ಪುಸ್ತಕದ ಶೀರ್ಷಿಕೆ : ಹಲವು ನಾಡು ಹೆಜ್ಜೆ ಹಾಡು
ಲೇಖಕರು : ಜಯಶ್ರೀ ದೇಶಪಾಂಡೆ
ಪ್ರಕಾಶಕರು : ವಿಕಾಸ ಪ್ರಕಾಶನ
ಪ್ರಥಮ ಮುದ್ರಣ : 2021
ಪುಟಗಳು : 272
ಬೆಲೆ : 260 ರೂ.
ದೇಶ ಸುತ್ತುವುದು ಹಾಗೂ ಕೋಶ ಓದುವುದು ಎರಡೂ ಜ್ಞಾನಾರ್ಜನೆಯ ಮಾರ್ಗಗಳು. ಇಲ್ಲಿ ತಾವು ಭೇಟಿ ನೀಡಿದ ದೇಶಗಳನ್ನು, ನೋಡಿದ ತಾಣಗಳನ್ನು, ಅನುಭವಗಳನ್ನು ನಮಗೂ ದಕ್ಕಿಸಿ ಕೊಟ್ಟಿದ್ದಾರೆ ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರು. ದೇಶ-ವಿದೇಶಗಳ ಪಯಣ ಸುಲಭವಲ್ಲ. ಅಲ್ಲಿನ ಸಾಂಸ್ಕೃತಿಕ ನೋಟಗಳು, ವಿಭಿನ್ನತೆ, ಆಹಾರ, ಜೀವನ ಶೈಲಿ, ಅಲ್ಲಿನ ಪ್ರಯಾಣದಲ್ಲಿ ಸಿಕ್ಕ ವ್ಯಕ್ತಿಗಳು, ತಾಣಗಳು ಮೂಡಿಸಿದ ಭಾವಗಳು, ವಿಶೇಷ ಹಿನ್ನೆಲೆ ಹೀಗೆ ಎಲ್ಲವನ್ನೂ.. ಎಲ್ಲಿಯೂ ಬೋರೆನಿಸದಂತೆ ಹೇಳಿದ್ದಾರೆ. ಜೊತೆಗೆ ಇಂಟರ್ನೆಟ್ ನಲ್ಲಿ ಲಭ್ಯವಾಗದ ಹಲವು ಮಾಹಿತಿಗಳನ್ನು ಇಲ್ಲಿ ನೀಡಿದ್ದಾರೆ. ಸಂದರ್ಭೋಚಿತವಾದ ಅವರ ಕೆಲವು ಪ್ರವಾಸಿತಾಣಗಳ ಸುಂದರ ಛಾಯಾಚಿತ್ರಗಳನ್ನು ನಾವಿಲ್ಲಿ ಸವಿಯಬಹುದು.
ಇಲ್ಲಿ ಫಿನ್ಲ್ಯಾಂಡ್, ರಷ್ಯಾ, ಬುಡಾಪೆಸ್ಟ್, ಸ್ವಿಜರ್ಲ್ಯಾಂಡ್, ಜರ್ಮನ್, ಸಿಂಗಾಪುರ, ಅಮೆರಿಕ, ಬರ್ಮುಡಾ ಟ್ರೈಯಾಂಗಲ್ ಹೀಗೆ ಹಲವಾರು ದೇಶಗಳ ಹಾಗೂ ಸುಂದರ ತಾಣಗಳ ಪ್ರವಾಸ ಚಿತ್ರಣವಿದೆ. ಇದರಲ್ಲಿ ನನಗೆ ತುಂಬಾ ಇಷ್ಟವಾದ ಹಾಗೂ ಆಪ್ತವೆನಿಸಿದ, ಇಷ್ಟವಾದ ಹಾಗೂ ಆಸಕ್ತಿ ಮೂಡಿಸಿದ ಕೆಲ ವಿಚಾರಗಳ ಕುರಿತು ಮಾತ್ರ ಉಲ್ಲೇಖಿಸುತ್ತೇನೆ.
