ಭಾನುವಾರ, ಏಪ್ರಿಲ್ 26, 2026

ಬೆಕ್ಕೋಜಿ (ಪುಸ್ತಕ ಯಾನ - 355)


ಪುಸ್ತಕದ ಶೀರ್ಷಿಕೆ : ಬೆಕ್ಕೋಜಿ (ಮೊದಲಾದ ನಾಲ್ಕು ಕಥೆಗಳು)

ಲೇಖಕರು : ಡಿ. ವಿ. ಜಿ

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ (ಕಾವ್ಯಾಲಯ) : 1911

ನನ್ನ ಓದಿಗೆ ಸಿಕ್ಕ ಪರಿಷ್ಕೃತ ಮುದ್ರಣ : 2021

ಪುಟಗಳು : 40

ಬೆಲೆ : 50 ರೂ.


ಇದು ಡಿ. ವಿ. ಜಿ ಯವರು ಮಕ್ಕಳಿಗಾಗಿ ಬರೆದ ಕಥಾಸಂಕಲನ. 1911 ರಲ್ಲಿ ಪ್ರಕಟವಾದ ಈ ಪುಸ್ತಕವನ್ನು ನಲವತ್ತು ವರ್ಷಗಳ ನಂತರ ಅಂದರೆ 1951 ರಲ್ಲಿ ಅವರೇ ಅಲ್ಲಲ್ಲಿ ಕೊಂಚ ತಿದ್ದಿ ಕಾವ್ಯಾಲಯ ಪ್ರಕಾಶನದ ಮೂಲಕವೇ ಪ್ರಕಟಿಸಿದ್ದರು.


ಈ ಪುಸ್ತಕದಲ್ಲಿ 4 ಚೆಂದದ ಕತೆಗಳಿವೆ.


'ಬೆಕ್ಕೋಜಿಯ ಸಾಹಸಗಳು' ಮತ್ತು 'ಭೇಕರಾಜ' ಎಂಬ ಎರಡು ಕತೆಗಳು ಜರ್ಮನಿ ದೇಶದಲ್ಲಿ ಇನ್ನೂರು ವರ್ಷಗಳ ಹಿಂದೆ ಇದ್ದ, ಪ್ರಸಿದ್ಧ "ಗ್ರಿಮ್" ಸಹೋದರರು ಸಂಗ್ರಹಿಸಿದ ಮೂಲವನ್ನು ಅನುಸರಿಸಿವೆ ಎನ್ನಲಾಗುತ್ತದೆ.

ವಿಚಿತ್ರವಾದ ' ಚಾ ' ಪಾತ್ರೆ ಕತೆ ಜಪಾನಿನಲ್ಲಿ ಪ್ರಚಾರದಲ್ಲಿದೆ ಎನ್ನುತ್ತಾರೆ.

ಮೂಗು ಕಣ್ಣುಗಳ ಜಗಳ ಕತೆ ಆಂಗ್ಲ ಕವಿ ವಿಲಿಯಂ ಕೌಪರ್ ನ ಕೃತಿಯೊಂದನ್ನು ಅವಲಂಬಿಸಿದೆ ಎನ್ನುತ್ತಾರೆ.


ಈ ಕಥೆಗಳು ಬೇರೆ ಬೇರೆ ರೂಪದಲ್ಲಿ ಈಗಲೂ ಪ್ರಚಲಿತದಲ್ಲಿವೆ. ಕೆಲವು ಪಾತ್ರಗಳ ಹೆಸರು ಬದಲಾಗಿರಬಹುದು. ಆದರೆ, ಜಾನಪದ ಕಥೆಗಳ ರೂಪದಲ್ಲಿ ಇವುಗಳನ್ನು ನಾನು ಓದಿದ್ದೇನೆ. 


ಬೆಕ್ಕೋಜಿಯ ಸಾಹಸಗಳು : ಬೆಕ್ಕೋಜಿಯೆಂಬ ದರ್ಜಿ ತನ್ನ ಸಾಹಸವನ್ನು ಪ್ರಪಂಚಕ್ಕೆಲ್ಲಾ ಹರಡಬೇಕು ಎಂದು ನಿರ್ಧರಿಸಿ ಬಟ್ಟೆಯಲ್ಲಿ ಒಂದು ಪಟ್ಟಿ ಕತ್ತರಿಸಿಕೊಂಡು ಅದರ ಮೇಲೆ 

ಏಟೊಂದರಿಂದೆ 

ಏಳ್ವರನ್ನು ಕೊಂದೆ 

ಎಂದು ಅಕ್ಷರಗಳಿಂದ ಹೊಲಿದು ಅದನ್ನು ನಡುಪಟ್ಟಿಯಾಗಿ ಧರಿಸಿಕೊಂಡು ಪ್ರಪಂಚ ಪರ್ಯಟನೆಗೆ ಹೊರಡುತ್ತಾನೆ. ಆ ಮಾತಿನ ಮರ್ಮವೇನು..?

