ಪುಸ್ತಕದ ಶೀರ್ಷಿಕೆ : ವ್ಯಾಸ ಸಂದರ್ಶನ
ಲೇಖಕರು : ಜಗದೀಶಶರ್ಮಾ ಸಂಪ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : ಆಗಸ್ಟ್ 2025
ಪುಟಗಳು : 124
ಬೆಲೆ : 150 ರೂ.
ಬ್ರಹ್ಮಸೂತ್ರ, ಮಹಾಭಾರತ, ಬ್ರಹ್ಮಪುರಾಣ, ಪದ್ಮಪುರಾಣ, ವಿಷ್ಣುಪುರಾಣ, ಶಿವಪುರಾಣ, ಭಾಗವತಪುರಾಣ, ನಾರದಪುರಾಣ, ಅಗ್ನಿಪುರಾಣ, ಮಾರ್ಕಂಡೇಯಪುರಾಣ, ಭವಿಷ್ಯಪುರಾಣ, ಬ್ರಹ್ಮವೈವರ್ತಪುರಾಣ, ಲಿಂಗಪುರಾಣ, ವರಾಹಪುರಾಣ, ಸ್ಕಂದಪುರಾಣ, ವಾಮನಪುರಾಣ, ಕೂರ್ಮಪುರಾಣ, ಮತ್ಸ್ಯಪುರಾಣ, ಗರುಡ ಪುರಾಣ ಹಾಗೂ ಬ್ರಹ್ಮಾಂಡ ಪುರಾಣಗಳನ್ನು ರಚಿಸಿದವರು ವ್ಯಾಸರು. ಕೃಷ್ಣ, ದ್ವೈಪಾಯನ, ವ್ಯಾಸ, ವೇದವ್ಯಾಸ, ಪಾರಾಶರ್ಯ, ಸತ್ಯವತೀಸೂನು ಎಂಬ ಹೆಸರುಗಳನ್ನು ಹೊಂದಿದವರು ಪರಾಶರ ಮುನಿಗಳು ಹಾಗೂ ಸತ್ಯವತಿಯ ಮಗ ವ್ಯಾಸರು.
ವ್ಯಾಸಾಯ ವಿಷ್ಣುರೂಪಾಯ ವ್ಯಾಸ ರೂಪಾಯ ವಿಷ್ಣವೇ |
ಎಂದರೆ ವಿಷ್ಣುರೂಪರಾದ ವ್ಯಾಸರಿಗೆ ನಮಸ್ಕಾರ. ವ್ಯಾಸ ರೂಪರಾದ ವಿಷ್ಣುವಿಗೆ ನಮಸ್ಕಾರ. ಎನ್ನುವ ಶ್ಲೋಕವೇ ವ್ಯಾಸರ ಮಹತ್ವವನ್ನು ಸಾರುತ್ತದೆ.
ಲೇಖಕರಿಗೆ ಗೌರೀಶ್ ಅಕ್ಕಿ ಯೂಟ್ಯೂಬ್ ವಾಹಿನಿಯ ಸಂದರ್ಶನ ಒಂದರಲ್ಲಿ ಗೌರೀಶ್ ಅವರು "ನಿಮಗೆ ವ್ಯಾಸರು ಸಿಕ್ಕರೆ ಏನು ಪ್ರಶ್ನೆ ಕೇಳುತ್ತೀರಿ?" ಎಂದು ಕೇಳಿದರು. ಅದಾದ ನಂತರ ಪ್ರಕಾಶಕರಾದ ಜಮೀಲ್ ಅವರು "ವ್ಯಾಸರನ್ನ ನೀವು ಸಂದರ್ಶನ ಮಾಡಿದಂತೆ ಪುಸ್ತಕ ಬರೆದರೆ ಹೇಗಿರತ್ತೆ?" ಎಂದು ಕೇಳಿದರು. ಇದರ ಫಲವಾಗಿ ವಾಸ್ತವದ ಲೇಖಕರು ಹಾಗೂ ಕಾಲ್ಪನಿಕ ವ್ಯಾಸರು ಇಬ್ಬರ ಸಂದರ್ಶನ ಇಲ್ಲಿ ಪುಸ್ತಕ ರೂಪ ಪಡೆದಿದೆ. ಇದು ಕಲ್ಪನೆ ಆದರೆ ವಾಸ್ತವ ಎನ್ನುತ್ತಾರೆ ಲೇಖಕರು.