ಯೊಹಾನುಸ್ ಎಂಬುದು ಫಿನ್ನಿಶ್ ಜನ ಬೇಸಿಗೆಯಲ್ಲಿ ಬಲು ಕಾತರದಿಂದ ಕಾಯುವ ನಿಸರ್ಗ ಪರ್ವ ಎನ್ನುತ್ತಾ ಇದು ಮಧ್ಯರಾತ್ರಿ ಪ್ರಜ್ವಲಿಸುವ ಸೂರ್ಯನನ್ನು ಕಣ್ತುಂಬಿಕೊಳ್ಳುವ ದಿನವೂ ಹೌದು ಎಂದು ಸಮ್ಮರ್ ಡೇ ಕುರಿತು ಹೇಳುತ್ತಾರೆ. ಜೊತೆಗೆ ಫಿನ್ಲ್ಯಾಂಡ್ ನಲ್ಲಿ ಸಮ್ಮರ್ ಕಾಟೇಜ್ ಹಾಗೂ ದೋಣಿ ಸಂಚಾರದ ಸಂಭ್ರಮವನ್ನು ಹೇಳುತ್ತಲೇ.. ಅಲ್ಲಿನ ಕೆಲ ಪದಗಳನ್ನು ಪರಿಚಯಿಸುತ್ತಾರೆ. ಇಲ್ಲಿ ಅವರು 'ಸೌನಾ' ಎಂಬ ಫಿನ್ನಿಶ್ ಸ್ನಾನದ ಮನೆಯ ಕುರಿತು ಹೇಳುತ್ತಾರೆ. ಹಬೆ ತುಂಬಿದ ಸ್ಟೀಮ್ ಬಾತ್ ಹಾಗೂ ಅಲ್ಲಿನ ಆಪ್ತ ಕ್ಷಣಗಳು ಜೊತೆಗೆ ಇವರ ಮೊಮ್ಮಗಳು ಪೂರ್ತಿಯ ಪ್ರೀತಿಯ ಮೂಮ್ಮಿ ಈರ್ಯಾಳನ್ನು ಪರಿಚಯಿಸುತ್ತಾರೆ. ಒಂಟಿ ಜೀವದ ಭಾವಗಳು, ಭಾಷೆ ಇಲ್ಲದೆಯೂ ನಡೆಯಬಹುದಾದ ಆಪ್ತ ಮಾತುಕತೆ ಹಾಗೂ ಅವರ ಜೀವನೋತ್ಸಾಹ ನಿಜಕ್ಕೂ ಬೆರಗು ಹುಟ್ಟಿಸಿತು. ಒಂದು ಬೆಚ್ಚನೆಯ ಆಪ್ತ ಭಾವ ಆರಂಭದಲ್ಲಿಯೇ ಅಚ್ಚರಿ ಹಾಗೂ ಆಪ್ತತೆ ನೀಡಿತು.
ಪ್ರಯಾಣದಲ್ಲಿ ಹಲವಾರು ಜನರು ಆಪ್ತರಾಗುತ್ತಾರೆ. ಹಾಗೆ ಆಪ್ತರಾದ ಮೈಯ್ಯಾ ವೆಕೇವಾ ಹಾಗೂ ಲೌರಾ ರೈನೇನಿ ಎಂಬ ಇಬ್ಬರು ಫಿನ್ಲೆಂಡ್ ನ ಮಹಿಳೆಯರನ್ನು ಪರಿಚಯಿಸುತ್ತಾರೆ. ಅದರಲ್ಲಿಯೂ ಮೈಯ್ಯಾಳಿಗೆ 9 ಯೂರೋಪಿಯನ್ ಭಾಷೆಗಳು ಗೊತ್ತಿತ್ತು. ಇಂಟರ್ನೆಟ್ ನಲ್ಲಿಯೂ ಸಿಗದ ಹಲವಾರು ವಿಷಯಗಳನ್ನು ಆಕೆ ಟ್ರಾವೆಲ್ ಗೈಡ್ನಂತೆ ಹೇಳಿದ ಸಂದರ್ಭವನ್ನು ನೀವೇ ಓದಿ ನೋಡಿ. ಇಷ್ಟಕ್ಕೂ ಇದು ನಡೆದದ್ದು 2005ರಲ್ಲಿ.
