ. ಮನುಷ್ಯನ ಜೀವಿತಾವಧಿಯಲ್ಲಿ ವಯಸ್ಸಿನ ಆಧಾರದ ಮೇಲೆ ಆತನ ನಡೆ ಹಾಗೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಆರೋಗ್ಯದ ದೃಷ್ಟಿಯಿಂದಲೂ ಹೇಳುತ್ತಾರೆ.
1980ರಲ್ಲಿ ನಮ್ಮ ದೇಶದಲ್ಲಿ ನಡೆದ ಹಿಂದುಳಿದ ಜಾತಿಗಣತಿಯ ಸಮೀಕ್ಷೆಯ ಸಂದರ್ಭದಲ್ಲಿ ತಾವು ಹಿಂದುಳಿದ ಪಟ್ಟಿಯಲ್ಲಿಯೇ ಇರುತ್ತೇವೆಂದು ಪಟ್ಟು ಹಿಡಿದವರನ್ನು ಪ್ರಸ್ತಾಪಿಸುತ್ತಲೇ.. ಅಮೆರಿಕದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯನ್ನು ಹೇಳುತ್ತಾರೆ. ಅಲ್ಲಿ ಕೆಲವರು ತಾವು ಹಿಂದುಳಿದ ಜನಾಂಗದವರಲ್ಲ ಎಂದು ಹೇಳುತ್ತಾ ಮುಷ್ಕರ ಮಾಡುವುದನ್ನು ಹೇಳುತ್ತಾರೆ. ಅದಕ್ಕೆ ಕಾರಣ ಜಪಾನಿನ ಪ್ರಧಾನಮಂತ್ರಿ ಯಾಸುಹಿರೊ ನಕಾಸೊನೆ ಅವರು ತಮ್ಮ ಭಾಷಣದಲ್ಲಿ "ನಮ್ಮ ಸರಾಸರಿ ಬುದ್ಧಿಮತ್ತೆ ಅಮೆರಿಕದ ಸರಾಸರಿಗಿಂತ ಹೆಚ್ಚಿದೆ. ಅಮೆರಿಕದಲ್ಲಿ ಕಪ್ಪು ಜನಾಂಗ, ಮೆಕ್ಸಿಕನ್ ಜನಾಂಗ, ಪೊರ್ಟೊರೀಕನ್ ತಳಿಯವರು ಇರುವುದರಿಂದ ಅಲ್ಲಿನವರ ಸರಾಸರಿ ಬುದ್ಧಿಮತ್ತೆ ತುಂಬಾ ಕೆಳಮಟ್ಟದಲ್ಲಿದೆ" ಎಂದಿದ್ದು. ಅಷ್ಟಕ್ಕೂ ಈ ವಿಚಾರ ಪ್ರಸ್ತಾಪವಾಗಿರುವುದು ಐಕ್ಯೂ ಮತ್ತು ಈಕ್ಯೂವನ್ನು ಅಳೆಯಲು. ಜಗತ್ತಿನಲ್ಲಿರುವ ಆರು ಐಕ್ಯೂ ಸಂಸ್ಥೆಗಳ ಕುರಿತು ಹಾಗೂ ಬುದ್ಧಿ ಮತ್ತು ಜ್ಞಾನಕ್ಕೆ ಇರುವ ಸಂಬಂಧಗಳ ಕುರಿತು ಹಲವಾರು ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ.
ನಿಸರ್ಗದಲ್ಲಿ ಹಲವಾರು ಏಕಾಣು ಜೀವಿಗಳು ಹೊಸ ಸೃಷ್ಟಿಯನ್ನು ಮಾಡುತ್ತಾವಾದರೂ.. ಮನುಷ್ಯ ಕೃತಕ ಜೀವಿಗಳನ್ನು ಸೃಷ್ಟಿಸಲು ಶುರು ಮಾಡಿದ ವಿಚಾರ, ಅದರ ಸಾಧ್ಯತೆಗಳು, ಪರಿಣಾಮಗಳು ಮತ್ತು ಅದಕ್ಕಾದ ಕ್ರಾಂತಿಯ ಕುರಿತು ಚರ್ಚಿಸಿದ್ದಾರೆ. ಜೀವತಂತ್ರ ವಿಜ್ಞಾನದ ಕೆಡುಕುಗಳ ಬಗ್ಗೆ ವಿಜ್ಞಾನಿಗಳು ಹಾಗೂ ಜನಸಾಮಾನ್ಯರ ಆಲೋಚನೆಗಳು ಇಲ್ಲಿವೆ.
