ಭಾನುವಾರ, ಏಪ್ರಿಲ್ 26, 2026

ಕುಟೀಚಕ


ಕುವೆಂಪು ಅವರ ಕುಟೀಚಕ ಕವನ ಸಂಕಲನದಿಂದ ಆಯ್ದ ಈ ಕವಿತೆಯ ಶೀರ್ಷಿಕೆ : ಕುಟೀಚಕ


ಸಾಕು ಈ ಬಹೂದಕ :

ಆಗು ನೀ ಕುಟೀಚಕ,

ಓ ನನ್ನ ಮಾನಸಾ !


ಅಲ್ಲಿ ಇಲ್ಲಿ ಅಲೆದುದಾಯ್ತು

ಅವರ ಇವರ ಕಂಡುದಾಯ್ತು

ಅದನು ಇದನು ಓದಿಯಾಯ್ತು

ಹುಡುಕಿ ತಡಕಿ ನೋಡಿಯಾಯ್ತು!


ಓ ನನ್ನ ಮಾನಸಾ,

ಸಾಕು ಈ ಬಹೂದಕ :

ಆಗು ನೀ ಕುಟೀಚಕ!


ಸಹ್ಯ ಹೈಮ ಅದ್ರಿಗಳಲಿ

ಬದರಿಕಾ ಕಾಶಿಗಳಲಿ

ರಾಮೇಶ್ವರ ಪೂರಿಗಳಲಿ

ಜಾತ್ರೆಯಾಯ್ತು ತೊಳಲಿ ತೊಳಲಿ !


ಓ ನನ್ನ ಮಾನಸಾ,

ಸಾಕು ಈ ಬಹೂದಕ :

ಆಗು ನೀ ಕುಟೀಚಕ!


ಕ್ಷೇತ್ರ ಯಾವುದಾದರೇನು ?

ತೀರ್ಥ ಯಾವುದಾದರೇನು ?

ದೇವರಾವುದಾದರೇನು?

ಅದೇ ನೀನು, ಇದೇ ನಾನು !


ಓ ನನ್ನ ಮಾನಸಾ,

ಸಾಕು ಈ ಬಹೂದಕ :

ಆಗು ನೀ ಕುಟೀಚಕ!


ಎಲ್ಲೆಲ್ಲೂ ಇರುವ ನಿನ್ನ,

ಗುರುವಿನಡಿಯ ಗುಡಿಯ ನಿನ್ನ,

ಅಲ್ಲಿ ಇಲ್ಲಿ ಅರಿಸಿ, ನನ್ನ

ಚರಣಕಾಯ್ತು ಅರಿವ ಬನ್ನ!


ಓ ನನ್ನ ಮಾನಸಾ,

ಸಾಕು ಈ ಬಹೂದಕ :

ಆಗು ನೀ ಕುಟೀಚಕ!


' ಶ್ರೀರಾಮಕೃಷ್ಣ ವಚನವೇದ ' ದಲ್ಲಿ ಬಹೂದಕ ಮತ್ತು ಕುಟೀಚಕ ಕುರಿತು ಹೀಗೆ ಹೇಳುತ್ತಾರೆ.

ಸಾಧಕರಲ್ಲಿ ಎರಡು ವಿಧ ; ಕುಟೀಚಕ, ಬಹೂದಕ. ಸಾಧಕದಲ್ಲಿ ಕೆಲವರಿದ್ದಾರೆ. ಅವರು ಬಹಳವಾಗಿ ತೀರ್ಥಯಾತ್ರೆ ಮಾಡುತ್ತಾರೆ. ಅವರು ಒಂದೇ ಜಾಗದಲ್ಲಿ ಬಹಳ ಕಾಲ ಇರಲಾರರು; ಅವರು ಅನೇಕ ತೀರ್ಥಸ್ಥಾನಗಳ ನೀರನ್ನು ಕುಡಿಯಲೇಬೇಕು. ಅವರೇ ಬಹೂದಕರು. ತೀರ್ಥಸ್ಥಾನಗಳನ್ನೆಲ್ಲ ಸುತ್ತಿ ಸುತ್ತಿ ತುಷ್ಟರಾದಾಗ, ಅವರು ಯಾವುದಾದರೂ ಒಂದೇ ಪ್ರದೇಶದಲ್ಲಿ ಕುಟೀರವನ್ನು ಕಟ್ಟಿಕೊಂಡು ವಾಸಿಸಲಾರಂಭಿಸುತ್ತಾರೆ. ಬಳಿಕ ನಿಶ್ಚಿಂತರಾಗಿ, ಚೇಷ್ಟಾ ಶೂನ್ಯರಾಗಿ ಭಗವಚ್ಚಿಂತನೆ ಮಾಡಲಾರಂಭಿಸುತ್ತಾರೆ. ಅವರೇ ಕುಟೀಚಕರು. 


