ಭಾನುವಾರ, ಏಪ್ರಿಲ್ 26, 2026

ಹಯವದನ (ಪುಸ್ತಕ ಯಾನ - 360)


ಪುಸ್ತಕದ ಶೀರ್ಷಿಕೆ : ಹಯವದನ

ಲೇಖಕರು : ಗಿರೀಶ ಕಾರ್ನಾಡ

ಪ್ರಕಾಶಕರು :ಮನೋಹರ ಗ್ರಂಥ ಮಾಲಾ

ಪ್ರಥಮ ಮುದ್ರಣ : 1971

ಹದಿನಾಲ್ಕನೇ ಮುದ್ರಣ : 2019 ( ನನ್ನ ಓದಿಗೆ ಸಿಕ್ಕಿದ್ದು )

ಪುಟಗಳು : 84

ಬೆಲೆ : 80.


ಗಿರೀಶ ಕಾರ್ನಾಡರ ಹಯವದನ ನಾಟಕವು ಥಾಮಸ್ ಮಾನ್ ಅವರ ಜರ್ಮನ್ ನೀಳ್ಗತೆ ದಿ ಟ್ರಾನ್ಸ್ಫಾರ್ಮ್ಡ್ ಹೆಡ್ಸ್ (The transformed head) ಅನ್ನು ಆಧರಿಸಿದೆ, ಜೊತೆಗೆ ಸಂಸ್ಕೃತದಲ್ಲಿ ಬರೆಯಲಾದ ವೇತಾಳ ಪಂಚವಿಂಶತಿ ಕಥೆಯ ಆರನೇ ಕಥೆ ಇದರ ಮೂಲ. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ. ವಿ. ಕಾರಂತರಂತ ನಿರ್ದೇಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. 


ಕಥೆಗಳಿಗಿಂತಲೂ ನಾಟಕ ವಿಭಿನ್ನವಾಗಿರುತ್ತದೆ. ಇಲ್ಲಿ ಪಾತ್ರಧಾರಿಗಳ ಮೂಲಕದ ಸಂಭಾಷಣೆ ಹೆಚ್ಚು ಪ್ರಾಶಸ್ತ್ಯ ಪಡೆಯುತ್ತದೆ. ಇದು ಎರಡು ಅಂಕದ ನಾಟಕ. ಭಾಗವತರ ಮಾತುಗಳು ನಾಟಕದ ಕಥೆಯನ್ನು ಪ್ರಸ್ತುತಪಡಿಸುತ್ತಲೇ ಎಲ್ಲಿ ವೇಗವನ್ನು ನೀಡಬೇಕೋ ಅಲ್ಲಿ ವೇಗಕ್ಕೆ ಒತ್ತು ನೀಡುತ್ತದೆ. ಅಲ್ಲಲ್ಲಿ ಹಾಸ್ಯ, ವಿಡಂಬನೆಯ ಮಾತುಗಳು ಭಾಗವತರ ಮಾತಿನಲ್ಲಿ ವ್ಯಕ್ತವಾಗುತ್ತವೆ.


ಇಲ್ಲಿ ಹಯವದನನ ಮೂಲಕವೇ ನಾಟಕ ಆರಂಭವಾದರೂ.. ಇಲ್ಲಿ ಪ್ರಮುಖವಾದ ಪಾತ್ರಧಾರಿಗಳು ದೇವದತ್ತ, ಕಪಿಲ ಹಾಗೂ ಪದ್ಮಿನಿ. ಇಬ್ಬರು ನಟರು, ಎರಡು ಗೊಂಬೆಗಳು, ಮಹಾಕಾಳಿ ಹಾಗೂ ಒಬ್ಬ ಹುಡುಗ ಇತರ ಪಾತ್ರಧಾರಿಗಳು. ಮುಖ್ಯವಾಗಿ ಭಾಗವತರು ಭಾಗವಹಿಸುತ್ತಾರೆ. 


