ಭಾನುವಾರ, ಏಪ್ರಿಲ್ 26, 2026

ವರ್ಸಲ್ ಮತ್ತು ಇತರ ಕಥೆಗಳು (ಪುಸ್ತಕ ಯಾನ - 396)


ಪುಸ್ತಕದ ಶೀರ್ಷಿಕೆ : ವರ್ಸಲ್ ಮತ್ತು ಇತರ ಕಥೆಗಳು

ಮೂಲ ಲೇಖಕರು : ಡಾ. ಪ್ರಕಾಶ್ ಎಸ್. ಪರಿಯೆಂಕರ್ 

ಕೊಂಕಣಿಯಿಂದ ಕನ್ನಡಕ್ಕೆ : ಡಾ. ಗೀತಾ ಶೆಣೈ 

ಪ್ರಕಾಶಕರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪ್ರಥಮ ಮುದ್ರಣ : 2022

ಪುಟಗಳು : 172

ಬೆಲೆ : 120 ರೂ. 


ಅನುವಾದಕರ ನುಡಿಯಲ್ಲಿ ಲೇಖಕಿ ಡಾ.ಗೀತಾ ಶೆಣೈ ಅವರು "ಪ್ರಕೃತಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧಕ್ಕೆ ಆದ್ಯತೆಯನ್ನು ನೀಡುವ ಕೊಂಕಣಿ ಬರಹಗಾರರ ಕೃತಿಗಳಲ್ಲಿ ಪ್ರತಿಭಟನೆ, ಪ್ರತಿರೋಧದ ಏರುಧ್ವನಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಯುವಪೀಳಿಗೆಯಲ್ಲಿ ಅವರು ಶಿಕ್ಷಣದ ಒಲವನ್ನು ತೋರಿಸುವುದರ ಮೂಲಕ ಸಾಮಾಜಿಕ ಪರಿವರ್ತನೆಯ ಸೂಚನೆಯನ್ನು ನೀಡುತ್ತಾರೆ." ಎಂಬ ಮಾತೊಂದನ್ನು ಉಲ್ಲೇಖಿಸುತ್ತಾರೆ. ಇದು ನಾನು ಓದಿದ ಮೊದಲ ಕೊಂಕಣಿ ಅನುವಾದಿತ ಕೃತಿ. ಈ ಮಾತುಗಳು ಅಕ್ಷರಶಃ ನಿಜವೆನ್ನಿಸಿತು.


ಗೋವಾದಲ್ಲಿ ಪ್ರಮುಖವಾದ ಭಾಷೆಯಾಗಿದ್ದರೂ.. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತ್ತು ಕೇರಳದ ಕಾಸರಗೋಡಿನಲ್ಲಿ ಕೊಂಕಣಿ ಮನೆ ಭಾಷೆ. ದಕ್ಷಿಣ ಭಾರತದಲ್ಲಿ ಬಳಕೆಯಲ್ಲಿರುವ ಹೆಚ್ಚಿನ ಭಾಷೆಗಳು ದ್ರಾವಿಡ ಭಾಷೆಗಳೇ ಆದರೂ.. ಅವುಗಳ ನಡುವೆ ಇರುವ ದ್ರಾವಿಡೇತರ ಭಾಷೆ ಕೊಂಕಣಿ. ಈ ಚೆಂದದ ಭಾಷೆಯಿಂದ ಡಾಕ್ಟರ್ ಪ್ರಕಾಶ್ ಎಸ್. ಪರಿಯೆಂಕರ್ ಅವರ 15 ಕಥೆಗಳನ್ನು ಡಾ. ಗೀತಾ ಶೆಣೈ ಅವರು ಅನುವಾದಿಸಿದ್ದಾರೆ. ಇಲ್ಲಿನ ಜನರ ಹೆಸರುಗಳು ಮತ್ತು ಊರಿನ ಹೆಸರುಗಳು ವಿಭಿನ್ನವೆನ್ನಿಸಿದವು. ಕೆಲವು ಪಾರಿಭಾಷಕ ಪದಗಳ ಅರ್ಥಗಳನ್ನು ಕೊಟ್ಟಿದ್ದಾರೆ. ಚೆಂದದ ಕೊಂಕಣಿ ಪದಗಳು ಇಷ್ಟವಾಗುತ್ತವೆ. 