ಇಲ್ಲಿ ವ್ಯಾಸರ ವೈಯಕ್ತಿಕ ವಿಚಾರಗಳ ಕುರಿತ ಪ್ರಶ್ನೆಗಳಂತೆ ಅವರ ಬರಹದ ಕುರಿತ ಹಲವಾರು ಪ್ರಶ್ನೆಗಳನ್ನು ಕಾಣಬಹುದು. ಅದರಲ್ಲಿ ನನಗೆ ಹೆಚ್ಚು ಇಷ್ಟವಾದ ಹಾಗೂ ಆಪ್ತವೆನಿಸಿದ ಕೆಲ ಪ್ರಶ್ನೆಗಳನ್ನು ಮಾತ್ರ ಉಲ್ಲೇಖಿಸುವೆ. ಉತ್ತರವನ್ನು ಪುಸ್ತಕದಲ್ಲಿ ನೀವೇ ಓದಿ ನೋಡಿ.
ಸಂಪ ಅವರು ಕೇಳಿದ ಪ್ರಶ್ನೆಗಳು ಇವು
"ತಮಗೆ ಬರೆಯಲು ಬೇಕಾದಷ್ಟು ಅಂಶಗಳಿದ್ದವು. ಬರೆದಿದ್ದೀರಿ ಕೂಡ. ಆದರೆ, ಮಹಾಭಾರತದ ರಚನೆಗೆ ತಾವು ತಮ್ಮನ್ನೇ ಕೊಟ್ಟುಕೊಂಡಂತೆ ಕಾಣಿಸುತ್ತದೆ. ಯಾಕೆ ತಮಗೆ ಮಹಾಭಾರತದ ಮೇಲೆ ಇಷ್ಟು ಆಸಕ್ತಿ ? ಆ ವಂಶದೊಂದಿಗೆ ನಿಯೋಗದ ಕಾರಣದಿಂದ ತಮಗಿದ್ದ ಸಂಬಂಧವೇ ? ತಮ್ಮ ತಾಯಿಯವರು ಸೇರಿದ ಕುಲ ಅದು ಎಂದೇ ಅಥವಾ ಇನ್ನೇನಾದರೂ ಕಾರಣವಿದೆಯೇ?"
"ಧಾರ್ತರಾಷ್ಟ್ರರಾದ ದುರ್ಯೋಧನಾದಿಗಳು ಹಾಗೂ ಪಾಂಡವರಾದ ಯುಧಿಷ್ಠಿರಾದಿಗಳು ಸಮಾನರು. ಆದರೆ ಮಹಾಭಾರತದಲ್ಲಿ ಪಾಂಡವರ ಪಕ್ಷಪಾತಿಯಾಗಿ ವರ್ತಿಸಿದ್ದೀರಿ ಎನ್ನುವ ಆಕ್ಷೇಪವಿದೆಯಲ್ಲ. ಇದರ ಬಗ್ಗೆ ಏನೆನ್ನುತ್ತೀರಿ?"
ವ್ಯಾಸರು ವಸಿಷ್ಠ ವಂಶದವರು.
"ವ್ಯಾಸರು ಬರೆದ ಮಹಾಭಾರತವನ್ನು ಪ್ರಚಾರಕ್ಕೆ ತಂದವರು ಭೃಗು ವಂಶೀಯರು. ಅವರು ತಮ್ಮವರ ಚರಿತ್ರೆಯನ್ನು ಇದಕ್ಕೆ ಸೇರಿಸಿದರು. ಇದು ಹೌದೇ? ಅಲ್ಲ ಎಂದಾದರೆ ತಾವೇಕೆ ತಮ್ಮವರ ಬಗ್ಗೆ ಹೆಚ್ಚು ಹೇಳಲಿಲ್ಲ? ಭೃಗು ವಂಶೀಯರ ಬಗ್ಗೆ ಹೆಚ್ಚು ಹೇಳಿದ್ದಕ್ಕೆ ಏನು ಉದ್ದೇಶ ?"