ಗಜವದನ ಹೇರಂಭ ಎನ್ನುತ್ತಾ.. ಗಣೇಶನ ಸ್ತುತಿಯ ಮೂಲಕ ಆರಂಭವಾಗುವ ನಾಟಕದಲ್ಲಿ ಭಾಗವತರು ಮಾತಿನಲ್ಲಿ ಇದರ ಮತ್ತೊಂದು ಕಾರಣವನ್ನು ಹೀಗೆ ಹೇಳುತ್ತಾರೆ. ಸರ್ವ ವಿಘ್ನಗಳನ್ನು ನಿರ್ಮೂಲನಗೊಳಿಸುವ ದೇವ ವಿಘ್ನೇಶ್ವರ ಆದರೂ.. ಆನೆಯ ಮುಖ ಹಾಗೂ ಮನುಷ್ಯನ ದೇಹ ದೇವರ ಪೂರ್ಣತ್ವವನ್ನು ಹೇಗೆ ಬಿಂಬಿಸುತ್ತದೆ ಎನ್ನುತ್ತಲೇ ಹಯವದನ  ಪರಿಚಯವಾಗುತ್ತದೆ. ಕುದುರೆಯ ಮುಖ ಹಾಗೂ ಮನುಷ್ಯನ ದೇಹ ಹೊಂದಿರುವ, ಮನುಷ್ಯನ ಧ್ವನಿಯಲ್ಲಿ ಮಾತನಾಡುವ ಅವನನ್ನು ಕಂಡು ನಟನೊಬ್ಬ ಓಡಿ ಬಂದು ಭಾಗವತನಿಗೆ ಈ ಕುರಿತು ಹೇಳುತ್ತಾನೆ. ನಂತರ ಹಯವದನನ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಚಿತ್ರಕೂಟ ಪರ್ವತದ ಮಹಾಕಾಲಿಯನ್ನು ಪೂಜಿಸಿ ಪೂರ್ಣಾಂಗನಾಗಲು ಆತ ನಟನ ಜೊತೆ ಅತ್ತ ಹೊರಟ ಮೇಲೆ ಬೇರೊಂದು ಕಥೆಯನ್ನು ಹೇಳಲು ಶುರುವಿಡುತ್ತಾರೆ ಭಾಗವತರು.


ಧರ್ಮಪುರ ನಗರದ ಇಬ್ಬರು ಸ್ನೇಹಿತರು ದೇವದತ್ತ ಹಾಗೂ ಕಪಿಲ. ಇವರೇ ನಾಟಕದ ನಾಯಕರು. ದೇವದತ್ತ ರೂಪದಲ್ಲಿ ಸುಂದರ, ಬಣ್ಣ ಬಿಳುಪು, ತೆಳ್ಳನೆಯ ಶರೀರ, ವಿದ್ಯೆಯಲ್ಲೂ ಪ್ರಕಾಂಡ ಪಾಂಡಿತ್ಯ ಹೊಂದಿರುವ ಈತ ವಿಪ್ರವರ್ಯ ವಿದ್ಯಾಸಾಗರರ ಒಬ್ಬನೇ ಪುತ್ರ. 

ರಾಜ್ಯದ ಶಸ್ತ್ರಾಗಾರಕ್ಕೆ ಆಧಾರವಾಗಿರುವ ಕಮ್ಮಾರ ಲೋಹಿತರ ಮಗನೇ ಕಪಿಲ. ಬಣ್ಣದಲ್ಲಿ ಮೇಘಶ್ಯಾಮ. ರೂಪದಲ್ಲಿ ಸಾಮಾನ್ಯ. ಆದರೆ, ಕಸುವು, ಆಟ, ಬೇಟೆಯಲ್ಲಿ ಸರಿಸಾಟಿ ಇಲ್ಲದವನು. 

ಒಬ್ಬ ಬುದ್ದಿಯಿಂದ ಬಲವುಳ್ಳವನಾಗಿದ್ದರೆ, ಇನ್ನೊಬ್ಬ ಶಕ್ತಿಯಿಂದ ಬಲವುಳ್ಳವನು.


