ಭಾನುವಾರ, ಏಪ್ರಿಲ್ 26, 2026

ಭ್ರಾತೃಪ್ರೇಮ


ಭ್ರಾತೃಪ್ರೇಮ/ ಸಹೋದರ ವಾತ್ಸಲ್ಯ ರಕ್ಷಾಬಂಧನವಾಗಿ ಸಹೋದರನ ಮೇಲಿನ ಅಕ್ಕರೆ ಹಾಗೂ ಆತನ ಪ್ರೀತಿ-ವಾತ್ಸಲ್ಯ, ರಕ್ಷಣೆ ಪಡೆಯುವ ಸಂಕೇತವಾಗಿ ಆಚರಿಸಲಾಗುತ್ತಿದೆ. ಇದು ಸಾಂಕೇತಿಕವಾಗಿ ಆದರೂ ಭ್ರಾತೃಪ್ರೇಮ ಬೆಲೆಕಟ್ಟಲಾಗದು. ಅದರಲ್ಲೂ ಹೆಣ್ಣುಮಕ್ಕಳಿಗೆ ತಮ್ಮ ಅಣ್ಣ-ತಮ್ಮಂದಿರ ಹೆಗಲು ಸಿಕ್ಕರಂತೂ ಆಕೆಗೆ ನೂರಾನೆ ಬಲವಿದ್ದಂತೆ. ಇದನ್ನು ಜನಪದರು ಬಹಳ ಸುಂದರವಾಗಿ ಹೇಳಿದ್ದಾರೆ. 


ಹೆಣ್ಣಿನ ಜನುಮಕೆ ಅಣ್ಣತಮ್ಮರು ಬೇಕು 

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ 

ಹೊನ್ನು ಕಟ್ಟುವರು ಉಡಿಯೊಳಗೆ


ತವರಿನಲ್ಲಿ ತಂದೆ-ತಾಯಿಯರಷ್ಟೇ ಮತ್ತೊಂದು ಆಪ್ತ ಜೀವ ಅಣ್ಣ. ಹಾಗೆ ಅಣ್ಣ ತನ್ನ ಬಾಳಿನಲ್ಲಿ ಯಾವ ರೀತಿಯಲ್ಲಿ ಬೆಳಕಾಗಬಹುದು ಎಂಬುದನ್ನೂ ಈ ಸುಂದರ ಸಾಲುಗಳು ಹೇಳುತ್ತವೆ.


ಎನಗೆ ಯಾರಿಲ್ಲಂತ ಮನದಾಗ ಮರುಗಿದರು 

ಪರನಾಡಲ್ಲೊಬ್ಬ ಪ್ರತಿ ಸೂರ್ಯ ನನ್ನಣ್ಣ

ಬಿದಿಗೆ ಚಂದ್ರಾಮ ಉದಿಯಾದ 


ರಾಮಾಯಣದಲ್ಲಿ ಭ್ರಾತೃಪ್ರೇಮ :

*******************

ಭ್ರಾತೃಪ್ರೇಮ ಎಂದಾಕ್ಷಣ ಮೊಟ್ಟಮೊದಲಿಗೆ ನೆನಪಾಗುವುದು ರಾಮಾಯಣದ ರಾಮ-ಲಕ್ಷ್ಮಣ, ಭರತ-ಶತ್ರುಘ್ನರು. ರಾಮ-ಲಕ್ಷ್ಮಣರು ಒಂದು ಗಳಿಗೆಯೂ ಅಗಲಿರಲಾರದ.. ದೇಹವೆರಡು ಒಂದೇ ಜೀವವೆಂಬಂತೆ ಜೊತೆಗಿದ್ದ ಸಹೋದರರು. ತಾಟಕಿ ಸಂಹಾರ, ವನವಾಸ ಹೀಗೆ ಹಲವಾರು ಲೋಕ ಕಲ್ಯಾಣದ ಕಾರ್ಯಗಳಲ್ಲಿಯೂ ಒಟ್ಟಾಗಿದ್ದವರು. ಕೊನೆಗೆ ಲಕ್ಷ್ಮಣನ ಅಂತ್ಯದ ನಂತರ ರಾಮ ಇನ್ನು ಆಗಲಿ ಇರಲಾರೆನೆಂದು ದೇಹತ್ಯಾಗ ಮಾಡಿದ್ದನ್ನೂ ಸ್ಮರಿಸಬಹುದು. 