ಆಗ ತಾನೇ ಹುಟ್ಟಿದ ಮಕ್ಕಳಲ್ಲಿ ಬಾಯಿಯಲ್ಲಿ ಯಾವ ಜೀವಿಗಳೂ ಇರುವುದಿಲ್ಲ. ಬರಿ ಬಂಜರುಭೂಮಿ. ಆದರೆ, ಕಾಲಕ್ರಮೇಣ ಬಾಯೊಳಗೆ ಒಂದು ಪ್ರಚಂಡ ಪ್ರಪಂಚವೇ ಸೃಷ್ಟಿಯಾಗುತ್ತದೆ. ಅದು ಹೇಗೆ..? ಲಾಲಾರಸ, ಹಲ್ಲು ಮಾತ್ರವಲ್ಲ.. ಹಲವಾರು ಆಸಕ್ತಿಕರ ವಿಚಾರಗಳನ್ನು ಹೇಳಿದ್ದಾರೆ.
ಸೃಷ್ಟಿಯ ರಹಸ್ಯ ವಿಚಿತ್ರ. ಗಂಡಿಗಿಂತ ಹೆಣ್ಣೇ ದೀರ್ಘಾಯುಷಿ ಎಂದು ಅಂಕಿ-ಅಂಶಗಳು ತಯಾರಾಗಿಲ್ಲದಿದ್ದರೂ.. ಹಲವಾರು ವಿಶ್ಲೇಷಣೆಗಳು ಹಾಗೂ ಗಮನಿಸುವಿಕೆ ಈ ವಿಚಾರವನ್ನು ಪ್ರಸ್ತಾಪಿಸುತ್ತವೆ. ಕೆಲಸದ ಹೊರೆ, ಭಾವನಾತ್ಮಕ ಪ್ರತಿಕ್ರಿಯೆಗಳು ಹಾಗೂ ಇನ್ನೂ ಹಲವಾರು ಅಂಶಗಳು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಓದಿ ನೋಡಿ.
ನಮಗೆಲ್ಲ ಕ್ಷುಲ್ಲಕ ಅಥವಾ ಅಸಂಬದ್ಧವೆಂದು ಕಾಣಬಹುದಾದ ಈ ಪ್ರಶ್ನೆ
"ಮಾನವರ ಕಾಲಿಗೆ ಗಾಲಿ ಏಕಿಲ್ಲ..?" ಈ ಕುರಿತು ವಿಕಾಸವಿಜ್ಞಾನಿಗಳು ಏನೆಂದು ಹೇಳಿದ್ದಾರೆ..? ಕಾಲಿಗೆ ಗಾಲಿ ಇಲ್ಲದಿದ್ದರೂ.. ಇಡೀ ಶರೀರವನ್ನೇ ಗೋಲಾಕಾರ ಮಾಡಿಕೊಂಡು ಉರುಳಬಲ್ಲ ಪೆಂಗೋಲಿನ್ ಪ್ರಾಣಿಯನ್ನು ಉದಾಹರಣೆಯಾಗಿ ನೀಡುತ್ತಾರೆ. ಗಾಲಿಗಳಿದ್ದಿದ್ದರೆ ಹೇಗಿರುತ್ತಿತ್ತು ಎಂಬ ವಿಚಾರವನ್ನು ಅಚ್ಚರಿಯಿಂದಲೇ ಹೇಳುತ್ತಾರೆ.
