ಎಮ್ಮೆಯ ಖೆಡ್ಡಾ (ಲಲಿತ ಪ್ರಬಂಧ)
ಲಲಿತಮ್ಮ ಡಾ. ಚಂದ್ರಶೇಖರ
****************
ಆನೆಯ ಖೆಡ್ಡಾದ ಕುರಿತು ಕೇಳಿರುತ್ತೇವೆ. ಆದರೆ, ಇದು ಎಮ್ಮೆಯ ಖೆಡ್ಡಾ. ಶೀರ್ಷಿಕೆ ನನಗೂ ಕುತೂಹಲ ಹುಟ್ಟಿಸಿತು.
ಇದು ಗ್ರಾಮದಲ್ಲಿ ಭಟ್ಟರ ಮನೆಯಲ್ಲಿ ನಡೆದ ಪ್ರಸಂಗ. ಭಟ್ಟರ ದೊಡ್ಡ ಕುಟುಂಬದಲ್ಲಿ ಆರು ಜನ ಗಂಡುಮಕ್ಕಳು, ಹಾಗೂ ಆರು ಜನ ಹೆಣ್ಣುಮಕ್ಕಳು. ಈ ಕುಟುಂಬದ ಕುರಿತು ಪರಿಚಯಿಸುವಾಗ
"ಅವರ ಕಾಲದಲ್ಲಿ ಇಂದಿನಂತೆ ಮಾತೆತ್ತಿದರೆ.. ಮಿತ ಸಂತಾನ, ಮಿತ ಸಂತಾನ ಎಂದು ಬೊಬ್ಬೆ ಇಡುವ ಮಂದಿ ಇರಲಿಲ್ಲ"
"ಫ್ಯಾಮಿಲಿ ಪ್ಲಾನಿಂಗ್ ಎಂದು ಭೋದಿಸುವ ವಿಲೇಜ್ ವರ್ಕರುಗಳೂ ಇಲ್ಲ. ಇಂಗ್ಲಿಷ್ ಅಷ್ಟಾಗಿ ಪ್ರಚಾರದಲ್ಲಿ ಇರಲಿಲ್ಲ."
"ಹೋಗಲಿ ಭಟ್ಟರ ಹೆಂಡತಿ ಮಾಲಾಕ್ಷಮ್ಮನವರಾದರೂ ಮಹಿಳಾ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ರೇಡಿಯೋ ಕಾರ್ಯಕ್ರಮದಲ್ಲಿ ಕುಟುಂಬ ಯೋಜನೆ ಕೇಳೋಕೆ ಆಗ ಹಳ್ಳಿಯಲ್ಲಿ ಇನ್ನೂ ಎಲೆಕ್ಟ್ರಿಕ್ ಸಿಟಿ ಬಂದಿರಲಿಲ್ಲ. ಇನ್ನೂ ರೇಡಿಯೋ ವಿಚಾರ ದೂರವಾಯಿತು."
"ಪೇಪರ್ ಓದೋಷ್ಟು ಮಾಲಾಕ್ಷಮ್ಮನವರು ಅಕ್ಷರಸ್ಥೆಯಲ್ಲ. ಛತ್ರದಂತಹ ಆ ಮನೆಯಲ್ಲಿ ಪುರುಸೊತ್ತೆಲ್ಲಿ ?"
ಎನ್ನುತ್ತಾ ಅಂದಿನ ಕಾಲಘಟ್ಟ ಹಾಗೂ ಸುತ್ತಲಿನ ಪರಿಸರ ಮತ್ತು ಮನೆಯ ವಾತಾವರಣವನ್ನು ಕಟ್ಟಿಕೊಟ್ಟಿರುವ ಪರಿಯನ್ನು ಕಾಣಬಹುದು.
ಭಟ್ಟರ ಕುರಿತು ಪರಿಚಯಿಸುವಾಗ ಅವರು ಸಾತ್ವಿಕರು ಹಾಗೂ ಆಚಾರವಂತರು ಎಂದು ಹೇಳುತ್ತಾರಾದರೂ.. ಮೈಮುರಿದು ಕೆಲಸ ಕಾರ್ಯ ಮಾಡದ ಅವರ ವರ್ತನೆಯನ್ನು ಹೀಗೆ ಬಿಚ್ಚಿಡುತ್ತಾರೆ.
