ಭಾನುವಾರ, ಏಪ್ರಿಲ್ 26, 2026

ಸ್ವಾಮಿ ವಿವೇಕಾನಂದರ ಬದುಕು ಭಾಷಣ ಪತ್ರಗಳು ಮತ್ತು ಬರಹಗಳು

ವಿವೇಕಾನಂದರೆಂಬ ಪರುಷಮಣಿ:

ಪರುಷಮಣಿಯ ಸ್ಪರ್ಶವಾದರೆ.. ಅದಕ್ಕೆ ಸ್ಪರ್ಶಿಸುವುದೆಲ್ಲವೂ ಚಿನ್ನವಾಗುತ್ತದೆ. ಸ್ವಾಮಿ ವಿವೇಕಾನಂದರ ವಾಣಿಗಳು, ಅವರ ಭಾಷಣಗಳು ಯುವಜನತೆಗೆ ತಲುಪಿದಾಗ ಅವರಲ್ಲಿ ಮಿಂಚಿನ ಸಂಚಾರವಾಗುವುದಂತೂ ಹೌದು. ಅವರ ಜೀವನೋತ್ಸಾಹ, ಧ್ಯೇಯ, ಧೈರ್ಯ ಎಲ್ಲರಿಗೂ ಮಾದರಿ. 

"ನಿಮ್ಮ ಮೇಲೆ ನೀವು ನಂಬಿಕೆಯಿಡಿ. ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ." ಎಂದು ತಮ್ಮ ಕುರಿತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಬಗೆಯನ್ನು ಹೇಳಿದವರು.


 ಬಾಲಕನ ಸರಳತೆ, ಯುವಕನ ಉತ್ಸಾಹ, ವಾರ್ಧಕ್ಯದ ತುಂಬು ಅನುಭವ, ತಾಯಿಯ ಮೃದು ಹೃದಯ, ಯೋಧನ ಯೋಧೃತ್ವ ಒಂದುಗೂಡಿರುವ ವ್ಯಕ್ತಿ, ಶಕ್ತಿ ಅವರು.


ವಿವೇಕಾನಂದರ ಬಾಲ್ಯ, ಬೆಳೆದ ಪರಿಸರ ಎಲ್ಲವೂ ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿತ್ತಾದರೂ.. ಅವರ ಮೇಲೆ ಪ್ರಮುಖವಾಗಿ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಗುರು ರಾಮಕೃಷ್ಣ ಪರಮಹಂಸರು.

"ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ.. ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು, ಸುಜ್ಞಾನದ ಕಡೆಗೆ ಕರೆದೊಯ್ಯುವುದೇ ಗುರು" ಎನ್ನುತ್ತಾರೆ ವಿವೇಕಾನಂದರು. 

ಹಾಗಾಗಿ, ಅವರು ದೇಶದಾದ್ಯಂತ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸುವಾಗ ಅದನ್ನು ವ್ಯಕ್ತಿಕೇಂದ್ರಿತವಾಗಿ ರೂಪಿಸುವುದಿಲ್ಲ. ಕಾರ್ಯಕೇಂದ್ರಿತವಾಗಿ ರೂಪಿಸುತ್ತಾರೆ.