ಈ ಕಥಾಸಂಕಲನದಲ್ಲಿ15 ಚೆಂದದ ಕಥೆಗಳಿವೆ.


ಸುಪ್ತ ಪ್ರೀತಿ : ಸುಕಡೊ ಈಗಾಗಲೇ ಆರು ಹೆಣ್ಣುಮಕ್ಕಳ ತಂದೆ. ಆತ ಹೊಲದಿಂದ ತನ್ನ ಕೆಲಸ ಮುಗಿಸಿ ಬರುವಾಗ ಸಿಕ್ಕ ಅನಾಥ ಮಗುವನ್ನು ಊರಿನಲ್ಲಿ ಯಾರಾದರೂ ಸಾಕಬಹುದು ಎಂದು ತಂದು ಊರಿನವರ ಎದುರಿಟ್ಟರೆ, ಅದು ಹೆಣ್ಣುಮಗು ಬಂದು ಹಿಂಜರಿದವರೇ ಹೆಚ್ಚು. ಅದನ್ನು ಬಿಟ್ಟೂ ಬಿಡಲಾಗದೆ ಮನೆಗೆ ಕರೆತಂದವನ ಪತ್ನಿ ಸೊಮಾರ್ಗಿ ಅದಕ್ಕೆ ಪ್ರತಿಕ್ರಿಯಿಸಿದ ಬಗೆ ಹೇಗೆ..? ಮಕ್ಕಳೆಂಬ ದೈವೀ ಸ್ವರೂಪಿಗಳು ಹುಟ್ಟಿಸುವ ಪ್ರೀತಿ ಎಲ್ಲರಲ್ಲೂ ಸುಲಭಕ್ಕೆ ವ್ಯಕ್ತವಾಗುವುದಿಲ್ಲ.. ಅಂತಹ ಸುಪ್ತಪ್ರೀತಿಯೊಂದರ ಕಥೆ ಇಲ್ಲಿದೆ.


ನೀರು : ಕಾಪಶೆ ಊರಿನಲ್ಲಿ ಯಾವಾಗಲೂ ಬೆಳಿಗ್ಗೆ ಬರುತ್ತಿದ್ದ ನೀರು ಬರದೇ ಹೋದಾಗ ಶುರುವಾದ ನೀರಿನ ಆಹಾಕಾರ ಅದರ ಮೂಲವನ್ನು ನೆನಪಿಸುವಂತಹ ಕಥೆ ಇಲ್ಲಿದೆ. ಊರಿನಲ್ಲಿದ್ದ ಬಾವಿಯೊಂದು ಆಧುನಿಕತೆಯ ಸ್ವರೂಪವಾಗಿ ಬಂದ ನಲ್ಲಿಗಳಿಂದ, ಹಿಂದುಳಿದು.. ನಂತರ ಮುಚ್ಚಿಯೇ ಹೋಗಿತ್ತು. ನೀರು ಎಷ್ಟು ಮುಖ್ಯವೆಂದು, ಅದರಲ್ಲಿಯೂ ಬಾವಿಯ ಅಗತ್ಯತೆಯನ್ನು ಹೇಳುತ್ತಲೇ ಇದ್ದ ಗೋಕುಲಳ ನಡೆ ನೀರಿನ ಅತ್ಯಗತ್ಯತೆಯನ್ನು ತೆರೆದಿಡುತ್ತದೆ.


ಬೋನು : ಝಿಪರೊನ ಎತ್ತಿನ ಕಾಲು, ನೀರುನಾಯಿಯನ್ನು ಹಿಡಿಯುವುದಕ್ಕೆ ಎಂದು ಇಟ್ಟಿದ್ದ ಬೋನಿನಲ್ಲಿ ಸಿಲುಕಿದಾಗ ಆಕ್ರೋಶಗೊಂಡವನು.. ಬಂದು ಎಲ್ಲರೊಡನೆ ಹೇಳಿದಾಗ ಗುಂಪುಗೂಡಿ ಹೊರಟವರು ಕಿತ್ತುಕೊಂಡದ್ದು ಅವರ ಬೋನನ್ನು ಮಾತ್ರವೇ..? ಜೀವನಾಧಾರವನ್ನು ಕಸಿದು ಅಹಂ ಮೆರೆದರೇ..? ಹಸಿದ ಹೊಟ್ಟೆಯ ಅಂತಿಮ ವಿನಂತಿ ತಲುಪಿತೇ?