ವಿಜ್ಞಾನ ಬೆಳವಣಿಗೆಯಾಗುತ್ತಿದೆ. ಇಂದಿನ ವೈದ್ಯಕೀಯ ವಿಜ್ಞಾನ ಇನ್ನಷ್ಟು ಬೆಳವಣಿಗೆಯಾಗಿದೆ. ಆದರೆ, ಕೆಲವೊಮ್ಮೆ ಅವಶ್ಯಕತೆಯೇ ಇಲ್ಲದಿದ್ದರೂ ಮಾಡಿಸುವ ಟೆಸ್ಟುಗಳು ಹಾಗೂ ಒಂದಕ್ಕೊಂದು ಇರುವ ಸಂಬಂಧವನ್ನು ಕಿಯಾಸು ಮತ್ತು ಹೈಟೆಕ್ ರಣವೈದ್ಯ ಎನ್ನುತ್ತಾ ಇದರ ಮತ್ತೊಂದು ಮುಖವನ್ನು ತೆರೆದಿರುವ ನೋಟ ಇಲ್ಲಿದೆ. ಆದರೆ, ಪ್ರಸ್ತುತ ದಿನಗಳಿಗೆ ಹೋಲಿಸಿದಾಗ ಇದನ್ನು ಅರ್ಧದಷ್ಟು ಒಪ್ಪಿದರೆ ಇನ್ನು ಅರ್ಧದಷ್ಟು ಒಪ್ಪಲು ಸಾಧ್ಯವಿಲ್ಲವೆನ್ನಿಸಿತು.
ಮುದ್ದುಬೆಕ್ಕುಗಳ ಮೋಹಕ ಲೋಕವನ್ನೇ ತೆರೆದಿಟ್ಟಿದ್ದಾರೆ. ಬೆಕ್ಕುಗಳಿಗೆ ಎಂತಹ ಕನಸು ಬೀಳಬಹುದು ಎನ್ನುವ ವಿಚಾರ ಅಚ್ಚರಿಗೊಳಿಸುತ್ತದೆ. ಭಾರತದ ಹಾಗೂ ವಿದೇಶಗಳ ಎರಡೂ ವಿಭಿನ್ನ ಪರಿಸರಗಳಲ್ಲಿ ಬೆಕ್ಕನ್ನು ಸಾಕುವ ರೀತಿ ಹಾಗೂ ಬೆಕ್ಕಿನ ದೇಹ ರಚನೆ ಮತ್ತು ಅದರ ನಡೆಗಳು ಅದನ್ನು ಮತ್ತಷ್ಟು ಮೋಹಕವಾಗಿ ಬರೆದಿದ್ದಾರೆ. ರುಬ್ಬುಕಲ್ಲಿನ ಸಹವಾಸಕಿಂತ ಬೆಕ್ಕಿನ ಸಹವಾಸ ಎಷ್ಟು ಉತ್ತಮವೆಂದು ಮನೋವಿಜ್ಞಾನಿಗಳು ಹೇಳುವುದನ್ನು ಉಲ್ಲೇಖಿಸಿದ್ದಾರೆ. ಅದರ ಸಾಧಕ-ಬಾಧಕಗಳನ್ನು ನೀವೇ ಓದಿ ನೋಡಿ.