ದೇವದತ್ತನ ಕಾವ್ಯ ಕೇಳುವ ಆತನ ಆತ್ಮಬಂಧು ಕಪಿಲ ಆತನ ಪ್ರತಿ ಪ್ರೇಮವನ್ನೂ ಬಲ್ಲವನು. ಹಲವು ಪ್ರೇಮಗಳ ನಂತರ ನೈಜ ಪ್ರೀತಿಯಾದದ್ದು ಪದ್ಮಿನಿಯ ಮೇಲೆ. ಪದ್ಮಿನಿಯ ಹಿನ್ನೆಲೆಯನ್ನು ನೀವೇ ಓದಿ ತಿಳಿಯಿರಿ. ದೇವದತ್ತ ಹಾಗೂ ಪದ್ಮಿನಿಯ ಪ್ರೀತಿಗೆ ಸೇತುವೆಯಾಗಿ ನಿಂತ ಕಪಿಲ ಅವರ ವಿವಾಹಕ್ಕೂ ಕಾರಣನಾಗುತ್ತಾನೆ. 


ಧರ್ಮಪುರಿಯ ಪೌರರ ದೃಷ್ಟಿಯಲ್ಲಿ ದೇವದತ್ತ-ಪದ್ಮಿನಿ-ಕಪಿಲ, ರಾಮ-ಸೀತೆ-ಲಕ್ಷ್ಮಣರಿದ್ದಂತೆ. ಆರು ತಿಂಗಳ ನಂತರ ಪದ್ಮಿನಿಯ ಬಸುರಿ ಬಯಕೆಯಂತೆ ಉಜ್ಜಯಿನಿ ನೋಡಲು ಮೂವರು ಹೊರಡುತ್ತಾರೆ. ಪದ್ಮಿನಿಯ ಮಾತುಗಳಲ್ಲಿ ಹಾಗೂ ನಡವಳಿಕೆಯಲ್ಲಿ ಕಪಿಲನ ಕುರಿತು ಇರುವ ಭಾವ ಕಣ್ಣು ಚುಚ್ಚುತ್ತಿರುತ್ತದೆ. ದೇವದತ್ತನಿಗೆ ಆಗಾಗ ಅಸೂಯೆ, ಕಾಡುತ್ತಿರುತ್ತದೆ. ಕಪಿಲನ ಒರಟುತನದ ಬದಲಾಗಿ ಅವಳ ಮೇಲೆ ತೋರುವ ಮೃದುತ್ವದ ಬದಲಾವಣೆಯನ್ನು ಗುರುತಿಸುತ್ತಾನೆ. ಪದ್ಮಿನಿ ಇದನ್ನು ಗಮನಿಸಿದರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆಪ್ತಮಿತ್ರರಲ್ಲಿ ಇಂತಹ ಅಸೂಯೆ ಸಾಧ್ಯವೇ ಎಂಬುದು ಅವಳ ಆಲೋಚನೆ.


ಉಜ್ಜಯಿನಿಗೆ ಹೋಗುವ ದಾರಿಯಲ್ಲಿ ವಿರಮಿಸುವಾಗ ಅಲ್ಲಿನ ಪರಿಸರ ಸೆಳೆಯುತ್ತದೆ. ಕಪಿಲ, ಪದ್ಮಿನಿಯರು ರುದ್ರನ ಗುಡಿಗೆ ಹೋದರೆ.. ದೇವದತ್ತ ಮಹಾಕಾಳಿಯ ಗುಡಿಗೆ ಹೋಗಿ ತನ್ನ ಶಿರಚ್ಛೇದನ ಮಾಡಿಕೊಳ್ಳುತ್ತಾನೆ. ಅದಕ್ಕೆ ಕಾರಣವೇನು..? ಓದಿ ಅರಿಯಿರಿ. 


ಗೆಳೆಯನನ್ನು ಹುಡುಕಿ ಹೊರಟ ಕಪಿಲ ಅವನ ಹಾದಿಯನ್ನೇ ಹಿಡಿಯುತ್ತಾನೆ. ಅವರಿಬ್ಬರನ್ನೂ ಹುಡುಕಿ ಬಂದ ಪದ್ಮಿನಿಗೆ ಸತ್ಯದ ಅರಿವಾಗುತ್ತದೆ. ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ ಮಹಾಕಾಲಿ ತಡೆಯುತ್ತಾಳೆ. ಅವರಿಬ್ಬರನ್ನು ತಡೆಯದ ಮಹಾಕಾಲಿ ಇವಳನ್ನು ತಡೆಯಲು ಕಾರಣವೇನು..? ಮೂವರಿಗೂ ಲೋಕಾಪವಾದದ ಭಯವಿತ್ತೇ..? ಅಥವಾ ಬೇರೆ ಕಾರಣವಿತ್ತೇ..?