ಪ್ರವಾಸದಲ್ಲಿ ಕೆಲವೊಮ್ಮೆ ಈ ರೀತಿಯ ಅನುಭವಗಳು ಸಹ ಉಂಟಾಗಬಹುದು. ರಷ್ಯನ್ ಮೆಟ್ರೋದಲ್ಲಿ ನಕಲಿ ಪೊಲೀಸ್ ಪ್ರಹಸನ ನಡೆದ ಸಂದರ್ಭ ಹೇಗಿತ್ತು.. ಭಾಷೆ ಬರದ ಊರಿನಲ್ಲಿ ಆಪ್ತರಾಗುವ ಕೆಲವು ನಿಷ್ಕಲ್ಮಶ ಜೀವಗಳು ಇರುತ್ತವೆ. ಹಾಗೆ ಸಿಕ್ಕ ತೂಲಿಯಾ ಹಾಗೂ ಅವಳ ಪತಿ ಅವರನ್ನು ನಕಲಿ ಕಾಪ್ ಗಳೆಂದು ಕಂಡುಹಿಡಿದ ಪ್ರಸಂಗ ಓದಿ ನೋಡಿ. ಸೊಗಸಾಗಿರುವ ಹಾಗೂ ಸೆಳೆಯುವ ರಷ್ಯಾದ ಮಾತ್ರೋಷ್ಕಾ ಮತ್ತು ಬಾಬುಷ್ಕಾ ಬೊಂಬೆಗಳ ಬಗ್ಗೆ ಹೇಳುತ್ತಾರೆ. ಬೊಂಬೆಗಳನ್ನು ಮಾರುತಿದ್ದ ವೃದ್ಧಾಪ್ಯದ ಜೀವಗಳು ಅವರಲ್ಲಿ ಹುಟ್ಟಿಸಿದ ಭಾವಗಳೇನು ಓದಿ ನೋಡಿ.
ನೊಬೆಲ್ ವೆನ್ಯೂ ಎಂಬ ಸ್ವಪ್ನ ತಾಣವನ್ನು ಲೇಖಕಿ ಕಣ್ತುಂಬಿಸಿಕೊಂಡ ಹಾಗೂ ಆ ಕಾನ್ಸರ್ಟ್ ಹಾಲಿನಲ್ಲಿ ಕಳೆದ ಕ್ಷಣಗಳನ್ನು ಹೇಳುವಾಗ ನೊಬೆಲ್ ಕುರಿತ ನೊಬೆಲ್ ಕ್ಷಣಗಳ ಧನ್ಯತೆಯನ್ನು ನಾವೂ ಅನುಭವಿಸುವಂತಾಗುತ್ತದೆ. ಅಷ್ಟಕ್ಕೂ ಅವರಿಗೆ ಈ ಸಭಾಂಗಣಕ್ಕೆ ಪ್ರವೇಶ ಸಿಕ್ಕಿದ್ದು ಹೇಗೆ ಓದಿ ನೋಡಿ.
ಪ್ರಾಗ್ ನಗರದ ಖಗೋಳ ಗಡಿಯಾರ ಹಾಗೂ ಅದರ ಇತಿಹಾಸ ಹಾಗೂ ಬದಲಾದ ಕ್ಷಣಗಳನ್ನು ಹೇಳುತ್ತಲೇ ಮುಂದೆ ಹಿಟ್ಲರ್ ನ ನಾಜಿ ಮತ್ತು ಉಳಿದ ಜಗತ್ತು ಒಂದೆಡೆ ಎಂಬಂತೆ ನಡೆದ ದುರಂತದ ದಾರುಣ ಘಟನೆಯ ಸ್ಥಳವನ್ನು ತೋರುವಾಗಲಂತೂ ಆ ಕ್ರೌರ್ಯ ಈಗಲೂ ನಲುಗಿಸುವಂತಾಯಿತು.
ಜರ್ಮನ್ ಡೈರೀಸ್ ನಲ್ಲಿ ಚಾರ್ಲಿ, ಚಾರ್ಲ್ಸ್ ನ ಜೊತೆಗೆ ನಡೆದ ಮಾತುಕತೆ ಇಷ್ಟವಾಗುತ್ತದೆ ಹಾಗೂ ಅಲ್ಲಿ ಬರ್ಲಿನ್ ಡೋಮ್ ಕೆಥೆಡ್ರಲ್ ನಲ್ಲಿನ ಬಹುದೊಡ್ಡ ಕ್ರಿಪ್ಟ್ / ಕೆಟಾಕೊಂಬ್ಸ್ ಎಂದರೆ ಅಲ್ಲಿರಬಹುದಾದ ಭೂಗತ ಸಮಾಧಿಗಳ ದರ್ಶನ ಮಾಡಿದ್ದನ್ನು ಹಾಗೂ ಅಲ್ಲಿನ ಕ್ಷಣಗಳನ್ನು ಕಟ್ಟಿಕೊಡುತ್ತಾರೆ.