"ಮೂರು ತಲೆಮಾರುಗಳಷ್ಟು ಕುಳಿತು ತಿಂದರೂ ಸವೆಯದಷ್ಟು ಆಸ್ತಿಯನ್ನು ಭಟ್ಟರ ತಂದೆ ಸಂಪಾದಿಸಿಟ್ಟಿದ್ದರು.
ಬಹುಶಃ, ಭಟ್ಟರ ತಂದೆ ತ್ರಿಕಾಲ ಜ್ಞಾನಿಗಳಾಗಿರಬಹುದು. ಇಲ್ಲವಾದರೆ, ತಮ್ಮ ಮಗ ಮುಂದೆ ಸುಖ ಜೀವನ ನಡೆಸುವವ ಎಂದು ತಿಳಿದು ಆಸ್ತಿ ಮಾಡಿಡಲಾಗುತ್ತಿತ್ತೇ ?"
ಇವು ಲಲಿತಮ್ಮ ಡಾ. ಚಂದ್ರಶೇಖರ ಅವರ ಲಲಿತ ಪ್ರಬಂಧದ ಶೈಲಿಯ ಒಂದೆರಡು ಉದಾಹರಣೆಗಳು.
ಇಂತಹ ಭಟ್ಟರ ಸುಖ ಸಂಸಾರದಲ್ಲಿ ಅವರು 400 ರೂಪಾಯಿ ಕೊಟ್ಟು ಕೊಂಡು ತಂದಿದ್ದ ಸೀಮೆಎಮ್ಮೆ ನಾಲ್ಕು ದಿನದಿಂದ ಕಾಣೆಯಾದಾಗ ಅದನ್ನು ಹುಡುಕದಿದ್ದ ಜಾಗವಿರಲಿಲ್ಲ. ಎಮ್ಮೆಯ ಯೋಚನೆಯಿಂದ ಭಟ್ಟರು ಚಿಂತಕ್ರಾಂತರಾಗಿದ್ದರು. ಜ್ಯೋತಿಷ್ಯ ಶಾಸ್ತ್ರ, ದೇವಿಗೆ ಹರಕೆ ಕಟ್ಟಿ ಎಲ್ಲವನ್ನೂ ಮಾಡಿಯಾಗಿತ್ತು. ಅವರ ಹಿತೈಷಿಗಳು ಹೇಗಿದ್ದರು ಎಂಬುದನ್ನೂ ಕಟ್ಟಿಕೊಟ್ಟಿರುವ ಪರಿ ಓದಿ ನೋಡಬೇಕು.
ಹೀಗೆ ಎಮ್ಮೆಯ ಅನ್ವೇಷಣೆಯಲ್ಲಿದ್ದವರಿಗೆ.. ಎಮ್ಮೆ ಕಾಣೆಯಾದ ನಾಲ್ಕನೇ ದಿನದ ಸಂಜೆ ಹಿತ್ತಲ ಕಡೆಯಿಂದ ಬಂದ ದುರ್ನಾತ ತಡೆಯಲಾಗಲಿಲ್ಲ. ಆಳು-ಕಾಳುಗಳು ಹುಡುಕಿದರೂ ಆ ದುರ್ನಾತದ ಮೂಲ ಸಿಗಲಿಲ್ಲ.
"ಮೂಲೆಯ ಹಳ್ಳದ ಕಡೆಯಿಂದ ಸಿಕ್ಕ ಆ ಸುವಾಸನೆಯನ್ನು ಹುಡುಕಿ" ಹೊರಟವರಿಗೆ ಎಮ್ಮೆ ಸಿಕ್ಕಿದ್ದು ಹೀಗೆ..
"ಈಗಿನಂತೆ ನವೀನವಾದ ಫ್ಲಶ್ ಗಳಿಲ್ಲದ ಕಾಲ ಅದು. ಎಲ್ಲಾ ಸಾರವನ್ನು ಇರಿ ಪುಟ್ಟ ಹಳ್ಳವಾಗಿದ್ದ ಅದರ ಮೇಲೆ ಸೊಂಪಾಗಿ ಸೊಪ್ಪು-ಸದೆ, ಗಿಡಗಳು ಚೆನ್ನಾಗಿ ಬೆಳೆದಿತ್ತು. ಆಳು-ಕಾಳುಗಳೆಲ್ಲ ಮೂಗು ಮುಚ್ಚಿಕೊಂಡು ಅತ್ತ ಹೋಗಿ ನೋಡಿದಾಗ ಎಮ್ಮೆಯ ಕೊಂಬುಗಳೆರಡು ಮಾತ್ರ ಮೇಲೆ ಕಾಣುತ್ತಿತ್ತು.