ಅಲ್ಲಿಂದ ಮುಂದೆ ರಾಕ್ಷಸರ ಮೇಲೆ ದಿಗ್ವಿಜಯ ಸಾಧಿಸಿ, ರಾಜನ ಅರಮನೆಯಲ್ಲಿ ಗೌರವವನ್ನು ಪಡೆದುಕೊಳ್ಳುತ್ತಾನೆ. ಮುಂದೆ, ರಾಜನ ಮಗಳನ್ನು ವಿವಾಹವಾಗುವ ಮೊದಲು ಆತನ ಮೂರು ಶರತ್ತುಗಳನ್ನು ಪಾಲಿಸಬೇಕಾಗಿ ಬರುತ್ತದೆ. ಬುದ್ಧಿವಂತಿಕೆಯಿಂದಲೇ ಎಲ್ಲೆಡೆ ಗೆಲ್ಲುವ ಅವನ ಹಿನ್ನೆಲೆ ರಾಜಕುಮಾರಿಗೆ ತಿಳಿದಾಗ ಅದರಿಂದ ಅವನು ಪಾರಾಗುವ ಬಗೆ ಹೇಗೆ..? ಆತನು ಮಾಡಿದ ವಿವಿಧ ಸಾಹಸಗಳೇನು? ಬುದ್ಧಿವಂತಿಕೆಯಿಂದ ಎಲ್ಲವನ್ನೂ ಗೆಲ್ಲಬಹುದು ಎಂದು ತೋರುವ ಕಥೆ. 


ಭೇಕರಾಜ : ಜರ್ಮನಿ ದೇಶದ ರಾಜಕುಮಾರಿ ಹಾಗೂ ಬೆಲ್ಜಿಯಂ ದೇಶದ ರಾಜಕುಮಾರ ಈ ಇಬ್ಬರಿಗೂ ವಿವಾಹವಾಗುವುದು ಒಂದು ಕಪ್ಪೆಯಿಂದಾಗಿ. ಆ ಕಪ್ಪೆ ಅವರಿಬ್ಬರನ್ನು ಬೆಸೆದ ಪರಿ ಹೇಗೆ..? ರಾಜಕುಮಾರಿಯ ದರ್ಪ, ಧಿಮಾಕು ಅಳಿದು ಅದೃಷ್ಟ ಸಿಕ್ಕ ಪರಿ ಹಾಗೂ ಸಾಹಸಿ ರಾಜಕುಮಾರನ ಕಥೆ ಇಲ್ಲಿದೆ.


ವಿಚಿತ್ರವಾದ ಚಾ ಪಾತ್ರೆ : ಜಪಾನ್ ನ ಒಂದೂರಿನಲ್ಲಿ ಮೋರಿಂಜಿ ಎಂಬ ದೇವರ ಗುಡಿ ಇತ್ತು. ಆ ಗುಡಿಯ ಪೂಜಾರಿ ಒಂದು ಚಾ ಪಾತ್ರೆಯನ್ನು ಇಷ್ಟಪಟ್ಟು ತೆಗೆದುಕೊಂಡು ಬರುತ್ತಾನೆ ಅದರಲ್ಲಿ ಚಾ ಮಾಡಿ ಇಷ್ಟ ಮಿತ್ರರೊಡನೆಗೆ ಕುಡಿಯುವ ಹಬ್ಬಕ್ಕೆ ಚಾ - ನೋಯು ಎನ್ನುತ್ತಾರೆ. ಹಾಗೆ ಮಾಡಲು ಹೊರಟವನಿಗೆ ಆ ವಿಚಿತ್ರ ಚಾ ಪಾತ್ರೆ ನೀಡಿದ ಅನುಭವಗಳೇನು..? ಮುಂದೆ ಆ ಚಾ ಪಾತ್ರೆ ಏನಾಯ್ತು..? ಅದು ತಂದದ್ದು ಅದೃಷ್ಟವೋ ಅಥವಾ ದುರಾದೃಷ್ಟವೋ ನೀವೇ ಓದಿ ನೋಡಿ.


ಮೂಗು ಕಣ್ಣುಗಳ ಜಗಳ : ಮನುಷ್ಯರು ಸುಲೋಚನೆಯನ್ನು ಧರಿಸಿಕೊಳ್ಳಲು ಶುರು ಮಾಡಿದ ಮೇಲೆ ಮೂಗಿಗೂ.. ಕಣ್ಣಿಗೂ.. ಪ್ರಬಲವಾದ ವ್ಯಾಜ್ಯ ಬರುತ್ತದೆ. ಅದನ್ನು ಪರಿಹರಿಸಲು ಕಿವಿಯೇ ನ್ಯಾಯಾಧೀಶ ಹಾಗೂ ನಾಲಿಗೆ ಎರಡೂ ಕಡೆಯ ವಾದಿ ಹಾಗೂ ಪ್ರತಿವಾದಿಯಾಗುತ್ತದೆ. ಕಣ್ಣು, ಮೂಗುಗಳ ಜಗಳದಲ್ಲಿ ಗೆದ್ದವರು ಯಾರು..? ನಾಲಿಗೆ ಯಾರ ಪರವಾಗಿ ವಾದ ಮಾಡಿತು ಹಾಗೂ ಕಿವಿ ಏನೆಂದು ತೀರ್ಪು ಕೊಟ್ಟಿತು..? ವಿಚಿತ್ರವಾದ ವಿನೋದಮಯ ಕಥೆ ಇದು. 


ಕಥೆಗಳೊಂದಿಗೆ ಅದಕ್ಕೆ ಹೊಂದುವ ಸೂಕ್ತ ಚಿತ್ರಗಳಿದ್ದು ಆಸಕ್ತಿಯೊಂದಿಗೆ ಕಥೆಯನ್ನು ಓದಿಸಿಕೊಂಡು ಹೋಗುತ್ತವೆ. ಮಕ್ಕಳು ಆನಂದಿಸುವಂತಹ ಚೆಂದದ ಕಥೆ ಪುಸ್ತಕದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