ಜಗತ್ತಿನುದ್ದಗಲಕ್ಕೂ ಬಹು ಚರ್ಚಿತವಾದ ವರ್ಣ ಚಿತ್ರ ಎಂದರೆ ಮೊನಾಲಿಸಾ. ಆ ಮೊನಾಲಿಸಾ ಪೇಂಟಿಂಗ್ ಅನ್ನು ಮ್ಯೂಸಿಯಂನಲ್ಲಿ ಕಂಡಾಗ ಇವರ ಪ್ರತಿಕ್ರಿಯೆ ಹೇಗಿತ್ತು ಓದಿ ನೋಡಿ.
ಯುರೋಪಿನಲ್ಲಿ ಕಂಡ ಸಿಸ್ಸಿ ಮೂಸೀ ಎಂದರೆ ಅಲ್ಲಿನ ಸಾಮ್ರಾಜ್ಞಿ ಎಲಿಸಬೆತ್ ಜನಮಾನಸದಲ್ಲಿ ಅಚ್ಚೊತ್ತಿಕೊಂಡಿರುವುದು ಸಿಸ್ಸಿಯಾಗಿ ಹಾಗೂ ಅವರ ಭಾಷೆಯಲ್ಲಿ ಮೂಸೀ ಎಂದರೆ ಮ್ಯೂಸಿಯಂ. ಅತ್ಯುನ್ನತ ಮಟ್ಟದ ಹಾಗೂ ಅತ್ಯುತ್ತಮ ಅಭಿರುಚಿಯ ದಿವ್ಯ ದ್ಯೋತಕವಾಗಿ ಎಲಿಸಬೆತ್ ಮ್ಯೂಸಿಯಂ ಅರ್ಥಾತ್ ಸಿಸ್ಸಿ ಮೂಸೀಯ ಜೊತೆಗೆ ರಾಣಿ ಎಲಿಸಬೆತ್ ನ ಚರಿತ್ರೆಯನ್ನು ನಾವಿಲ್ಲಿ ಓದಬಹುದು.
ವೈಟ್ ಹೌಸ್, ನಾಸಾ, ನಯಾಗರಾ, ಸ್ವಾತಂತ್ರ್ಯದೇವಿ ಹೀಗೆ ಅಮೆರಿಕಾದ ಹಲವಾರು ಸುಂದರ ಪ್ರವಾಸಿ ತಾಣಗಳು ಇಲ್ಲಿವೆ.
ಅಟ್ಲಾಂಟಿಕ್ ಮಹಾಸಾಗರದ ತಡಿಯಲ್ಲಿನ ಜಾರ್ಜಿಯ ದೇಶದ ಸವಾನಾ ಸೌಂದರ್ಯಕ್ಕೆ ಎಷ್ಟು ಹೆಸರಾಗಿದೆಯೋ ಅಷ್ಟೇ ಹೆಸರಾಗಿರುವುದು ಅಮೆರಿಕಾದ ಹಾಂಟೆಡ್ ಸಿಟಿ ಎಂದು. ಈ ಕುರಿತು ಹಾಗೂ ಅಲ್ಲಿನ ಬೊನಾವೆಂಚರ್ (ಇಟಾಲಿಯನ್ ಭಾಷೆಯಲ್ಲಿ ಸುದೈವ ಎಂದರ್ಥ) ಸಿಮಿಟ್ರಿ ಹಾಗೂ ಅಲ್ಲಿನ ಆಸಕ್ತಿಕರ ವಿಚಾರಗಳನ್ನು ತೆರೆದಿಡುತ್ತಾರೆ. ಗ್ರ್ಯಾಂಡ್ ಕ್ಯಾನಿಯನ್ ಗಳಲ್ಲಿ ಶಿವ, ವಿಷ್ಣು, ಬ್ರಹ್ಮ, ರಾಮ ಆಸಕ್ತಿ ಹುಟ್ಟಿಸುತ್ತಾರೆ. ಆ ಅಶ್ಚರ್ಯಕರ ನೋಟ ಹಾಗೂ ಆ ಪಾಯಿಂಟ್ ಗಳ ಪ್ರವಾಸ ಹೇಗಿತ್ತು ಓದಿ ನೋಡಿ.
ಗಾನ್ ವಿತ್ ದ ವಿಂಡ್ ನ ಮಾರ್ಗರೆಟ್ ಮಿಶೆಲ್ ಮನೆಯನ್ನು ಅಟ್ಲಾಂಟಾದಲ್ಲಿ ನೋಡುತ್ತಾರೆ ಹಾಗೂ ಧೈರ್ಯ, ಸ್ಥೈರ್ಯಗಳುಳ್ಳವರ ವಿಷಾದಗೀತೆ - 'ಗಾನ್ ವಿತ್ ದಿ ವಿಂಡ್' ಅನ್ನು ಪರಿಚಯಿಸುತ್ತಾರೆ. ಈ ಅಧ್ಯಾಯ ಬಹಳ ಆಸಕ್ತಿದಾಯಕವಾಗಿದೆ.