ಕಡಲ ತೀರಕ್ಕೆ ಬಂದು ತಿಮಿಂಗಿಲ ಆತ್ಮಹತ್ಯೆ ಮಾಡಿಕೊಳ್ಳುತ್ತದೆ. ದಡಕ್ಕೆ ಬಿದ್ದ ಭಾರೀ ತಿಮಿಂಗಿಲವನ್ನು ಕೆಲವೊಮ್ಮೆ ಆಳ ಸಮುದ್ರಕ್ಕೆ ಕಳುಹಿಸಿದ ಯತ್ನ ಹಾಗೂ ತಿಮಿಂಗಿಲ ಕಂಡೊಡನೆ ಮೀನುಗಾರರು ದೇವರ ನೀನು ಎಂದು ಉದ್ಗಾರ ತೆಗೆಯುವ ಪರಿ ಹಾಗೂ ಅವರ ನಂಬಿಕೆಗಳ ಜೊತೆಗೆ ತಿಮಿಂಗಿಲಗಳ ಅಂತ್ಯಕಾಲವನ್ನು ವಿಶ್ಲೇಷಿಸುತ್ತಾರೆ. ತಿಮಿಂಗಿಲಗಳ ಆಹಾರ ಪದ್ಧತಿ, ಜೀವನ ಶೈಲಿ ಎಲ್ಲವನ್ನೂ ಹೇಳುತ್ತಾರೆ. ಅಟ್ಲಾಂಟಿಕ್ ಸಾಗರದಲ್ಲಿ ಒಮ್ಮೊಮ್ಮೆ ನೂರಿನ್ನೂರು ತಿಮಿಂಗಿಲಗಳು ಏಕಕಾಲಕ್ಕೆ ದಡಕ್ಕೆ ಬಂದು ಪ್ರಾಣ ಬಿಡುವುದೂ ಇದೆಯಂತೆ. ಅದರ ಕಾರಣವೇನು ಓದಿ ನೋಡಿ.
1995ರ ಸೆಪ್ಟಂಬರ್ 21ರಂದು ಗಣಪನ ವಿಗ್ರಹ ಹಾಲು ಕುಡಿಯುವ ವಾರ್ತೆ ಕಾಳ್ಗಿಚ್ಚಿಗಿಂತ ಕ್ಷಿಪ್ರವಾಗಿ ಹರಡಿತ್ತು. ವಿಜ್ಞಾನ ಯುಗದಲ್ಲಿ ವೈಜ್ಞಾನಿಕ ಚಮತ್ಕಾರವೇ ಅಥವಾ ಇದು ಕಪಟ ನಾಟಕವೇ ಎಂಬ ಸಾಂದರ್ಭಿಕ ವಿಶ್ಲೇಷಣೆ ಇಲ್ಲಿದೆ. ಈ ಘಟನೆಯ ಸತ್ಯಾಸತ್ಯತೆ ಕುರಿತು ತಿಳಿಯಲು ಓದಿ ನೋಡಿ.
ಸಾವಿನ ಕೊಂಚ ಮುನ್ನಿನ ಕ್ಷಣಗಳಲ್ಲಿ ಅವರ ಮನಸ್ಥಿತಿ ಹೇಗಿರುತ್ತದೆ? ನಾವು ಊಹಿಸಬಹುದಷ್ಟೇ... ಏಕೆಂದರೆ, ನಾವ್ಯಾರೂ ಆ ಕ್ಷಣಗಳನ್ನು ಅನುಭವಿಸಲು ಸಾಧ್ಯವಿಲ್ಲ. ಆದರೆ, ಇಲ್ಲಿ ಪ್ರಸ್ತಾಪಿಸಿರುವುದು ಒಂದು ಜೀವಿಯ ದೇಹ ಮತ್ತೊಂದು ಜೀವಿಯ ಆಹಾರಕ್ಕಾಗಿ ಬಲಿಪಡೆಯುವ ವಿಚಾರವನ್ನು. ಹೆಣ್ಣು ಊಜಿನೊಣ ರೇಷ್ಮೆಹುಳದ ಬೆನ್ನ ಮೇಲೆ ಕುಳಿತು ಒಂದಿಷ್ಟು ಮೊಟ್ಟೆ ಇಟ್ಟು ಹಾರಿ ಹೋಗುತ್ತದೆ. ನಂತರ ಊಜಿನೊಣದ ಮೊಟ್ಟೆ ಒಡೆದು ಮರಿಗಳು ಹೊರ ಬಂದು ರೇಷ್ಮೆಹುಳವನ್ನು ಮುಕ್ಕಲು ಆರಂಭಿಸುತ್ತವೆ. ಈ ಪ್ರಕ್ರಿಯೆ ಹೀಗೇಕೆ..? ಈ ನಡೆಗೆ ಕಾರಣವೇನು ಓದಿ ಅರಿಯಿರಿ.