"ರಾಮಾಯಣ ಮತ್ತು ಮಹಾಭಾರತಗಳ ಕೇಂದ್ರ ಸ್ಥಾನದಲ್ಲಿ ಇರುವುದು ಯುದ್ಧ ಎನ್ನಬೇಕು. ಆದರೆ ಈ ಎರಡು ಕೃತಿಗಳ ರಸ ವೀರ ಅಲ್ಲ. ರಾಮಾಯಣದ ರಸ ಕರುಣ. ಮಹಾಭಾರತದ ರಸ ಶಾಂತ. ಹೀಗೇಕೆ ? ಇಲ್ಲಿ ಹೇಗೆ ಶಾಂತ ಪ್ರಧಾನವಾಯಿತು ?"
"ಮಹಾಭಾರತ ಕೃಷ್ಣ ತಂತ್ರವೇ ? ವ್ಯಾಸ ತಂತ್ರವೇ ?"
"ಹಸ್ತಿನಾಪುರದ ಸಂಕಟದ ಸಮಯದಲ್ಲೆಲ್ಲ ಜೊತೆ ಇರುತ್ತಿದ್ದವರು ಹಲವು ಸಂದರ್ಭಗಳಲ್ಲಿ ಅಲ್ಲಿಗೆ ಧಾವಿಸಿದವರು. ಹೀಗಿರುವಾಗ ದ್ರೌಪದಿಯ ಕಷ್ಟಕಾಲದಲ್ಲಿ ತಾವೇಕೆ ಹೋಗಲಿಲ್ಲ ?"
ವಿದುರನ ಕುರಿತಾಗಿ ತಮ್ಮಲ್ಲಿ ಕೇಳಲೇ ಬೇಕಿದೆ ಎಂದು ಸ್ವತಂತ್ರ ಸಾಹಿತ್ಯ ಪ್ರತಿಗಳಲ್ಲಿ ಬರೆದವರು ಹೆಚ್ಚಾಗಿ ಇರುವುದೆಲ್ಲಿ ಎಂದು ಹುಡುಕುತ್ತೇವೆ. ಹೀಗೆ ಮಹಾಭಾರತ ತಮ್ಮ ಸ್ವಕಪೋಲ ಕಲ್ಪಿತ ಕಥೆಯೇನೂ ಅಲ್ಲ. ಆದರೂ ಅವರಲ್ಲಿ ತಾವೆಲ್ಲಿ ಇದ್ದೀರಿ ಎಂದು ಹುಡುಕುವಂತಾಗುತ್ತದೆ. ವ್ಯಾಸರಾಗಿಯೇ ಹಲವು ಸಲ ಕಾಣಿಸಿಕೊಳ್ಳುತ್ತೀರಿ. ಆದರೆ ಅಲ್ಲಿ ತಮ್ಮ ಸಮಗ್ರ ವ್ಯಕ್ತಿತ್ವ ಬಿಚ್ಚಿಕೊಳ್ಳುವುದಿಲ್ಲ. ವಿದುರನಾಗಿ ತಾವು ಅಲ್ಲಿದ್ದೀರಿ ಎಂದು ಅನ್ನಿಸುವುದು. ತಮ್ಮ ಪ್ರತಿರೂಪ ಎಂದು ಅವನನ್ನು ಭಾವಿಸಬಹುದೇ? ' ಆತ್ಮಾ ವೈ ಪುತ್ರನಾಮಸಿ' ಎನ್ನುವುದೂ ಇದೆಯಲ್ಲ."
"ಮಹಾಭಾರತದ ಸ್ತ್ರೀಯರು ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ. ಇಲ್ಲಿ ದುಷ್ಟ ಸ್ತ್ರೀ ಎಂದು ಒಬ್ಬರೂ ಇಲ್ಲ. ಎಲ್ಲರೂ ಒಳ್ಳೆಯವರೇ. ಕೆಲವರ ನಡೆ ಕೆಲವು ಕಡೆ ಪ್ರಶ್ನಾರ್ಹವೆನಿಸಿದರೂ ಅದು ಅವರ ಅನಿವಾರ್ಯತೆಯೇ ಹೊರತು ದುಷ್ಟತನವಲ್ಲ. ಏಕೆ ಹೀಗೆ ? ಯಾವ ಸ್ತ್ರೀಯೂ ಕೆಟ್ಟವರಲ್ಲದ ಇಷ್ಟು ವಿಸ್ತಾರವಾದ ಚರಿತ್ರೆ ಇರಲು ಸಾಧ್ಯವೇ ? ಅಥವಾ ತಾವು ಮಹಿಳಾಪಕ್ಷಪಾತಿಯೇ?"