ರಾಮ-ಲಕ್ಷ್ಮಣರಂತೆಯೇ ಭರತ-ಶತ್ರುಘ್ನರದ್ದು ಅನ್ಯೋನ್ಯವಾದ ಭ್ರಾತೃವಾತ್ಸಲ್ಯವೇ.. ರಾಮ-ಲಕ್ಷ್ಮಣರು ವನವಾಸಕ್ಕೆ ಹೋದ ಸಂದರ್ಭದಲ್ಲಿ ನಡೆದ ವಿದ್ಯಮಾನಗಳು ಭರತ-ಶತ್ರುಘ್ನರಿಗೆ ತಿಳಿದು ಭರತ.. ರಾಮನನ್ನು ಮನವೊಲಿಸಿ ಮತ್ತೆ ಕರೆತರಲು ಹೋದಾಗ, ರಾಮ ಒಪ್ಪದೇ ಆತನ ಪಾದುಕೆಯನ್ನು ತಂದು ಆತನ ಹೆಸರಿನಲ್ಲೇ ರಾಜ್ಯಭಾರ ನಡೆಸುತ್ತಾ.. ನಂದಿಗ್ರಾಮದಲ್ಲಿ ನೆಲೆಸಿದ ಭರತನ ನಡೆ ತನ್ನ ಹಾಗೂ ರಾಮನ ಭ್ರಾತೃಪ್ರೇಮ ಸದಾ ಕಾಲವೂ ಒಟ್ಟಿಗೆ ಇರಲು ಸಾಧ್ಯವಿಲ್ಲದಾಗಲೂ.. ಸದಾ ಗೌರವ, ವಾತ್ಸಲ್ಯವಂತೂ ಇದ್ದೇ ಇದೆ ಎಂಬುದನ್ನು ತೋರುತ್ತದೆ.


ಇನ್ನು ರಾವಣ-ಕುಂಭಕರ್ಣರ ಭ್ರಾತೃಪ್ರೇಮವನ್ನು ಗಮನಿಸುವುದಾದರೆ.. ಅಣ್ಣನ ಮಾತಿಗೆ ಮಣಿದ ಕುಂಭಕರ್ಣ ಅಣ್ಣನ ಕೃತ್ಯಕ್ಕೆ ತಾನೇ ತಲೆಕೊಡಬೇಕಾಗಿ ಬಂದದ್ದು ವಿಪರ್ಯಾಸ. 


ಮಹಾಭಾರತದಲ್ಲಿನ ಸಹೋದರ ವಾತ್ಸಲ್ಯ :