ಅಂತೂ ತಾಯಿಯ ವರವನ್ನು ಪಡೆದ ಪದ್ಮಿನಿ ಅವರಿಬ್ಬರಿಗೆ ಪ್ರಾಣದಾನ ನೀಡುವಾಗ ಮಾಡುವ ಒಂದು ತಪ್ಪು ಮೂವರ ಬದುಕನ್ನು ಬೇರೆಯದ್ದೇ ದಿಕ್ಕಿಗೆ ಕೊಂಡೊಯ್ಯುತ್ತದೆ. ಕಪಿಲನ ರುಂಡ ದೇವದತ್ತನಿಗೆ ಹಾಗೂ ದೇವದತ್ತನ ರುಂಡ ಕಪಿಲನಿಗೆ ಅದಲುಬದಲಾಗುತ್ತದೆ.


ಕತ್ತಲಲ್ಲಿ ತಾನು ಅರಿಯದೆ ಹಾಗೆ ಮಾಡಿದ್ದೆಂದು ಪದ್ಮಿನಿ ಪ್ರಲಾಪಿಸಿದರೂ.. ಮಹಾಕಾಲಿಯ ಮಾತು ಬೇರೆಯದ್ದೇ ಅರ್ಥ ಹೊಳೆಯುವಂತೆ ಮಾಡುತ್ತದೆ. ಇಲ್ಲಿ ಪದ್ಮಿನಿಯ ಆಲೋಚನೆ ನಿಜಕ್ಕೂ ಏನಿತ್ತು..?


ದೇವದತ್ತನ ಪ್ರಕಾರ ಶಿರವೇ ಮುಖ್ಯವಾದ್ದರಿಂದ ಆಕೆ ಕಪಿಲನ ದೇಹದೊಡನೆ ಸಂಸಾರ ಮಾಡಬೇಕೇ..? ಕಪಿಲ ಈಗ ತನ್ನ ಕಸುವಾದ ದೇಹವಿಲ್ಲದೆ, ಬುದ್ಧಿಯ ಬಲವೂ ಇಲ್ಲದೆ ವಂಚಿತನಾಗುತ್ತಾನೆ. ಪದ್ಮಿನಿಗೆ ಕುಹಕದಿಂದ ಒಂದು ಮಾತು ಹೇಳುತ್ತಾನೆ. 

"ನಿನಗೆ ದೇವದತ್ತನ ಬುದ್ಧಿವಂತ ತಲೆ ಬೇಕು. ಕಪಿಲನ ಶಕ್ತಿವಂತ ಮೈಬೇಕು." 


ಈಗ ಪದ್ಮಿನಿ ಯಾರ ಜೊತೆ ಹೊರಡುತ್ತಾಳೆ..? ಮುಂದೆ ಪದ್ಮಿನಿಯ ಮಗು ಯಾರನ್ನು ತಂದೆ ಎಂದು ಗುರುತಿಸುತ್ತದೆ..? ಬುದ್ಧಿವಂತನಾದ ದೇವದತ್ತ ಬುದ್ಧಿಯ ಜೊತೆಯಲ್ಲಿ, ಶಕ್ತಿಪ್ರದರ್ಶನವನ್ನೂ ಮಾಡುತ್ತಾನೆ. ತನ್ನದಲ್ಲದ ಮೈಗುಣವನ್ನು ತೋರುತ್ತಾನೆ. ಇದು ಬುದ್ಧಿಯ ನಡೆಯ ಪ್ರಾಬಲ್ಯವೋ ಅಥವಾ ದೇಹದ ನಡೆಯ ಪ್ರಾಬಲ್ಯವೋ ಎಂದು ಆಲೋಚಿಸುವಂತೆ ಮಾಡುತ್ತದೆ. 