ವಿವೇಕಾನಂದರು ಯಾವುದನ್ನೂ ಪರೀಕ್ಷಿಸದೆ ನಂಬಿದವರಲ್ಲ. ಪರೀಕ್ಷಿಸಿಯೇ ನಂಬುವಂತೆ ಶಿಷ್ಯರಿಗೂ ಹೇಳುತ್ತಿದ್ದರು. ಅಂತೆಯೇ.. ಗುರು ರಾಮಕೃಷ್ಣ ಪರಮಹಂಸರನ್ನು ಅವರು ಪರೀಕ್ಷಿಸಿಯೇ ನಂಬಿದವರು. ರಾಮಕೃಷ್ಣ ಪರಮಹಂಸರು ಹೊನ್ನು, ಮಣ್ಣುಗಳನ್ನು ಸಮವಾಗಿ ಭಾವಿಸಿದವರು. ಅವೆರಡನ್ನೂ ಸಮದೃಷ್ಟಿಯಿಂದ ನೋಡಿ ಹೊಳೆಯಲ್ಲಿ ಬಿಸುಟಿ ಸಾಧನೆ ಮಾಡಿದ್ದರು. ಅವುಗಳ ಸ್ಪರ್ಶದಿಂದಲೇ ಅವರ ದೇಹ ಕಂಪಿಸುತ್ತಿತ್ತು. ನರೇಂದ್ರರು ಅದನ್ನು ಅಭಿನಯವೋ..? ಸತ್ಯವೋ..? ಎಂದು ಕಂಡುಹಿಡಿಯಲು ಸಿದ್ದರಾಗಿ ಒಮ್ಮೆ ದಕ್ಷಿಣೇಶ್ವರಕ್ಕೆ ಬಂದಾಗ ಪರಮಹಂಸರು ಕೋಣೆಯಲ್ಲಿರಲಿಲ್ಲ. ಒಂದು ರೂಪಾಯಿ ತೆಗೆದು ಅವರ ಹಾಸಿಗೆಯಡಿಯಲ್ಲಿಟ್ಟಿದ್ದರು. ಗುರುಗಳು ಹಿಂತಿರುಗಿ ಬಂದು ಹಾಸಿಗೆ ಮೇಲೆ ಕುಳಿತುಕೊಳ್ಳಲು ಹೋದಾಗ ವಿದ್ಯುತ್ ಶಕ್ತಿಯನ್ನು ಸ್ಪರ್ಶಿಸಿದಾಗ ಉಂಟಾಗುವ ಕಂಪನದಂತೆ ಮಿಡುಕಿ ಹಿಂದೆ ಬಂದರು. ನಂತರ ಹುಡುಕಿ ನೋಡಿದರೆ ಅಲ್ಲಿ ನಾಣ್ಯವಿತ್ತು. ಮುಂದೆ ಪರಮಹಂಸರಿಗೆ ಈ ವಿಚಾರ ತಿಳಿದಾಗ ಶಿಷ್ಯನನ್ನು ಬಹಳವಾಗಿ ಶ್ಲಾಘಿಸಿದರು. 


"ನನ್ನ ದೃಷ್ಟಿಯಲ್ಲಿ ಶಿಕ್ಷಣದ ಸಾರವೇ ಮನಸ್ಸಿನ ಏಕಾಗ್ರತೆ. ಬರಿಯ ವಿಷಯ ಸಂಗ್ರಹವಲ್ಲ, ನಾನು ಇನ್ನೊಮ್ಮೆ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕಾಗಿ ಬಂದರೆ ನಾನು ಮೊದಲು ಏಕಾಗ್ರತೆ ಮತ್ತು ಅನಾಸಕ್ತಿಯ ಶಕ್ತಿಯನ್ನು ಗಳಿಸಿ ಆನಂತರ ನನ್ನ ಇಚ್ಛೆಯಂತೆ ವಿಷಯಗಳನ್ನು ಸಂಗ್ರಹಿಸುತ್ತೇನೆ" ಎನ್ನುತ್ತಾರೆ. 

ಕಳ್ಳನಿಗೂ ಕದಿಯುವ ವಿಚಾರದಲ್ಲಿ ಏಕಾಗ್ರತೆ ಇರಬೇಕು. ಶಬ್ಧಗಳನ್ನು ಆಲಿಸುವ, ಸುತ್ತಮುತ್ತಲಿನದ್ದನ್ನು ಗಮನಿಸುವ, ಗ್ರಹಿಸುವ ಏಕಾಗ್ರತೆ ಎನ್ನುತ್ತಾರೆ. 