-----------------------------------------------


ಮಹಾಭಾರತದಲ್ಲಿ ಪಾಂಡವರ ಸಹೋದರ ಪ್ರೇಮ ಎದ್ದು ಕಾಣುವಂತಹದ್ದು. ಏನೇ ಕಷ್ಟಗಳು ಬಂದರೂ.. ಎಲ್ಲರೂ ಜೊತೆಯಾಗಿದ್ದು ಅದನ್ನು ಒಟ್ಟಾಗಿ ಎದುರಿಸಿದರು. ಕುಂತಿ-ಮಾದ್ರಿಯರ ಮಕ್ಕಳು ಎಂಬ ಭೇದವಿಲ್ಲದೆ ಪಾಂಡವರು ಬೆರೆತ ಹಾಗೂ ಅದಕ್ಕೆ ಬೆಲೆಕೊಟ್ಟ ಪ್ರಸಂಗಗಳು ಹಲವಾರಿವೆ. ಯಕ್ಷಪ್ರಶ್ನೆಯ ಪ್ರಸಂಗದಲ್ಲಿ ಧರ್ಮರಾಯ ತಾನು ಕುಂತಿಯ ಮಗನಾಗಿ ಉಳಿದಿದ್ದೇನೆ ಹಾಗಾಗಿ ತನ್ನ ಅನುಜರಲ್ಲಿ ಮಾದ್ರಿಯ ಮಗನಾಗಿ ನಕುಲನನ್ನು ಉಳಿಸಿಕೊಳ್ಳಬಯಸುವೆ ಎಂಬ ಸೋದರಪ್ರೇಮಕ್ಕೆ ಮತ್ತೆ ಎಲ್ಲಾ ಸಹೋದರರನ್ನು ಪಡೆದುಕೊಂಡ. ದ್ಯೂತದಲ್ಲಿ ತನ್ನ ತಮ್ಮಂದಿರನ್ನು ಪಣವಾಗಿಟ್ಟು ಸೋತಾಗಲೂ ಯಾರೊಬ್ಬರೂ ಆತನನ್ನು ಪ್ರಶ್ನಿಸುವುದಿಲ್ಲ. ಅಲ್ಲದೆ, ಅದಾದ ನಂತರ ಜೊತೆಯಾಗಿಯೇ ವನವಾಸ, ಅಜ್ಞಾತವಾಸದಂತಹ ಕಷ್ಟದ ದಿನಗಳನ್ನು ಕಳೆದದ್ದು ಅವರ ಸಹೋದರ ಪ್ರೇಮ ಹಾಗೂ ನಂಬಿಕೆ, ಗೌರವಗಳ ಸಾಕ್ಷಿಯಾಗಿ ನಿಲ್ಲುತ್ತದೆ. 


ಇನ್ನು ದುರ್ಯೋಧನಾದಿ ನೂರು ಜನ ಕೌರವರು ಒಟ್ಟಾಗಿ ಇರುವುದು ಹಾಗೂ ಎಲ್ಲದರಲ್ಲಿಯೂ ಒಟ್ಟಾಗಿಯೇ ಭಾಗಿಯಾಗುವುದು, ದುರ್ಯೋಧನನನ್ನು ಬೆಂಬಲಿಸುವುದು ಸಹ ಭ್ರಾತೃಪ್ರೇಮವೇ.. ದುರ್ಯೋಧನನ ನೆರಳಿನಂತೆಯೇ ಆತನನ್ನು ಅನುಸರಿಸುವ ದುಶ್ಯಾಸನದ್ದು ಅಮಿತವಾದ ಸೋದರ ವಾತ್ಸಲ್ಯವೇ.


ಕೃಷ್ಣ-ಬಲರಾಮರ ಭ್ರಾತೃಪ್ರೇಮವೂ ಸೆಳೆಯುವಂತಹದ್ದು. ಕೃಷ್ಣನ ಚಿಕ್ಕಂದಿನ ಮಾಯೆಗಳಿಗೆ, ತುಂಟಾಟಕ್ಕೆ, ಕಂಸನ ವಧೆಗೆ ಜೊತೆಯಾಗಿ ನಿಂತ ಬಲರಾಮನ, ತಂಗಿ ಸುಭದ್ರಾ ಪರಿಣಯಕ್ಕೆ ಕಾರಣನಾದ ಶ್ರೀಕೃಷ್ಣನ ಸಹೋದರ ವಾತ್ಸಲ್ಯ ಇಷ್ಟವಾಗುತ್ತದೆ. 


ನೂರು ಜನ ಸಹೋದರರು ಸೇರಿ ತಮ್ಮ ಪಾಲಿನ ಆಹಾರವನ್ನು ಶಕುನಿಗೆ ಕೊಟ್ಟು, ತಮ್ಮ ಜೀವವನ್ನು ಬಲಿ ಕೊಟ್ಟು ಶಕುನಿಯನ್ನು ಬದುಕಿಸಿದ ಪ್ರಸಂಗ ಭ್ರಾತೃಪ್ರೇಮದ ಉತ್ತುಂಗವೆನ್ನಿಸುತ್ತದೆ.