ಒಂದು ಜೀವ ಉಳಿಸಲು ಹೊಸ ಜೀವದ ಸೃಷ್ಟಿಯಾದ ಪ್ರಸಂಗವೊಂದು ಇಲ್ಲಿದೆ. ಅನಿಸ್ಸಾ ಆಯಾ ಲಾ ಎಂಬ ೧೬ ವರ್ಷದ ಹುಡುಗಿಗೆ ರಕ್ತದ ಕ್ಯಾನ್ಸರ್ ಪತ್ತೆಯಾಯಿತು. ಇದಕ್ಕಾಗಿ ಅವರಿವರಿಂದ ರಕ್ತದಾನ ಪಡೆದು ಅವಳನ್ನು ಹೆಚ್ಚುಕಾಲ ಜೀವಂತವಿಡಲು ಸಾಧ್ಯವಿಲ್ಲ. ಬದಲಾಗಿ ಅದೇ ಬಗೆಯ ರಕ್ತದ ಕಣಗಳನ್ನು ಉತ್ಪಾದಿಸಬಲ್ಲ ವ್ಯಕ್ತಿಯನ್ನು ಪತ್ತೆ ಮಾಡಿ ಅವರ ಬೋನ್ ಮ್ಯಾರೋ ತೆಗೆದು ಆಕೆಯ ರಕ್ತನಾಳಕ್ಕೆ ಸೇರಿಸಬೇಕು. ಅನಿಸ್ಸಾಳ ತಂದೆ-ತಾಯಿಯ ಹಾಗೂ ಸಹೋದರನ ಮಜ್ಜಾರಸ ಹೊಂದಾಣಿಕೆ ಆಗದ್ದಕ್ಕೆ ಉಳಿದ ಕೊನೆಯ ಉಪಾಯ ಅನಿಸ್ಸಾಳ ತಾಯಿ ಮೇರಿ ಮತ್ತೆ ಗರ್ಭ ಧರಿಸಬೇಕು. ಅದು ಅಷ್ಟು ಸುಲಭವಲ್ಲ. ಆದರೆ, ಅಡೆತಡೆಗಳನ್ನು ದಾಟಿ ಅಕ್ಕನಿಗೆ ಜೀವ ನೀಡಲೆಂದೇ ತಂಗಿ ಮರಿಸ್ಸಾ ಹುಟ್ಟಿ ಬಂದಳು. ಈ ಘಟನೆಯನ್ನು ಹಲವಾರು ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಲೇಖನ ಇದು. ನಮಗೆ ಪಿಯುಸಿಯಲ್ಲಿ ಪಠ್ಯವೂ ಆಗಿತ್ತು. ಅದರ ಮತ್ತಷ್ಟು ವಿಸ್ಕೃತ ಭಾಗವನ್ನು ಇಲ್ಲಿ ಓದಬಹುದು
ಚೆಕ್ ದೇಶದ ಹೆಸರಾಂತ ಕವಿ ಹಾಗೂ ವೈದ್ಯವಿಜ್ಞಾನಿ ಡಾ. ಮಿರೊಸ್ಲಾವ್ ಹೊಲುಬ್ ಅವರ ಲೇಖನದ ಕನ್ನಡ ರೂಪಾಂತರ ಇದು. ಬಲಿಯಾಗುವ ಒಂದು ಗುಂಪು ಹಾಗೂ ಶಿಕಾರಿ ಮಾಡುವ ಮತ್ತೊಂದು ಗುಂಪು ಎರಡರ ನಡೆ ಹಾಗೂ ಮನೋಭಾವದ ವೈಜ್ಞಾನಿಕ ವಿಶ್ಲೇಷಣೆಯನ್ನು ಓದಬಹುದು.
ಇದರೊಂದಿಗೆ ಇನ್ನೂ ಹಲವಾರು ವೈಜ್ಞಾನಿಕ ವಿಚಾರಗಳು ಇಲ್ಲಿ ಸಿಗುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