ಚಿಕ್ಕಂದಿನಲ್ಲಿ ಅವರು ಧ್ಯಾನದಲ್ಲಿ ನಿರತರಾಗಿರುವಾಗ ಹಾವು ಬಂತೆಂದು ಸುತ್ತಮುತ್ತಲಿನ ಮಕ್ಕಳೆಲ್ಲರೂ ಹೆದರಿ ಓಡಿರುವಾಗ ಅವರಿಗೆ ಅದರ ಅರಿವೇ ಇರುವುದಿಲ್ಲ. ಹೀಗಿತ್ತು ನರೇಂದ್ರನ / ವಿವೇಕಾನಂದರ ಏಕಾಗ್ರತೆ. ಇನ್ನು ಏಕಸಂಧಿಗ್ರಾಹಿ ಎನ್ನುವಂತಹ ನೆನಪಿನ ಶಕ್ತಿ ಅವರದ್ದು.. ತಾವು ಓದಿದ ವಿಚಾರಗಳನ್ನು ಪುಟ ಸಂಖ್ಯೆ ಹಾಗೂ ಸಾಲುಗಳ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವಂತಹ ಜ್ಞಾಪಕ ಶಕ್ತಿ. ಗ್ರಂಥಾಲಯದಿಂದ ಪ್ರತಿದಿನವೂ ದಪ್ಪ-ದಪ್ಪದ, ಬೇರೆ-ಬೇರೆ ಪುಸ್ತಕಗಳನ್ನು ಕೊಂಡೊಯ್ದು ಮರುದಿನ ವಾಪಾಸ್ ಮಾಡುತ್ತಿದ್ದಾಗ ಗ್ರಂಥಪಾಲಕರು ಪರೀಕ್ಷಿಸಿದ ಪರೀಕ್ಷೆಯಲ್ಲಿ ಅವರು ಕೇಳಿದ ಪ್ರಶ್ನೆಗೆ ಪುಟ ಹಾಗೂ ಸಾಲಿನ ಜೊತೆಗೆ ಉತ್ತರಿಸಿ ತಮ್ಮ ಚಾತುರ್ಯವನ್ನು ತೋರಿದ್ದವರವರು. ಇವು ಕೆಲವು ನಿದರ್ಶನ ಗಳಷ್ಟೇ..


1893ನೇ ಸೆಪ್ಟೆಂಬರ್ 11ರಂದು ನಡೆದ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ವಿವೇಕಾನಂದರ ಮಾತುಗಳು 125 ವರ್ಷಗಳು ಕಳೆದರೂ 'ಪ್ರಭಾವಿ ಭಾಷಣ' ವೆಂದು ಪರಿಗಣಿಸಲ್ಪಟ್ಟಿದೆ. ವಿವೇಕಾನಂದರ ವಿಷಯ ಮಂಡನೆಯ ಜೊತೆಗೆ ಅವರ ವಾಗ್ಝರಿ, ಪಾಂಡಿತ್ಯ, ತೇಜಸ್ಸು ಎಲ್ಲವೂ ಸೆಳೆಯುತ್ತವೆ. 

ಶ್ರೀಮತಿ ಆ್ಯನಿ ಬೆಸೆಂಟ್ ಅವರನ್ನು ಸನ್ಯಾಸಿ ಎನ್ನುವುದಕ್ಕಿಂತ ಯೋಧ ಎನ್ನುವುದೇ ಯೋಗ್ಯ ಎನ್ನುತ್ತಾರೆ. ಅವರನ್ನು 'ಯೋಧ ಸನ್ಯಾಸಿ' ಎಂದು ಕರೆದರು. 


ಮೊದಲ ನೋಟವೇ ವ್ಯಕ್ತಿಯನ್ನು ಸೆಳೆಯುವಂತೆ, ಕೇವಲ ತಮ್ಮ ಮೊದಲ ಮಾತಿನಿಂದಲೇ ಇಡೀ ಸಭಾಂಗಣವನ್ನು ತಮ್ಮ ಮಾತಿನೆಡೆಗೆ ಸೆಳೆದವರು. 