ಗೂಡು : ತೋಟದ ನಡುಭಾಗದಲ್ಲಿದ್ದ ಮಾವಿನಮರದ ಕೊಂಬೆಯನ್ನು ಹತ್ತಿ ಆ ಹುಡುಗ ಕಾಗೆಗೂಡನ್ನು ಕೆದಕಿ ಬೀಳಿಸಿದ್ದೇಕೆ..? ಅಲ್ಲಿದ್ದ ಕಾಗೆಯ ಮರಿಗಳ ಆಕ್ರಂದನ ಹಾಗೂ ಆ ಚಿತ್ರಣ ಗೋವಿಂದ ಬಾಬಾರ ದೃಷ್ಟಿಯಲ್ಲಿ ಹೇಗೆ ಕಾಣಿಸಿತು..? ಅಷ್ಟಕ್ಕೂ.. ಆ ಕಾಗೆ ಗೂಡಿನಲ್ಲಿ ಆ ಹುಡುಗ ಏನನ್ನು ಹುಡುಕುತ್ತಿದ್ದನೆಂಬುದು ನಿಜಕ್ಕೂ ಅಚ್ಚರಿ ತರಿಸಿತು.


ಚಂದ್ರಿ : ಸೌದೆ ಹುಡುಕಲೆಂದು ಕಾಡಿನ ದಾರಿಯಲ್ಲಿ ನಡೆದಿದ್ದ ಚಂದ್ರಿ ಭಯಭೀತಳಾಗಿ ಬಂದು ಹೇಳಿದ್ದಕ್ಕೆ.. ಒಂದಷ್ಟು ಜನ ಆ ದಾರಿಯಲ್ಲಿ ಹೋದಾಗ ಸಿಕ್ಕಿದ್ದು ಮಂಗಮಾರೋ. ಮಂಗಮಾರೋನ ವಿಶೇಷ ವೇಷ ಹಾಗೂ ಅವನ ಶಾರೀರಿಕ ಭಾಷೆ, ಚಂದ್ರಿಯ ಭಯ ಒಂದಕ್ಕೊಂದು ಸೇರಿಕೊಂಡು ಉಂಟಾದ ವಿಚಿತ್ರ ಸಂದರ್ಭದಲ್ಲಿ ತೊಂದರೆಯಾಗಿದ್ದು ಯಾರಿಗೆ, ಅಷ್ಟಕ್ಕೂ ಮಂಗಮಾರೋ ತೊಂದರೆ ಮಾಡಿದ್ದರೆ ಚಂದ್ರಿ ಆತನಿಗಾಗಿ ಮರುಗಿದ್ದು ಯಾಕೆ..? ಕಥೆಯ ಅಂತ್ಯ ಬೇರೆಯದ್ದೇ ಭಾವವನ್ನು ಬಿಚ್ಚಿಡುತ್ತದೆ.


ವಿನಾಶ : ದುಲ್ಯಾನ ಆವೋ (ಅಮ್ಮ) ಆತನನ್ನು ನರಕಾಸುರನನ್ನು ಕೊಂಡೊಯ್ಯುವ ಜನರೊಡನೆ ಕಳುಹಿಸಲು ಒಪ್ಪುವುದಿಲ್ಲವೆಂದು ದುಲ್ಯಾನಿಗೆ ಅರಿವಾಗಿತ್ತು. ಹಾಗೆ, ಅವಳನ್ನು ಆಟ ಆಡಿಸಲೆಂದು ಹೋದ ಪ್ರಸಂಗ.. ದುಲ್ಯಾನಿಗೂ, ಅಮ್ಮನಿಗೂ ಅರಿವಿಲ್ಲದೆ ಆಕ್ರೋಶದಿಂದ ಹೋದವಳ ಪರಿಸ್ಥಿತಿ ಏನಾಯಿತು? ಅಷ್ಟಕ್ಕೂ ಇಲ್ಲಿ ವಿನಾಶ ಸಂಭವಿಸಿದ್ದು ಹೇಗೆ..?