ಮಹಾಭಾರತ ಅಧಿಕಾರಕ್ಕಾಗಿ ಆದ ಯುದ್ಧ ಎಂದು ಕಂಡರೂ ಅಧಿಕಾರವನ್ನು ನಿರಾಕರಿಸಿದವರ ಪರಂಪರೆಯ ಕುರಿತು ವ್ಯಾಸರು ಮಾತನಾಡುವುದು ಆಸಕ್ತಿಯುತವಾಗಿದೆ.
ದೃತರಾಷ್ಟ್ರ ದುರ್ಯೋಧನ, ಭೀಮಾರ್ಜುನರು, ಯುಧಿಷ್ಠಿರ ಹೀಗೆ ಎಲ್ಲರ ಕುರಿತು ವ್ಯಾಸರ ಮಾತುಗಳು ನಮ್ಮ ನೋಟವನ್ನು ಮತ್ತಷ್ಟು ಸ್ಪಷ್ಟವಾಗಿಸುತ್ತವೆ.
ಮಹಾಭಾರತದಲ್ಲಿ ಇರುವ ಎಷ್ಟೋ ಜಿಜ್ಞಾಸೆಗಳ ಕುರಿತು ಇಲ್ಲಿ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆದಿದ್ದಾರೆ ಸಂಪರು.
ಮಹಾಭಾರತದ ಸಾವಿರಾರು ವ್ಯಕ್ತಿಗಳನ್ನು ಚಿತ್ರಿಸುವಾಗ ಅವರ ಮನಸ್ಸಿನಲ್ಲಿದ್ದ ಭಾವನೆಗಳು, ಮಹಾಕೃತಿಗೆ ನೀಡಿದ ಸಮಯ, ವ್ಯಾಸರ ಮಹಿಮೆಯ ಕುರಿತ ಹಲವು ಪ್ರಶ್ನೆಗಳು ಇಲ್ಲಿವೆ.
"ಮಹಾಭಾರತದಂತಹ ಮಹಾಕೃತಿಯನ್ನು ರಚಿಸಿಯೂ ತಮಗೆ ಸಮಾಧಾನ ಸಿಕ್ಕಿರಲಿಲ್ಲವಂತೆ. ಆಗ ಭಾಗವತ ಬರೆದಿರಂತೆ.. " ಎಂಬ ಪ್ರಶ್ನೆಗೆ ಉತ್ತರ ನೀವೇ ಓದಿ ನೋಡಿ.
***************
ಈ ಪುಸ್ತಕದಲ್ಲಿ ಕೆಲವು ವ್ಯಾಸ ಸೂಕ್ತಿಗಳಿವೆ. ಅವುಗಳಲ್ಲಿ ಒಂದೆರಡು
"ಬೇರೆಯವರ ನೋವಿನಲ್ಲಿ ಸುಖ ಅರಸುವವನು ಎಂದಿಗೂ ಸುಖಿಯಾಗಲಾರ."
"ಸೋಮಾರಿಯ ಸುಖ ದುಃಖದಲ್ಲಿ ಮುಕ್ತಾಯ. ಕಾರ್ಯಶೀಲನ ದುಃಖ ಸುಖದಲ್ಲಿ ಮುಕ್ತಾಯ."
"ಆರಂಭಿಸಿದ ಕಾರ್ಯ ಫಲಿಸಬಹುದು, ಫಲಿಸದಿರಬಹುದು. ಆದರೆ ಪ್ರಯತ್ನ ಮಾಡುವುದು ರಾಜನ ಕರ್ತವ್ಯ."
***************
ಕೆಲವು ವ್ಯಾಸೋಲ್ಲೇಖಗಳಿವೆ. ಅವುಗಳಲ್ಲಿ ಒಂದೆರಡು ಇಂತಿವೆ.