ಸುದೇಷ್ಣೆ ತನ್ನ ತಮ್ಮ ಕೀಚಕ ಕೆಟ್ಟವನೆಂದು ತಿಳಿದಿದ್ದರೂ.. ಆತನ ಸಾವಿಗಾಗಿ ಮರುಗುವ ಪ್ರಸಂಗ ಹಾಗೂ ಗಾಂಧಾರಿಗೆ ಶಕುನಿಯ ಮೇಲಿನ ಭ್ರಾತೃಪ್ರೇಮಗಳು ಕುರುಡೆನಿಸಿದರೂ.. ಸರಿ-ತಪ್ಪು, ದುಷ್ಟತನ-ಒಳ್ಳೆಯತನದಾಚೆಗೂ ಎತ್ತಿ ತೋರುವುದು ಭ್ರಾತೃಪ್ರೇಮವನ್ನು.


ಚಲನಚಿತ್ರಗಳಲ್ಲಿ ಭ್ರಾತೃಪ್ರೇಮ :

---------------------------------- 

ಹಬ್ಬ : ಅಂಬರೀಶ್ (ಅಂಬಿ) ವಿಷ್ಣುವರ್ಧನ್ (ವಿಷ್ಣು) ದೇವರಾಜ್ (ದೇವು) ಶಶಿಕುಮಾರ್ (ಶಶಿ) ಹಾಗೂ ರಾಮ್ ಕುಮಾರ್ (ರಾಮ್ ) ಅಭಿನಯದ ಡಿ. ರಾಜೇಂದ್ರ ಬಾಬು ಅವರ ನಿರ್ದೇಶನದ 1999 ರಲ್ಲಿ ಬಿಡುಗಡೆಯಾದ ಈ ಚಲನಚಿತ್ರ ಪಾಂಡವರ ಅಜ್ಞಾತವಾಸದ ಸಂದರ್ಭದ ವಿರಾಟಪರ್ವದ ಕಥೆಯನ್ನು ಆಧರಿಸಿದಂತಿದೆ. ರಾಮ್ ವಿವಾಹಕ್ಕಾಗಿ ಉಳಿದ ನಾಲ್ವರು ಸಹೋದರರು ತಮ್ಮ ನಿಜವೇಷ ಮರೆಸಿಕೊಂಡು, ಸಹೋದರನ ಪ್ರೀತಿಯನ್ನು ಗೆಲ್ಲಿಸಲು ಒಟ್ಟಾಗಿ.. ತಮ್ಮ ಅಂತಸ್ತನ್ನು ಮರೆತು ದುಡಿಯುವ ಹಾಗೂ ಆತನ ಪ್ರೀತಿಯನ್ನು ಗೆಲ್ಲಿಸಿ ಕೊಡುವ ಈ ಕಥೆ ಸಹೋದರರ ಒಗ್ಗಟ್ಟು ಹಾಗೂ ವಾತ್ಸಲ್ಯವನ್ನು ಎತ್ತಿ ಹಿಡಿಯುತ್ತದೆ. 