ಶಿ ಇಸ್ ಗ್ರೇಟ್ : ತಂದೆ ಇಲ್ಲದ, ಬಡತನದ ಕೌಟುಂಬಿಕ ಹಿನ್ನೆಲೆಯ ವಿಜಯ ಯಾವುದಕ್ಕೂ ಹಿಂಜರಿಯದೆ, ತನ್ನ ಊರಿಗೆ ಬಂದಿದ್ದ ಶಿಕ್ಷಕರನ್ನು ಮನೆಗೆ ಆಹ್ವಾನಿಸಿದಳು. ಯಾವುದನ್ನೂ ತೋರಿಸಿಕೊಳ್ಳದಿದ್ದ ಅವಳ ದಿಟ್ಟ ನಡೆ ಹಾಗೂ ಅವಳ ಜೀವನದ ಕುರಿತು ತಿಳಿದಾಗ ಅದನ್ನೇ ಕಥೆಯಾಗಿದ್ದವರು.. ಕಥೆಗೆ ಕೊಟ್ಟ ಅಂತ್ಯವೇ ಬೇರೆ ಇತ್ತು. ಅಷ್ಟಕ್ಕೂ.. ಮತ್ತೊಬ್ಬರ ಬದುಕೇ ಕಥೆಗಾರನ ಲೇಖನಿಯಲ್ಲಿ ಅರಳುವುದು. ಅಲ್ಲವೇ.? ಆದರೆ, ಈ ಕಥೆ ಅವರ ಬದುಕಿನಲ್ಲಿ ಬಹಳ ಪಶ್ಚಾತಾಪವನ್ನು ತಂದದ್ದೇಕೆ..?


ಬೆಟ್ಟದ ಬಾಬಾ : "ಪಟ್ಟಣಕ್ಕೆ ಹೋದ ಮನುಷ್ಯ ಬುದ್ಧಿವಂತರಾಗುತ್ತಾನೆ ನಿಜ. ಆದರೆ, ಅವನಿಗೆ ಹೊಟ್ಟೆ ತುಂಬಾ ಉಣ್ಣಲು ಸಿಗುತ್ತದೆ ಎಂದು ಹೇಳುವ ಹಾಗಿಲ್ಲ. ಕಾಡು ತಿನ್ನಲು ಕೊಡುತ್ತದೆ ಎಂದು ಹೇಳಲಾರೆ. ಆದರೆ, ಈ ಕಾಡು ಯಾರನ್ನೂ ಹಸಿವಿನಿಂದ ಸಾಯಿಸುವುದಿಲ್ಲ." ಇದು ಬೆಟ್ಟದ ಬಾಬಾರ ಒಂದು ಪುಟ್ಟ ಆಲೋಚನೆಯಷ್ಟೇ.. ಅವರ ಇಡೀ ಬದುಕನ್ನು ತಿಳಿಯಲು ಈ ಕಥೆ ಓದಿ ನೋಡಿ.


ಕುಣಬೀಣ : ಶ್ಲೋಕ ಸಾಯಲಿಯನ್ನು ಕುಣಬೀಣ ಎಂದು ಕರೆದದ್ದು ಸಾಯಲಿಗೆ ಮಾತ್ರವಲ್ಲ.. ಆಕೆಯ ತಾಯಿಗೂ ಮನಸ್ಸಿನಲ್ಲುಳಿದಿತ್ತು. ಮಕ್ಕಳ ಮನಸ್ಸಿನಲ್ಲಿ ಜಾತಿಯ ಮೇಲು- ಕೀಳಿನ ಪದ ಹುಟ್ಟಿದ್ದಾದರೂ ಹೇಗೆ..? ಮಕ್ಕಳನ್ನು ಮಾತ್ರವಲ್ಲ. ಇದು ಅಜ್ಜನ ಮನಸ್ಸನ್ನೂ ಬದಲಾಯಿಸಿದ ಪರಿ ಇಲ್ಲಿದೆ.


ಸುಂಟರಗಾಳಿ : ಮಗ ವಿಶ್ವಜಿತನೇ ಖಾಶಾನ ಬದುಕಿನಲ್ಲಿ ಮಾತ್ರವಲ್ಲದೆ, ಹೆಚ್ಚಿನವರ ಬದುಕಲ್ಲಿ ಸುಂಟರಗಾಳಿಯಂತೆ.. ಖಳನಾಯಕನಂತೆ ಇದ್ದವನು. ಅದೇ ಸಂದರ್ಭದಲ್ಲಿ ಮಾಸ್ತರರು ಬಂದಾಗ ಖಾಶಾ ತನ್ನ ಬದುಕಿನಲ್ಲಿ ನಡೆದ ಘಟನೆ ಹಾಗೂ ತಾನು ಬೇಟೆಗೆ ಹೋಗುವುದನ್ನು ಬಿಟ್ಟದ್ದನ್ನು ಹೇಳಿದ್ದ. ಅಂತಹದ್ದೇ ಮತ್ತೊಂದು ಘಟನೆ ಆತನ ಬದುಕಿನಲ್ಲಿ ನಡೆಯಿತು. ಅದು ಸುಂಟರಗಾಳಿಯನ್ನು ಶಮನ ಮಾಡಿತೇ..?