ವ್ಯಾಸರು ಹೇಳಿದ ಸೇನಜಿತನ ಮಾತು :
"ಗಾಳಿ ಬೀಸುವುದು ತನ್ನದೇ ಕಾಲದಲ್ಲಿ. ಮಳೆ ಸುರಿಯುವುದು ತನ್ನದೇ ಕಾಲದಲ್ಲಿ. ನೀರಲ್ಲಿ ಕಮಲ ಅರಳುವುದು ತನ್ನದೇ ಕಾಲದಲ್ಲಿ. ಮರಗಳಲ್ಲಿ ಹೂವು ಅರಳುವುದು ತನ್ನದೇ ಕಾಲದಲ್ಲಿ."
"ಮೂಢರೂ ಸುಖವಾಗಿರುತ್ತಾರೆ. ಜ್ಞಾನಿಗಳೂ ಸುಖವಾಗಿರುತ್ತಾರೆ. ತೊಳಲಾಡುವುದು ಮಧ್ಯದವರು."
ವ್ಯಾಸರು ಹೇಳಿದ ಅಶ್ಮ ಮುನಿಯ ಉಪದೇಶ :
"ಅಹಂಕಾರ ತನ್ನಲ್ಲಿ ಇರುವುದನ್ನೆಲ್ಲ ಕಳೆದುಕೊಳ್ಳುವಂತೆ ಮಾಡುತ್ತದೆ."
"ಸಮಗ್ರ ಭೂಮಂಡಲವನ್ನೇ ಗೆದ್ದರೂ ಮುಪ್ಪು ಮತ್ತು ಸಾವುಗಳನ್ನು ಮೀರಲಾಗದು."
***************
ಕೆಲವು ವ್ಯಾಸೋಪದೇಶಗಳಿವೆ. ಅವುಗಳಲ್ಲಿ ಒಂದೆರಡು
ವ್ಯಾಸರು ಪುತ್ರ ಶುಕನಿಗೆ ಮಾಡಿದ ಉಪದೇಶ :
"ಮನಸ್ಸಿಗೆ ದಾರಿ ತಪ್ಪುವುದೇ ಸ್ವಭಾವ. ವಿವೇಕದಿಂದ ಅದನ್ನು ನಿಯಂತ್ರಣ ಮಾಡಬೇಕು. ಅದಕ್ಕಾಗಿ ಧರ್ಮದರ್ಶಿಗಳಾದ ಹಿರಿಯರ ಅಭಿಪ್ರಾಯ ಅವಗತ ಮಾಡಿಕೋ."
"ಇದು ಕರ್ಮಭೂಮಿ. ಇಲ್ಲಿಗೆ ಬಂದ ಮೇಲೆ ಒಳಿತೇ ಮಾಡಬೇಕು. ಅದು ಪರಮ ಪದವಿಗೆ ಹೆದ್ದಾರಿ."
***************
ವ್ಯಾಸರ ಪರಿಚಯ ಹಾಗೂ ಪುಸ್ತಕದ ಹುಟ್ಟಿದ ಕುರಿತಾದ ವಿಸ್ತಾರವಾದ ಮಾಹಿತಿ ಪುಸ್ತಕದ ಕೊನೆಯಲ್ಲಿದೆ.
ಎಷ್ಟೋ ಉಲ್ಲೇಖಗಳು, ವ್ಯಾಸರ ಮಾತುಗಳು ಮತ್ತೆ ಮತ್ತೆ ಮೆಲುಕು ಹಾಕುವಂತೆ ಹಾಗೂ ಮೆಲುಕು ಹಾಕಿದ್ದನ್ನು ಮನನ ಮಾಡಿಕೊಳ್ಳುವಂತೆ ಹಾಗೂ ಮನನ ಮಾಡಿಕೊಂಡದ್ದನ್ನು ಅಳವಡಿಸಿಕೊಳ್ಳುವಂತೆ ಮಾಡುವಂತಹ ಮಾತುಗಳು ಸೂಕ್ತಿಗಳು. ಮತ್ತೆ ಮತ್ತೆ ಮೆಲುಕು ಹಾಕುವ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