ಭಟ್ಟರ ಮನೆಯ ಪುರಾತನವಾದ ವೈತರಣಿ ಹಳ್ಳದಲ್ಲಿ ಬೆಳೆದಿದ್ದ ಸೊಪ್ಪನ್ನು ಸೊಂಪಾಗಿ ಮೇಯಲು ಹೋಗಿದ್ದ ಎಮ್ಮೆ ವೈತರಣಿಗೆ ಬಿದ್ದು .... ಅದರಿಂದ ಈಜಿ ಬರಲಾಗದೆ ಒದ್ದಾಡಿ ಎಮ್ಮೆ ಸ್ವರ್ಗಸ್ಥವಾಗಿತ್ತು."
ಆದರೆ, ಇಲ್ಲಿಂದ ಮುಂದಿನದು ಮತ್ತೊಂದು ಸಮಸ್ಯೆಯ ಸರಪಳಿ. ದುರ್ನಾತ ಮತ್ತು ಸುತ್ತಲಿನವರ ಕಾಟ ತಡೆಯಲಾಗದೆ ಭಟ್ಟರು ಆ ಎಮ್ಮೆಯನ್ನು ಅಲ್ಲಿಂದ ಮೇಲೆತ್ತಿದವರಿಗೆ ಒಂದು ಎಕರೆ ಜಮೀನು ಕೊಡುತ್ತೇನೆಂದು ಘೋಷಿಸಿದರು. ಆದರೆ, ದುರ್ನಾತಕ್ಕೆ ಬಾಗಿಲವರೆಗೂ ಬಂದು ಹೊರ ನಡೆದಿದ್ದವರೇ ಹೆಚ್ಚು. ಒಂದಲ್ಲಾ ಹತ್ತು ಎಕರೆ ಜಮೀನು ಕೊಡುತ್ತೇನೆಂದರೂ ಯಾರು ಮುಂದೆ ಬರಲಿಲ್ಲ.
"ಕೊನೆಗೆ ಇನ್ನೇನೂ ಪರಿಹಾರ ಮಾರ್ಗವಿಲ್ಲದೆ ಎಮ್ಮೆಯ ಖೆಡ್ಡಾದ ವೈತರಣಿ ಹಳ್ಳದ ತುಂಬಾ ಗಾಡಿಯಲ್ಲಿ ಕಲ್ಲು-ಮಣ್ಣುಗಳನ್ನು ತರಿಸಿ ತುಂಬಿಸಿ ಎಮ್ಮೆಯನ್ನು ನೆಲಸಮಾಧಿ ಮಾಡಿಸಿದರು."
ಈ ಪ್ರಸಂಗವನ್ನು ಇದಾದ ಎಷ್ಟೋ ವರ್ಷಗಳ ನಂತರ ಭಟ್ಟರ ಮೊಮ್ಮಗಳ ಮದುವೆಗಾಗಿ ಗ್ರಾಮಕ್ಕೆ ಹೋಗಿದ್ದಾಗ ಹಿತ್ತಲ ಕಡೆ ಕಂಡು ನೋಡಿ ನೆನಪಿಸಿಕೊಂಡ ಪ್ರಸಂಗವನ್ನು ಲೇಖಕಿ ಇಲ್ಲಿ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ.
(1975 ಆರತಿ ಮಹಿಳಾ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ)
**************
ನನಗೆ ಎಲ್ಲಾ ಲೇಖಕಿಯರ ಬರಹಗಳನ್ನು ಓದುವ ಆಸೆ ಇದ್ದರೂ.. ಹಿರಿಯ ಲೇಖಕಿಯರ ಪುಸ್ತಕದ ಲಭ್ಯತೆ ನನ್ನ ಮಿತಿಯಲ್ಲಿ ಸಿಗಲಿಲ್ಲ. ಹಾಗಾಗಿ, ಅವರ ಯಾವುದಾದರೂ ಬಿಡಿ ಬರಹಗಳನ್ನಾದರೂ ಓದೋಣ ಎಂದು ಹುಡುಕಿದಾಗ ಸಿಕ್ಕ.. ಓದಿದ ಸಾಹಿತ್ಯವನ್ನು ಪರಿಚಯಿಸಿದ್ದೇನೆ ಹಾಗೂ ಪರಿಚಯಿಸಲಿದ್ದೇನೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