ಕೊರಳಿನ ಕ್ರೂಜೆ : ಕಾಯಾತಾನನ ಚಿಕ್ಕಪ್ಪ ಸಿಮಾಂವ ಕ್ರೈಸ್ತನಾಗಿದ್ದವನು ಈಗ ಮರಳಿ ಕೊಂಕಣೆಯಾಗಲು ಹೊರಟಿದ್ದ. ಕಾಯತಾನನಿಗೂ ಈಗ ಆತ ಅದನ್ನೇ ಹೇಳುತ್ತಿದ್ದ. ಆತನ ಹಿಂದಿನ ತಲೆಮಾರಿನವರು ಕೊಂಕಣೆಯಾಗಿದ್ದರು. ಈಗ ತಿರುಗಿ ಕೊಂಕಣೆಯವರಾಗಲು ಹೊರಟಿದ್ದ ಚಿಕ್ಕಪ್ಪನ ಆಲೋಚನೆಗಳೇನಿದ್ದವು..? ಎರಡು ಧರ್ಮಗಳ ಆಯ್ಕೆಗಳಲ್ಲಿ ಹಾಗೂ ಮನಸ್ಸಿನ ಸಂಘರ್ಷಗಳಲ್ಲಿ ಗೆದ್ದದ್ದು ಯಾವುದು..? ಧರ್ಮದಾಚೆಗಿನ ಮಾನವೀಯತೆಯನ್ನು ತೋರುವ ಕಥೆ ಇಲ್ಲಿದೆ.


ಮಹಾಬಲಿ : ಶಿಗಮೊ (ಸುಗ್ಗಿ ಸಂಭ್ರಮದ ವಿವಿಧ ಹಂತಗಳಿರುವ ಜನಪ್ರಿಯ ಸಾಂಪ್ರದಾಯಿಕ ಹಬ್ಬದ ಆಚರಣೆ). ವರ್ಷಕ್ಕೊಮ್ಮೆ ಬರುವ ಶಿಗಮೊನಲ್ಲಿ ಹೋಳಿ ಆಡಲು.. ಫಲವಿದ್ದ ಮಾವಿನ ಮರವನ್ನು ಆರಿಸಿಯಾಗಿತ್ತು. ಬಾರಕಲಾನ ಕಾಯಿ ಬಿಡುವ ಮಾವಿನ ಮರ ಆಯ್ಕೆ ಮಾಡಿದ್ದೆ ತಪ್ಪಾಗಿತ್ತು. ಇಲ್ಲಿ ಮಹಾಬಲಿ ಎಂಬುದು ಯಾವುದಕ್ಕೆ ಅನ್ವಯಿಸುತ್ತದೆ..? ಅಷ್ಟಕ್ಕೂ ಈ ಹೋಳಿ ಸೂತಕದ ಛಾಯೆಯನ್ನು ಹೊತ್ತು ತಂದದ್ದೇಕೆ..?


ಪ್ರಕೃತಿ ಮತ್ತು ನೇಹಾ : ಪ್ರಕೃತಿಯ ಅನುಸಂಧಾನ ಮಾಡಿಕೊಂಡು ನೇಹಾ ಹೂವುಗಳನ್ನು, ಹಕ್ಕಿಗಳನ್ನು ಮಾತ್ರವಲ್ಲದೆ ಗೆಳತಿಯರನ್ನು ಜೊತೆ ಮಾಡಿಕೊಂಡು ಪ್ರಕೃತಿಯನ್ನು ಹತ್ತಿರವಾಗಿಸಿಕೊಳ್ಳುವ ಕಥೆ ಇಲ್ಲಿದೆ. ಊರಿನ ಮಕ್ಕಳೊಡನೆ ಆಡಲು ಹೋದರೆ ಬೈಯುತ್ತಿದ್ದ ನೇಹಾಳ ಅಮ್ಮ ಬದಲಾಗುವುದಕ್ಕೆ ಕಾರಣವೇನು..?