ಕಪಿಲ ತನ್ನ ದುರ್ಬಲ ಶರೀರವನ್ನು ಮತ್ತೆ ತನಗೆ ಬೇಕಾದಂತೆ ಹುರಿಗೊಳಿಸಿಕೊಳ್ಳುತ್ತಾ.. ಮೊದಲಿನ ಕಸುವಿಗೆ ತಂದುಕೊಳ್ಳುತ್ತಾನೆ. ಇಲ್ಲಿ ಮನಸ್ಸು ದೃಢವಾಗಿದ್ದರೆ ಏನು ಬೇಕಾದರೂ ಆಗುತ್ತದೆ ಎಂದುಕೊಂಡರೂ ಮನಸ್ಸನ್ನು ನಿಯಂತ್ರಿಸಿದವರು ಯಾರು..? ಬುದ್ಧಿಯೇ ಅಥವಾ ದೇಹವೇ..? ದೇಹದ ಮಾತನ್ನು ಬುದ್ಧಿ ಕೇಳುತ್ತದೋ ಅಥವಾ ಬುದ್ಧಿಯ ಮಾತನ್ನು ದೇಹವೋ ಎಂಬ ದ್ವಂದ್ವ ಕಾಡುತ್ತದೆ. 


ಉಜ್ಜಯಿನಿಯಿಂದ ತಂದ ಎರಡು ಗೊಂಬೆಗಳ ಮಾತಿನಲ್ಲಿ ಪದ್ಮಿನಿಯ ಕನಸು ಹಾಗೂ ಮನಸ್ಸು ನೋಡುಗರಿಗೆ ಹಾಗೂ ಓದುಗರಿಗೆ ಕಾಣಿಸುತ್ತದೆ.


ಮುಂದೆ ಕಪಿಲ, ದೇವದತ್ತ ಮತ್ತು ಪದ್ಮಿನಿಯರ ಅಂತ್ಯ ಆ ರೀತಿಯಲ್ಲಾಗುವುದು ವಿಪರ್ಯಾಸ. ಅದನ್ನು ಓದಿ ತಿಳಿಯಿರಿ. 


ನಾಟಕದಲ್ಲಿ ಮುಂದೆ ಪದ್ಮಿನಿಯ ಮಗು ಹಾಗೂ ಹಯವದನನ ಭೇಟಿಯಾಗುತ್ತದೆ. ಅದು ಹೇಗೆ..? ಹಯವದನ ಪೂರ್ಣಾಂಗನಾದನೇ..? ಈ ಎರಡು ವಿಭಿನ್ನ ಕಥೆಗಳು ಬೆಸೆದ ಪರಿ ಹೇಗೆ ಓದಿ ನೋಡಿ.


ಈ ಕಥೆ ವಾಸ್ತವಕ್ಕೆ ಹತ್ತಿರವಾಗಿದೆಯಾ ಎಂದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಆದರೆ ಈ ನಾಟಕದ ಮೂಲಕ ಶರೀರ, ಬುದ್ಧಿ, ಹೆಣ್ಣಿನ ಆಸೆ-ಆಕಾಂಕ್ಷೆ, ಬುದ್ಧಿವಂತಿಕೆ, ಬಲ ಹೀಗೆ ಹಲವಾರು ವಿಭಿನ್ನ ನೋಟಗಳು ತೆರೆದುಕೊಳ್ಳುತ್ತವೆ. ವಿಕ್ರಮ ಬೇತಾಳನ ಕಥೆಯಲ್ಲಿ ನಾನು ಪದ್ಮಿನಿ,ದೇವದತ್ತ, ಕಪಿಲರ ಕಥೆಯನ್ನು ಶಿರ ಅದಲುಬದಲಾದ ನಂತರ ಪದ್ಮಿನಿಯ ಪತಿ ಯಾರಾಗಬೇಕು ಎಂಬ ಪ್ರಶ್ನೆ ಹಾಗೂ ಉತ್ತರದವರೆಗೂ ಓದಿದ್ದೆ. ಆದರೆ ನಾಟಕ ಅದರ ಮುಂದಿನ ಭಾಗವನ್ನು ವಿಭಿನ್ನವಾಗಿ ರೂಪಿಸಿದೆ.