"ಅಮೆರಿಕಾದ ಸೋದರಿಯರೇ ಮತ್ತು ಸೋದರರೇ"

ಈ ವಿಭಿನ್ನ ಸಂಭೋಧನೆಯೇ ಅವರ ವೈಶಿಷ್ಟವನ್ನು ತಿಳಿಸಲು ಸಾಕಲ್ಲವೇ..? ಅಷ್ಟೇ ಅಲ್ಲದೆ, ಅಲ್ಲಿ ಬೇರಾರೂ ಸರ್ವಧರ್ಮ ಸಮನ್ವಯದ ಪ್ರಸ್ತಾಪವನ್ನೇ ಎತ್ತಿರಲಿಲ್ಲ. ಅದರ ಕುರಿತಾಗಿ ಮಾತನಾಡುತ್ತಾರೆ. ಸೆಪ್ಟೆಂಬರ್ 19ರಂದು ವಿವೇಕಾನಂದರು ಹಿಂದೂಧರ್ಮದ ಕುರಿತ ಭಾಷಣವನ್ನು ಮಾಡುತ್ತಾರೆ. 


ಸರ್ವಧರ್ಮ ಸಮನ್ವಯವನ್ನು ಸಾರಿ ಮಾಡಿದ ಭಾಷಣದಲ್ಲಿ ಪ್ರಮುಖವಾಗಿ ಎರಡು ಶ್ಲೋಕಗಳನ್ನು ಉದ್ಧರಿಸಿ ಅವುಗಳ ಭಾವಾರ್ಥವನ್ನು ಸುಲಲಿತವಾಗಿ ತಿಳಿಸುತ್ತಾರೆ. ಅವು ಇಂತಿವೆ.


ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|

ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||

ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|

ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||


ಭಾವಾರ್ಥ : "ಭಿನ್ನ-ಭಿನ್ನ ಸ್ಥಾನಗಳಿಂದ ಉಗಮವಾದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ ಭಗವಂತ”


ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|

ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಭಾವಾರ್ಥ : "ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ.. ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ"


ಸ್ವಾಮಿ ವಿವೇಕಾನಂದರು ಸಾಧಾರಣವಾಗಿ ತಮ್ಮ ಭಾಷಣಗಳನ್ನು ಬರೆದು ಅಥವಾ ಕಂಠಪಾಠ ಮಾಡಿ ಸಭೆಗಳಲ್ಲಿ ಒಪ್ಪಿಸುತ್ತಿರಲಿಲ್ಲ. ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣವೂ ಪೂರ್ವತಯಾರಿ ಮಾಡಿಕೊಂಡದ್ದಲ್ಲ. ನಿರರ್ಗಳವಾದ ಅವರ ಮಾತುಗಳು ಹೃದಯದಿಂದ ಹೊಮ್ಮುತ್ತಿದ್ದವು. ಅದರ ಅಮೂಲ್ಯವಾದ ಉಪದೇಶಗಳನ್ನು ಮುದ್ರಿಸಿ ಲೋಕಕ್ಕೆ ಬೆಳಕು ದೊರಕುವಂತೆ ಮಾಡಲು ಶಿಷ್ಯರು ಯೋಚಿಸಿ ಸ್ವಾಮಿಗಳ ಆಶುಭಾಷಣವನ್ನು ಬರೆದುಕೊಳ್ಳಲು ಕ್ಷಿಪ್ರ ಲಿಪಿಕಾರನನ್ನು ಗೊತ್ತು ಮಾಡಿದರಾದರೂ... ಅವರ ವಾಕ್ಪ್ರವಾಹದ ವೇಗವನ್ನು ಹಿಂಬಾಲಿಸಲಾಗಲಿಲ್ಲ. ಅಲ್ಲದೇ.. ಅಭಿಪ್ರಾಯಗಳು ಗಹನವಾಗಿಯೂ ಇದ್ದುದರಿಂದ ಆತ ಸೋತನು. ಇಬ್ಬರು ಕ್ಷೇತ್ರ ಲಿಪಿಕಾರರ ಪರಿಸ್ಥಿತಿ ಹೀಗೆಯೇ ಆಯಿತು. 