ಸಾಕರೂ ಮದುವೆ : ಗಂಗಾಮಾವಶಿ ಹಾಗೂ ಸಾಕ ರೂನ ಬಾಂಧವ್ಯ ತಾಯಿ-ಮಗಳಂತಿತ್ತು. ಅಣ್ಣನ ಮದುವೆಯಾಗಿತ್ತು. ಈಗ ತಂಗಿಯ ಅರಿಶಿನ ಶಾಸ್ತ್ರದಲ್ಲಿ ಆದ ಮಾತು ಕಥೆಯೊಂದು ಸಾಕರೂನ ಮನಕೆಡಿಸಿತ್ತು. ಗಂಗಾಮಾವಶಿಯ ಮನೆಗೆ ಬಂದ ಸಾಕರೂಗೆ ತನ್ನ ಮದುವೆಯ ವಿಚಾರದಲ್ಲಿ ತಿಳಿದ/ ತಿಳಿಯದ ವಿಚಾರವೊಂದು ಆರಿವಾದಾಗ ಆಕೆಯ ಮನಸ್ಸಿನಲ್ಲಿ ಮೂಡಿದ ಭಾವನೆಗಳೇನು..? ನಿಸ್ವಾರ್ಥ ಜೀವಿಯ ಸುಂದರ ಕನಸು ನನಸಾಯಿತೇ..? ಓದಿ ನೋಡಿ.


ವರ್ಸಲ್ : ಕುಟುಂಬದ ಅಥವಾ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಕ್ತಿ ಅಥವಾ ಕುಟುಂಬ ಪಾಳಿಯಲ್ಲಿ ಭಾಗವಹಿಸುವಿಕೆಯನ್ನು ವರ್ಸಲ್ ಎನ್ನುತ್ತೇವೆ. ಹೀಗೆ ಆ ಬಾರಿಯ ದಸರಾದ ವರ್ಸಲ್ ನಲ್ಲಿ ಪಾರ್ವತಿ ತನ್ನ ಮಗ ಮಧು ಧೋಲಕ್ ಬಾರಿಸುತ್ತಾನೆಂದು ಆಸೆ ಹೊಂದಿದ್ದಳು. ಆತನ ಅಪ್ಪನಿದ್ದಾಗ ಮಧು ತಾನು ಧೋಲಕ್ ಬಾರಿಸುತ್ತೇನೆಂದು ಹಠ ಹಿಡಿಯುತ್ತಿದ್ದವನು, ಈಗ ಅವಕಾಶ ಅವನನ್ನೇ ಅರಸಿ ಬಂದರೂ ಆತ ತಿರಸ್ಕರಿಸಿದ್ದೇಕೆ..? ಒಂದು ಸ್ವಾಭಿಮಾನದ ಕಥೆ ಇಲ್ಲಿದೆ.


ಊರಿನವರ ಸಾಮರಸ್ಯ, ಅದರಲ್ಲಿ ಕೊಂಚ ವೈವಿಧ್ಯಮಯವಾಗಿ ಹಾಗೂ ವಿಭಿನ್ನವಾಗಿ ಆಲೋಚಿಸುವವರು, ಊರಿಗೆ ಬಂದ ಸಮಸ್ಯೆಯನ್ನು ಎಲ್ಲರೂ ಕೂಡ ಪರಿಹಾರ ರೂಪಿಸುವವರು, ಒಬ್ಬರ ಸಮಸ್ಯೆಗೆ ಎಲ್ಲರೂ ಒಟ್ಟಾಗುವವರು, ಕೆಲವೊಮ್ಮೆ ಅಂತಹ ಒಟ್ಟಾಗುವಿಕೆಯೇ ಸಮಸ್ಯೆಯಾಗಿರುವಿಕೆ, ಪ್ರಕೃತಿ, ವಿದ್ಯೆ, ಸ್ವಾಭಿಮಾನ ಹೀಗೆ ಹಲವಾರು ಮಣ್ಣಿನ ಗುಣಗಳುಳ್ಳ ಕಥಾಸಂಕಲನ. ಅಷ್ಟೇ ಚೆಂದದ ಅನುವಾದದೊಂದಿಗೆ ಒಂದೊಳ್ಳೆ ಓದಿಗೆ ಜೊತೆಯಾಗುತ್ತದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