ಕುವೆಂಪು ಅವರ ಈ ಕವಿತೆ ಮಾನವನ ಅಧ್ಯಾತ್ಮಿಕ ಅನ್ವೇಷಣೆಯ ಪ್ರಮುಖ ಘಟ್ಟವೊಂದನ್ನು ತೋರುತ್ತದೆ. ಅಲ್ಲಿ  ಮನಸ್ಸಿಗೆ ಬದಲಾವಣೆಯನ್ನು ಸೂಚಿಸುತ್ತಿದ್ದಾರೆ. ಹೊರಗಿನ ಅಲೆದಾಟವನ್ನು ನಿಲ್ಲಿಸಿ, ಒಳನೋಟವನ್ನು ಬೆಳೆಸಿಕೊಳ್ಳಲು ಮನಸ್ಸಿಗೆ ಸೂಚಿಸುತ್ತಿದ್ದಾರೆ.


ನಾವು ದೇವರಿಗಾಗಿ ಎಲ್ಲೆಲ್ಲೋ ಅಲೆದು, ಎಷ್ಟೋ ಜನರನ್ನು ಭೇಟಿ ಮಾಡಿ, ಹಲವಾರು ಪುಸ್ತಕಗಳನ್ನು ಓದಿ, ಸಾಕಷ್ಟು ಹುಡುಕಾಟ ನಡೆಸಿಯಾಗಿದೆ. ದೈಹಿಕ ಮತ್ತು ಮಾನಸಿಕ ಆಯಾಸದಿಂದ ಹೊರಬಂದು ಕುಟೀಚಕನಾಗಲು ಮನಸ್ಸಿಗೆ ಕರೆ ನೀಡುತ್ತಿದ್ದಾರೆ. 


ಹಿಮ ತುಂಬಿದ ಪರ್ವತಗಳು, ಸಹ್ಯಾದ್ರಿ, ಕಾಶಿ, ಬದರಿ, ಕಾಶಿ, ರಾಮೇಶ್ವರಗಳ ಪುಣ್ಯಯಾತ್ರೆಗಳಾಗಿವೆ. ಆದರೆ, ಅಲ್ಲಿ ಜನಜಂಗುಳಿಯ ಜಾತ್ರೆಯಲ್ಲಿ ತೊಳಲಾಡಿರುವುದನ್ನು ಹೇಳುತ್ತಾ.. ದೇವರು ಕೇವಲ ಒಂದು ನಿರ್ದಿಷ್ಟ ಪುಣ್ಯಕ್ಷೇತ್ರದಲ್ಲಿ ಮಾತ್ರವೇ ಇರುವುದಿಲ್ಲ ಒಂದೆಡೆ ನೆಲೆಸಿ, ಕುಟೀಚಕನಾಗಿ ಸಾಧನೆ ಮಾಡಿ  ದೇವರನ್ನು ಕಂಡುಕೊಳ್ಳಲು ಹೇಳುತ್ತಾರೆ.


ನಮ್ಮೊಳಗೆ ಇರುವ ಚೈತನ್ಯವೇ ದೇವರೆನ್ನುತ್ತಾ... ಕ್ಷೇತ್ರ, ತೀರ್ಥ, ದೇವರ ಹೊರಗಿನ ಹುಡುಕಾಟದಾಚೆಗೆ ನಮ್ಮೊಳಗಿನ ಚೈತನ್ಯ, ದೇವರ ಅಸ್ತಿತ್ವವನ್ನು ತೋರುತ್ತಾರೆ. 


ತನ್ನೊಳಗೆ, ಗುರುವಿನ ಪಾದದಡಿಯಲ್ಲಿರುವ ಮತ್ತು ಎಲ್ಲೆಲ್ಲೂ ಇರುವ ದೇವರನ್ನು ಹೊರಗೆ ಹುಡುಕುತ್ತಾ ಕಾಲುಗಳಿಗೆ ಆಯಾಸವಾಯಿತಷ್ಟೆ. ಹಾಗೆ, ಅಲೆದಾಟವನ್ನು ನಿಲ್ಲಿಸಿ, ಮನಸ್ಸನ್ನು ಸ್ಥಿರಗೊಳಿಸಿ ಒಳಗಣ್ಣಿನಿಂದ ನೋಡಲು ಮನಸ್ಸಿಗೆ ಕರೆ ಕೊಡುತ್ತಾರೆ. 


'ಆತ್ಮನಿವೇದನೆ'ಯ ಕುರಿತ ಕುವೆಂಪು ಅವರ ಈ ಕವಿತೆಯನ್ನು ನನಗೆ ಅರ್ಥವಾದಂತೆ ತೆರೆದಿಟ್ಟಿದ್ದೇನೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