ಇಂಗ್ಲೆಂಡಿನಿಂದ ನ್ಯೂಯಾರ್ಕ್ ಗೆ ಬಂದಿದ್ದ ಜೆ. ಜೆ ಗುಡ್ವಿನ್ ಈ ಕೆಲಸದಲ್ಲಿ ಸಮರ್ಥನಾದನು. ಅಷ್ಟೇ ಅಲ್ಲದೆ.. ವಿವೇಕಾನಂದರ ಪ್ರಿಯ ಶಿಷ್ಯನೂ ಆದನು. ಅವರ ಕೃತಿಗಳ ಮುಕ್ಕಾಲು ಪಾಲು ಗುಡ್ವಿನ್ ಕ್ಷಿಪ್ರಲಿಪಿಯಿಂದ ಸಂಗ್ರಹಿಸಲ್ಪಟ್ಟಿದ್ದು. ಆತ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಾಗ ಮರಣ ಹೊಂದುತ್ತಾನೆ. ಆಗ ವಿವೇಕಾನಂದರು "ಇಂದು ನನ್ನ ಬಲಗೈ ಮುರಿದು ಹೋಯಿತು. ನನಗಾದ ನಷ್ಟ ಅಷ್ಟಿಷ್ಟೆಂದು ಹೇಳಲಾಗದು." ಎಂದು ಉದ್ಗರಿಸುತ್ತಾರೆ. 


ವಿವೇಕಾನಂದರು ಎಲ್ಲೆಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಇವು ಮೂರು ಗ್ರಂಥಗಳಾಗಿ ಅಚ್ಚಾಗಿವೆ ರಾಜಯೋಗ, ಭಕ್ತಿಯೋಗ ಹಾಗೂ ಕರ್ಮಯೋಗ. 


ವಿವೇಕಾನಂದರು ಕಲ್ಕತ್ತಾದಲ್ಲಿ ಇದ್ದ ಸಮಯದಲ್ಲಿ ಕೆಲವು ಜನ ತರುಣರಿಗೆ ಬ್ರಹ್ಮಚರ್ಯ ಸನ್ಯಾಸ ದೀಕ್ಷೆ ಕೊಡಬೇಕೆಂದು ನಿರ್ಣಯಿಸಿದಾಗ ಕೆಲವು ಸೋದರ ಸನ್ಯಾಸಿಗಳು ಸಮ್ಮತಿಸುವುದಿಲ್ಲ. ಆಗ ವಿವೇಕಾನಂದರು ಹೇಳುವ ಮಾತು ಇದು. "ಪಾಪಿಗಳನ್ನು ಉದ್ದರಿಸಲು ನಾವೇ ಅಳುಕಿದರೆ ಮತ್ತಾರು ಅವರನ್ನು ಮೇಲೆತ್ತಬೇಕು..? ಅಲ್ಲದೆ, ಯಾವನು ತನ್ನ ಹೀನ ಜೀವನವನ್ನು ಬಿಟ್ಟು ಉನ್ನತ ಜೀವನವನ್ನು ಹಿಡಿಯಲು ಯತ್ನಿಸುತ್ತಾನೋ.. ಅಂತವರಿಗೆ ನಾವು ನೆರವಾಗಲೇಬೇಕು. ಒಬ್ಬನು ಪಾಪಿಯಾಗಿದ್ದರೂ.. ನೀವು ಆತನನ್ನು ತಿದ್ದಲಾರದೆ ಹೋದರೆ ನಿಮಗೆ ಕಾಷಾಯವಸ್ತ್ರವೇಕೆ..? ನಿಮಗೆ ಆಚಾರ್ಯರ ವೇಷವೇಕೆ..?"

ನಂತಸೋದರ ಸನ್ಯಾಸಿಗಳ ಮನ ಪರಿವರ್ತನೆಯಾಗಿ ಅವರೆಲ್ಲರಿಗೂ ಸನ್ಯಾಸದೀಕ್ಷೆ ಕೊಡಲು ಒಪ್ಪುತ್ತಾರೆ.  


"ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸನ್ಯಾಸಿಯ ಜನ್ಮ. ನೆರವಾಗುವ ಬಾಳನ್ನು ಬಾಳಬೇಕು. ನರಳುವ ಲಕ್ಷಾಂತರ ದುಃಖಗಳನ್ನು ಸಂತೈಸಬೇಕು. ನೀವು ಎಚ್ಚರಗೊಳ್ಳಿ. ಇತರರನ್ನು ಎಚ್ಚರಗೊಳಿಸಿ. ಏಳಿ! ಮೇಲೇಳಿ! ಗುರಿ ದೊರಕುವವರೆಗೂ ನಿಲ್ಲಬೇಡಿ! ಮುಂದೆ ನುಗ್ಗಿ! ಉತ್ತಿಷ್ಠತ, ಜಾಗೃತ, ಪ್ರಾಪ್ಯ, ವರಾನ್ ನಿಭೋಧತ! " ಎಂಬ ಮಾತನ್ನು ಉಪದೇಶಿಸುತ್ತಾರೆ.