ಸೃಷ್ಟಿಯಲ್ಲಿ ಪೂರ್ಣತೆ ಎಂಬುದಿಲ್ಲ. ಆದರೆ, ಈ ರೀತಿಯ ಅಪೂರ್ಣತೆ..! ಅದರಲ್ಲಿಯೂ ತಮ್ಮದು ಎಂಬ ಬದುಕನ್ನು ಕಟ್ಟಿಕೊಂಡ ನಂತರ ಬಂದ ಬದಲಾವಣೆಯನ್ನು ಒಪ್ಪುವುದು ಕಷ್ಟ. ಈ ಓದಿನ ನಂತರ ದೇವ ವಿನಾಯಕನ ಮನಸ್ಥಿತಿ ಹೇಗಿದ್ದಿರಬಹುದು ಎಂಬ ಆಲೋಚನೆ ಹುಟ್ಟಿತು. 


ಈ ನಾಟಕದಲ್ಲಿ ರಂಗ ಪ್ರಯೋಗ ಮಾಡುವಾಗ ಮುಖವಾಡಗಳ ಉಪಯೋಗ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತಂತೆ. ಕೆಲವು ನಿರ್ದೇಶಕರು ತಮ್ಮ ಪ್ರಯೋಗಗಳಲ್ಲಿ ಮುಖವಾಡಗಳನ್ನು ಬಿಟ್ಟು ಕಪಿಲ,ದೇವದತ್ತರ ವೇಷವನ್ನೇ ಅದಲುಬದಲು ಮಾಡುತ್ತಾರೆ. ಇನ್ನು ಕೆಲವರು ಮೊಗವಾಡವನ್ನು ಬಳಸುತ್ತಾರೆ ಎಂಬ ಮಾಹಿತಿ ನೀಡುತ್ತಾರೆ ಲೇಖಕರು. ನಿರ್ದೇಶಕರು ಈ ಸಮಸ್ಯೆಯನ್ನು ತಮಗೆ ಸರಿ ಎನ್ನಿಸಿದಂತೆ ಪರಿಹರಿಸಿಕೊಳ್ಳಬಹುದು ಎಂಬ ಉತ್ತರವನ್ನೂ ನೀಡುತ್ತಾರೆ. 


**********


ನೀರಿನ ಮೇಲೆ

ಚಿತ್ರ ಕೆತ್ತಲಿಕ್ಕಾಗೋದಿಲ್ಲ 

ಕತ್ತಿಯ ಗಾಯ ಮಾಡಲಿಕ್ಕಾಗೋವುದಿಲ್ಲ 

ಅದಕ್ಕೆ ನದಿಗೆ 

ನೆನಪಿನ ಹಂಗಿಲ್ಲ 


************


ದಂಡೆಯ ಬೆದರು ಗೊಂಬೆಗೆ ಮಾತ್ರ  

ತಲೆಯ ಗಡಿಗೆಯ ತುಂಬ

ಮಾಸಿದ ಮುಖ 

ಮೈತುಂಬ ನೆನಪಿನ ಗಾಯ


****************


ಭಾಗವತರ ಮಾರ್ಮಿಕ ಮಾತುಗಳು ಹೀಗೆ ಉಲ್ಲೇಖವಾಗಿವೆ. ಇವು ಒಂದೆರಡು ಉದಾಹರಣೆಗಳಷ್ಟೇ. 


ಈ ನಾಟಕದಲ್ಲಿ ಮುತ್ತೈದೆ ಹೂವಿಗೊಂದು ಪ್ರಾಧಾನ್ಯತೆ ಇದೆ. ಅದೇನು..? ಅದು ಹೇಗೆ, ಅದರ ವಿಶೇಷತೆ ಏನು ಓದಿ ತಿಳಿಯಿರಿ. 


ಈ ನಾಟಕ ಓದಿದ ಮೇಲೆ ಇದರ ರಂಗ ಪ್ರದರ್ಶನವನ್ನು ನೋಡಬೇಕೆಂಬ ಆಸೆಯಾಗಿದೆ. ಆಲೋಚನೆಗೆ ಹಚ್ಚುವ ಕಥಾವಸ್ತುವಿನ ವಿಭಿನ್ನ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