ಯಜಮಾನ : ವಿಷ್ಣುವರ್ಧನ್ (ಶಂಕರ್ / ಗಣೇಶ) ದ್ವಿಪಾತ್ರದಲ್ಲಿ ಹಾಗೂ ಶಶಿಕುಮಾರ್ (ಸುಬ್ರಹ್ಮಣ್ಯ), ಅಭಿಜಿತ್ (ಷಣ್ಮುಖ) ನಟನೆಯ ಆರ್. ಶೇಷಾದ್ರಿ, ರಾಧಾ ಭಾರತಿಯವರ ನಿರ್ದೇಶನದ ಈ ಚಲನಚಿತ್ರದಲ್ಲಿ ತಮ್ಮಂದಿರ ಜೀವನಕ್ಕಾಗಿ ತನ್ನ ವೈವಾಹಿಕ ಜೀವನಕ್ಕೆ ಒಪ್ಪದೇ ತಮ್ಮಂದಿರಿಗಾಗಿ ಬದುಕುವ ಅಣ್ಣನಿಗೆ ತಮ್ಮಂದಿರು ನೀಡುವ ಗೌರವ ಅಪರಿಮಿತವಾದುದು. ಸುಬ್ರಮಣ್ಯ ಡಾಕ್ಟರ್ ಆಗಿ ಪದವಿ ಪಡೆಯುವ ಸಂದರ್ಭದಲ್ಲಿ ಅಣ್ಣನಿಗೆ ನೀಡುವ ಗೌರವ, ಷಣ್ಮುಖ ಇನ್ಸ್ಪೆಕ್ಟರ್ ಆದಾಗ ಒಂದು ಕುಟಿಲತನದಿಂದ ತನ್ನ ಅಣ್ಣನನ್ನೇ ಬಂಧಿಸುವ ಸಂದರ್ಭದಲ್ಲಿ.. ಅದಕ್ಕೆ ಬದಲಾಗಿ ತನ್ನ ಕೆಲಸವನ್ನೇ ತೊರೆಯುವ ನಿರ್ಧಾರ ಮಾಡುವುದು.. ಹೀಗೆ ಹಲವಾರು ಸಂಗತಿಗಳು ಭ್ರಾತೃಪ್ರೇಮವನ್ನು ಎತ್ತಿ ಹಿಡಿಯುತ್ತವೆ. 


ಒಡಹುಟ್ಟಿದವರು : ದೊರೈ-ಭಗವಾನ್ ಅವರ ನಿರ್ದೇಶನದ 1994 ರಲ್ಲಿ ತೆರೆಕಂಡ ಚಿತ್ರ ರಾಜಕುಮಾರ್ (ರಾಮಣ್ಣ) ಹಾಗೂ ಅಂಬರೀಶ್ (ಶ್ರೀಧರ್) ಇಬ್ಬರ ಸಹೋದರ ವಾತ್ಸಲ್ಯ ಸೆಳೆಯುವಂತಹದ್ದು. ತಮ್ಮನಿಗೆ ಎಲ್ಲವನ್ನೂ ಬಿಟ್ಟುಕೊಟ್ಟು ತನ್ನ ಸಂಸಾರದೊಂದಿಗೆ ಬರಿಗೈಯಲ್ಲಿ ಹೊರನಡೆಯುವ ಅಣ್ಣ ಒಂದೆಡೆಯಾದರೆ, ಅಣ್ಣನ ವಾತ್ಸಲ್ಯ, ಪ್ರೀತಿಯೇ ಈ ಜೀವನಕ್ಕೆ ಸಾಕು ಎಂದು ಅಣ್ಣನಿಗಾಗಿ ಹಾತೊರೆಯುವ ತಮ್ಮನ ಭಾವನೆಗಳು ನೋಡುವವರನ್ನು ಸೋದರ ವಾತ್ಸಲ್ಯದಲ್ಲಿ ಮಿಂದೇಳುವಂತೆ ಮಾಡುತ್ತವೆ.


ಡಾ|| ಬಾಬು ರಾಜೇಂದ್ರ ಪ್ರಸಾದ್ ಮತ್ತು ಭ್ರಾತೃಪ್ರೇಮ:

---------------------------------------------------------


ಭಾರತದ ಮೊಟ್ಟಮೊದಲ ರಾಷ್ಟ್ರಪತಿಯಾದ ಡಾ|| ಬಾಬು ರಾಜೇಂದ್ರ ಪ್ರಸಾದ್ ಅವರು ಚಿಕ್ಕವರಿರುವಾಗಲೇ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಾಗ ಅಣ್ಣ ಮಹೇಂದ್ರ ಪ್ರಸಾದ್ ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಮನೆಯ ಜವಾಬ್ದಾರಿಯನ್ನೆಲ್ಲಾ ನಿಭಾಯಿಸಲು ನಿಲ್ಲುತ್ತಾರೆ. ಕಲಿಕೆಯಲ್ಲಿ ಚುರುಕಾಗಿದ್ದ ತನ್ನ ತಮ್ಮನನ್ನು ಹೇಗಾದರೂ ಆತ ಇಷ್ಟಪಟ್ಟಷ್ಟು ಓದಿಸಬೇಕು ಎಂದು ತಾವು ವ್ಯವಸಾಯದ ಕಡೆಗೆ ಗಮನಹರಿಸಿ ತಮ್ಮನನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸುತ್ತಾರೆ. ಊರಲ್ಲಿ ಅಣ್ಣ-ತಮ್ಮ ಇಬ್ಬರನ್ನೂ ರಾಮ-ಲಕ್ಷ್ಮಣ ಎಂದೇ ಕರೆಯುತ್ತಿದ್ದರು. ತಮ್ಮ ಎಂದಿಗೂ ಅಣ್ಣನ ಮಾತನ್ನು ಮೀರಿ ನಡೆಯುತ್ತಿರಲಿಲ್ಲ. ಮುಂದೆ ಅವರಿಗೆ ಹೆಡ್ ಮಾಸ್ಟರ್ ನಿಂದ ಡಬಲ್ ಪ್ರಮೋಷನ್ ಸಿಕ್ಕಾಗ ಅದಕ್ಕೂ ಅಣ್ಣನ ಅನುಮತಿ ಬೇಕು ಎಂದವರು. ಮುಂದೆ ವಕೀಲಿವೃತ್ತಿಯನ್ನು ತೊರೆದು ದೇಶಸೇವೆಗೆ ಹೆಜ್ಜೆ ಹಾಕುವಾಗಲೂ ಅಣ್ಣನ ಆದೇಶದಂತೆ ನಡೆದವರು. ಪ್ರತಿ ಹಂತದಲ್ಲಿಯೂ ಅಣ್ಣನ ಮಾರ್ಗದರ್ಶನವನ್ನು ಪಡೆಯುವಾಗ.. ಅಣ್ಣನ ಮೇಲಿನ ಪ್ರೀತಿ-ವಾತ್ಸಲ್ಯ, ಗೌರವ ಮನಸ್ಸನ್ನು ಮುಟ್ಟುತ್ತದೆ.


ರಾಜನ್ ಮತ್ತು ನಾಗೇಂದ್ರರ ಭ್ರಾತೃಪ್ರೇಮ :

-----------------------------------------------


ಎಷ್ಟೋ ಜನ ರಾಜನ್-ನಾಗೇಂದ್ರ ಎಂಬ ಹೆಸರನ್ನು ಕೇಳಿದಾಗ ಅವರು ಒಬ್ಬರೇ ಎಂದು ಭಾವಿಸಿದ್ದೂ ಉಂಟು. ಆದರೆ, ರಾಜನ್ ಹಾಗೂ ನಾಗೇಂದ್ರ ಇಬ್ಬರೂ ಒಡಹುಟ್ಟಿದ ಸಹೋದರರು. ಈ ಸಹೋದರರ ತಂದೆ ರಾಜಪ್ಪನವರು ಮೂಕಿ ಚಿತ್ರಗಳಿಗೆ ಹಾರ್ಮೋನಿಯಂ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದವರು. ತಂದೆಯ ಮಾರ್ಗದರ್ಶನದಲ್ಲಿ ರಾಜನ್ ವಯಲಿನ್ ನಲ್ಲಿ ಪರಿಣಿತಿ ಪಡೆದರೆ, ನಾಗೇಂದ್ರ ಜಲತರಂಗದಲ್ಲಿ ಪರಿಣಿತಿ ಪಡೆಯುತ್ತಾರೆ. ಹೀಗೆ ಇಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರವನ್ನು ಒಟ್ಟಾಗಿ ಆಯ್ದುಕೊಂಡು 1952ರಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಜೊತೆಜೊತೆಯಾಗಿಯೇ ಕೆಲಸ ಮಾಡಿದವರು. "ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು" ಎಂಬ ಮಾತನ್ನು ಸುಳ್ಳು ಮಾಡಿದ, ಸಂಗೀತದ ಪ್ರತಿ ಏಳಿಗೆಯಲ್ಲೂ ಜೊತೆಯಾಗಿ ಹೆಜ್ಜೆ ಹಾಕಿದ ಸಹೋದರರ ಪ್ರೇಮ ಸಂಗೀತದಷ್ಟೇ ಇಷ್ಟವಾಗುತ್ತದೆ. 