ಸ್ವಾಮಿ ವಿವೇಕಾನಂದರು ಹೊಸ ತತ್ವವನ್ನು ಜಾರಿಗೆ ತಂದವರಲ್ಲ. ಹೊಸ ಧರ್ಮವನ್ನು ಸ್ಥಾಪನೆ ಮಾಡಿದವರಲ್ಲ. ಬದಲಾಗಿ ನಮ್ಮ ಗೀತೆ, ಉಪನಿಷತ್ತುಗಳ ಸಂದೇಶದಂತೆ ಜೀವನವನ್ನು ತಿದ್ದಿದವರು. ತಮ್ಮ ಸಿಂಹವಾಣಿಯಲ್ಲಿ ಜಗತ್ತಿಗೆ ಬೋಧಿಸಿದವರು. ಜೀವನವನ್ನು ಹಳಿಯದೆ, ಜೀವನೋತ್ಸಾಹವನ್ನು ತುಂಬುವುದೇ ಇವರ ಸಂದೇಶ. ನಿರಾಸೆಯ ಕತ್ತಲೆಯಲ್ಲಿಯೂ.. ಆಸೆಯ ಹಣತೆಯನ್ನೇ ಹಚ್ಚುವುದು ಇವರ ವಾಣಿ.


"ಆಶಾವಾದಿ ಎಲ್ಲಾ ಅನಾಹುತದಲ್ಲಿಯೂ ಒಂದು ಸದವಕಾಶವನ್ನು ನೋಡುತ್ತಾನೆ, ನಿರಾಶವಾದಿ ಎಲ್ಲಾ ಅವಕಾಶದಲ್ಲಿಯೂ ಒಂದು ಅನಾಹುತವನ್ನು ನೋಡುತ್ತಾನೆ." ಎನ್ನುವ ಉಕ್ತಿ ಆಶಾವಾದಿಗಳಾಗಿ ಬದುಕು ಸಾಗಿಸಲು ಜೊತೆಗೆ ಅನುಭವಾತ್ಮಕ ವಿವೇಕವೂ ಬೆರೆತು, ವಾಸ್ತವತೆಯಿಂದ ಬದುಕಲು ಹೇಳುತ್ತದೆ. 


****************


ವಿವೇಕಾನಂದರು ಮಗನನ್ನು ಕಳೆದುಕೊಂಡ ಡಾಕ್ಟರ್ ತಂದೆಯೊಬ್ಬರಿಗೆ ಪತ್ರದಲ್ಲಿ ಬರೆದ ಮಾತುಗಳಿವು. 


"ದೇವರು ಕೊಟ್ಟ, ದೇವರು ಕಿತ್ತುಕೊಂಡ. ಆತನ 

ನಾಮವೇ ಧನ್ಯವಾಗಲಿ.'' ಯಾವುದೂ ನಾಶವಾಗುವುದಿಲ್ಲವೆಂಬುದು 

ಮಾತ್ರ ನಮಗೆ ಗೊತ್ತು. ಬಂದುದಕ್ಕೆ ಪೂರ್ಣಶಾಂತಿಯಿಂದ ತಲೆ ಬಾಗುವುದೇ ನಮ್ಮ ಕೆಲಸ. ಗುಂಡಿನ ಬಾಯಿಯ ಎದುರಿಗೆ ಹೋಗೆಂದು ಸಿಪಾಯಿಗೆ ಆಜ್ಞಾಪಿಸಿದ ದಂಡನಾಯಕನನ್ನು ದೂರುವ ಹಕ್ಕು 

ಸಿಪಾಯಿಗೆಲ್ಲಿಯದು? ಮಗನನ್ನು ಕಳೆದುಕೊಂಡವನನ್ನು ಆ ಸರ್ವೇಶನು ಸಂತವಿಸಲಿ. ಈ ವಿಪತ್ತು ಆತನನ್ನು ಕೃಪಾಮಯಿಯಾದ ಆ ಜಗನ್ಮಾತೆಯ ಹತ್ತಿರಕ್ಕೆ ಒಯ್ಯಲಿ,


****************


ವಿವೇಕಾನಂದರು ತಮ್ಮ ಶಿಷ್ಯರಿಗೆ ಪತ್ರದಲ್ಲಿ ಉಲ್ಲೇಖಿಸಿದ ಮಾತುಗಳು ಇವು :


ಎನ್ನ ಕೆಚ್ಚೆದೆಯ ಮಕ್ಕಳಿರಾ ! ನಿಮ್ಮಿಂದ ನನಗೆ ಹೆಮ್ಮೆ............. ಆಶೆಯಿಡಿರಿ. ನಿರಾಶರಾಗದಿರಿ, ಪ್ರಾರಂಭವು  ಇಂತಹದಾಗಿರಲು, ನೀನು ನಿರಾಶನಾಗುವೆಯಾದರೆ ನೀನು ಹುಚ್ಚ.


****************


ಪರಮಹಂಸಾಚಲದ

ಶಿವಗಂಗೆಯನು ತಂದು

ಜಗಕೆಲ್ಲ ಹರಿಸಿರುವ ಯೋಗಪುರುಷ

ಮುಟ್ಟಿದ್ದು ಹೊನ್ನಾಯ್ತು ದಿವ್ಯಪುರುಷ 

( ಜಿ. ಎಸ್. ಎಸ್ ಅವರ ವಿವೇಕಾನಂದ ಕವಿತೆಯ ಸಾಲುಗಳು)


"ನಾನೊಂದು ರೂಪರಹಿತ ಧ್ವನಿ" ಎಂದು ವಿವೇಕಾನಂದರು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ದ್ವನಿಸಿರುವ ವಾಣಿಗಳನ್ನು ಮನದಲ್ಲಿ ಸ್ಮರಿಸಿದರೆ ಸಾಕು. ಸಕಾರಾತ್ಮಕ ಭಾವ ಮೂಡುವುದಕ್ಕೆ.. 


ಆಕರಗಳು :

1. ಸ್ವಾಮಿ ವಿವೇಕಾನಂದ - ಕುವೆಂಪು


2. ಪರಿಪೂರ್ಣ ವ್ಯಕ್ತಿತ್ವ - ಸ್ವಾಮಿ ನಿತ್ಯಸ್ಥಾನಂದ


3. ಸ್ವಾಮಿ ವಿವೇಕಾನಂದರವರ ಪತ್ರಗಳ ಕನ್ನಡದ ಅನುವಾದ (ಪ್ರಥಮ ಭಾಗ) ನಂಗಪುರಂ ವೆಂಕಟೇಶಯ್ಯಂಗಾರ್


4. ಸ್ವಾಮಿ ವಿವೇಕಾನಂದ (ಸಂಕ್ಷಿಪ್ತ ಜೀವನ) - ಸ್ವಾಮಿ ಶಾಂಭವಾನಂದ


5. ಬದುಕಿದರೆ ಹೀಗೇ ಬದುಕಬೇಕು (ವಿವೇಕಾನಂದರ ಜೀವನ ಚರಿತ್ರೆ ) - ಡಾ. ಗುರುರಾಜ ಕರ್ಜಗಿಯವರ ಯೂಟ್ಯೂಬ್ ವಿಡಿಯೋ

6. ಚೆನ್ನೈನ ವಿವೇಕಾನಂದ ಹೌಸ್ ನಲ್ಲಿ ನೋಡಿದ ಭಾಷಣ ಮತ್ತು ಅವರ ಜೀವನದ ಕುರಿತ 3ಡಿ ಮತ್ತು ವರ್ಚುಯಲ್ ರಿಯಾಲಿಟಿ ಶೋಗಳು 



~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