ತ. ಸು. ಶಾಮರಾಯರ ಭ್ರಾತೃಪ್ರೇಮ :



ಕನ್ನಡದ ಅಶ್ವಿನಿ ದೇವತೆ ಎಂದೇ ಹೆಸರಾಗಿರುವ ಪ್ರೊಫೆಸರ್ ಟಿ.ಎಸ್ ವೆಂಕಣ್ಣಯ್ಯನವರ ತಮ್ಮ ಕನ್ನಡದ ಭೀಷ್ಮ ಎಂದೇ ಖ್ಯಾತರಾಗಿರುವ ಪ್ರೊಫೆಸರ್ ತ. ಸು. ಶಾಮರಾಯರು. ತಮ್ಮ ಹಿರಿಯಣ್ಣನ ಮೇಲಿನ ಗೌರವಕ್ಕಾಗಿ ಅವರ ಸ್ಮರಣಾರ್ಥ 1950ರಲ್ಲಿ 'ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ'ಯನ್ನು ಸ್ಥಾಪಿಸಿ ತಮ್ಮ ಪ್ರಾಧ್ಯಾಪಕ ವೃತ್ತಿಯ ಜೊತೆಗೆ ಇದನ್ನು ನಡೆಸುತ್ತಾ ಬಂದವರು. 17 ವರ್ಷಗಳ ಕಾಲ ದಕ್ಷತೆಯಿಂದ ಈ ಕಾರ್ಯವನ್ನು ನಡೆಸಿದವರು. ವೆಂಕಣ್ಣಯ್ಯನವರು ಅಣ್ಣ ಮಾತ್ರವಲ್ಲದೆ, ಗುರು ಶ್ರೇಷ್ಠರು ಆಗಿದ್ದರು. ಸಹೋದರ ವಾತ್ಸಲ್ಯದಿಂದ ಅವರ ಸಾವಿನ ನಂತರವೂ ಅವರನ್ನು ಸಾಹಿತ್ಯದ ಮೂಲಕ ಬದುಕಿಸಿಕೊಳ್ಳುವ, ಅಣ್ಣನ ಆದರ್ಶಗಳನ್ನೇ ರೂಡಿಸಿಕೊಂಡು ಬೆಳೆದ, ಬೆಳೆಸಿದ ತಮ್ಮನ ಈ ನಡೆ ಆದರ್ಶನೀಯ. 


ಭ್ರಾತೃಪ್ರೇಮದ ಕುರಿತು ಕೇಳಿದ ಪುಟ್ಕತೆ:


ಒಂದೂರಿನಲ್ಲಿ ತಂದೆ ಸಾಯುವ ಮುನ್ನ ಅಣ್ಣ-ತಮ್ಮಂದಿರು ಇಬ್ಬರಿಗೂ ತನ್ನ ಜಮೀನನ್ನು ಸಮಪಾಲು ಮಾಡಿಕೊಡುತ್ತಾರೆ ಅಣ್ಣನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ತಮ್ಮನಿಗೆ ಮದುವೆಯಾಗಿರಲಿಲ್ಲ. ಇಬ್ಬರದ್ದೂ ಒಂದೇ ದಾಸ್ತಾನು. ಆದರೆ, ಮಧ್ಯ ಪುಟ್ಟ ಅಡ್ಡಗೋಡೆ ಇತ್ತಷ್ಟೇ.. ಒಂದು ದಿನ ರಾತ್ರಿ ತಮ್ಮ ತನ್ನ ದಾಸ್ತಾನಿನಿಂದ ನಾಲ್ಕೈದು ಮೂಟೆ ಧಾನ್ಯವನ್ನು ಅಣ್ಣನ ದಾಸ್ತಾನಿಗೆ ಸೇರಿಸುತ್ತಾನೆ. ಏಕೆಂದರೆ, ಅಣ್ಣನ ಸಂಸಾರ ದೊಡ್ಡದೆಂದು ಆತನ ಆಲೋಚನೆ ಹಾಗೂ ನಡೆ. ಅಣ್ಣ ತನ್ನ ದಾಸ್ತಾನಿನಿಂದ ತನ್ನ ತಮ್ಮನ ದಾಸ್ತಾನಿಗೆ ನಾಲ್ಕೈದು ಮೂಟೆ ಧಾನ್ಯಗಳನ್ನು ತಮ್ಮನ ದಾಸ್ತಾನಿಗೆ ಸೇರಿಸುತ್ತಾನೆ. ತನಗಾದರೆ ಮಕ್ಕಳಿದ್ದಾರೆ. ಮುಂದೆ ತನ್ನನ್ನು ನೋಡಿಕೊಳ್ಳುತ್ತಾರೆ.. ಅಲ್ಲದೆ, ತಮ್ಮನ ಮದುವೆಯಾದಾಗ ಆತನ ಭವಿಷ್ಯಕ್ಕೆ ಬೇಕಾಗುತ್ತದೆ ಎಂಬುದು ಅವನ ಆಲೋಚನೆ. 


ಹೀಗೆ ನಡೆಯುವಾಗ ಇಬ್ಬರೂ ತಮ್ಮ ದಾಸ್ತಾನಿನಲ್ಲಿ ಇದ್ದಷ್ಟೇ ಮೂಟೆಗಳಿವೆ ಎಂಬುದನ್ನು ಒಂದು ದಿನ ಅರಿಯುತ್ತಾರೆ. ಎದುರೆದುರಾದಾಗ ಇಬ್ಬರಿಗೂ ತಮ್ಮ ಸೋದರರ ಸ್ವಾರ್ಥರಹಿತವಾದ ಇಂತಹ ಭ್ರಾತೃಪ್ರೇಮ ಇಬ್ಬರನ್ನೂ ಮತ್ತಷ್ಟು ಹತ್ತಿರವಾಗಿಸುತ್ತದೆ. 


ಒಳಿತು-ಕೆಡುಕುಗಳಾಚೆ, ಸ್ವಾರ್ಥ ಮೀರಿ, ನಿಸ್ವಾರ್ಥದ ಅಂತಃಕರಣದ ಸಹೋದರ ವಾತ್ಸಲ್ಯಕ್ಕೆ ರಕ್ತಸಂಬಂಧವೇ ಆಗಿರಬೇಕಿಲ್ಲ ಅದನ್ನು ಮೀರಿದ ಎಷ್ಟೋ ಉದಾಹರಣೆಗಳು ಸಿಗುತ್ತವೆ. ಸದ್ಯಕ್ಕೆ ಉಲ್ಲೇಖಿಸಿದ್ದು ರಕ್ತಸಂಬಂಧದ ಭ್ರಾತೃತ್ವದಲ್ಲಿ ಥಟ್ ಎಂದು ನೆನಪಿಗೆ ಬಂದವುಗಳನ್ನು ಮಾತ್ರವೇ. 


ಆಕರಗಳು :

೧. ವಿಕಿಪೀಡಿಯಾ

೨.ಯೂಟ್ಯೂಬ್ ನ ವಿಡಿಯೋಗಳು

೩. ಅಂತರಾಳದ ಮಾತುಗಳು ಬ್ಲಾಗ್ - ಶುಭಾ ಗಿರಣಿಮನೆ

೪. ಛಾಯಾಭಿನಂದನ - ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

೫. ಪಾಂಚಾಲಿ - ಡಾ. ವಿಜಯಾ ಸುಬ್ಬರಾಜ್

೬. ಫಿಲ್ಮಿಬೀಟ್ ವೆಬ್ಸೈಟ್


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