ಬಿಸಿ ನೀರಿನ ಬಗ್ಗೆಗಳಿರುವ ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕ್, ಅಮೆರಿಕದ ಒಲಂಪಿಕ್ಸ್ ನ ತರಬೇತಿಯ ಸ್ಥಳ ಕೊಲರಾಡೊ ಸ್ಪ್ರಿಂಗ್ಸ್ ವಿಭಿನ್ನ ಅನುಭವವನ್ನು ಕೊಡುತ್ತವೆ.
ಬರ್ಮುಡಾ ಟ್ರಯಾಂಗಲ್ ಎನ್ನುವ ಹೆಸರನ್ನು ಕೇಳಿದ್ದೇವೆ. ಹೀಗೆ ಕುತೂಹಲ ಮೂಡಿಸಿದ್ದ ಅಟ್ಲಾಂಟಿಕ್ ಓಷನ್ ನ ಬರ್ಮುಡಾ ಟ್ರಯಾಂಗಲ್ ಎಂದು ಗುರುತಿಸಲಾಗಿರುವ ಪ್ರದೇಶದ ಬರ್ಮುಡಾ ಟ್ರಯಾಂಗಲ್ ಸುತ್ತಲಿನ ದ್ವೀಪಗಳಿಗೆ ರಾಯಲ್ ಕೆರೀಬಿಯನ್ ನವರ ಕ್ರೂಸ್ ನಲ್ಲಿ ಹೋದ ಅನುಭವವನ್ನು ಹೇಳುತ್ತಾರೆ ಹಾಗೂ ಕ್ರೂಸ್ ನ ಒಳಾಡಳಿತದ ಮೇಲ್ವಿಚಾರಕರಾದ ಮೈಸೂರಿನ ಸಂಪತ್ ಕುಮಾರ್ ಅವರನ್ನು ಭೇಟಿ ಮಾಡಿ ಸಂದರ್ಶಿಸಿ ಕ್ರೂಸ್ ನ ಹಲವಾರು ವಿಚಾರಗಳನ್ನು ಹಾಗೂ ಈಗ ಹೊರಟಿರುವ ರಾಯಲ್ ಕೆರೀಬಿಯನ್ ಕಂಪನಿಯ ಕ್ರೂಸ್ ಹಾಗೂ ಜಲಯಾನದ ಹಲವಾರು ವಿಚಾರಗಳನ್ನು ತೆರೆದಿಡುತ್ತಾರೆ. ನಮ್ಮ ಮನಸ್ಸಿನಲ್ಲಿಯೂ ಆ ದ್ವೀಪಗಳು ಮತ್ತು ಕೋಕೋ ಕೇ ದ್ವೀಪಗಳ ನೀಲಿ ಹಸಿರು ನೀರಿನ ಚಿತ್ರಣ ಮೂಡುತ್ತದೆ.
ಲೋಲುಪರ ಸ್ವರ್ಗ ಲಾಸ್ ವೇಗಾಸ್ ಕೊಟ್ಟ ವಿಚಿತ್ರ ಅನುಭವವನ್ನು ಹೇಳುತ್ತಾರೆ ಆ ವಿಚಿತ್ರ ಅನುಭವ ಏನಿದೆ ಓದಿ ನೋಡಿ.
ಇವು ಕೇವಲ ಕೆಲ ವಿಚಾರಗಳಷ್ಟೇ.. ಈ ಪ್ರವಾಸ ಕಥನದಲ್ಲಿ ಹೆಚ್ಚಿನಂಶ ಆಹ್ಲಾದಮಯವಾದ ವಿಚಾರವೇ ಇದೆ. ಅಲ್ಲದೆ, ಪ್ರವಾಸಕ್ಕೆ ಮತ್ತೊಬ್ಬರನ್ನು ಪ್ರೇರೇಪಿಸುವಂತಿದೆ. ಸಾಮಾನ್ಯವಾಗಿ ಭೇಟಿ ನೀಡದ ಕ್ರಿಪ್ಟ್ ನ ಸ್ಥಳ ಆಸಕ್ತಿದಾಯಕವೆನಿಸುವಂತಿದೆ. ನೆನಪಿನಂಗಳದ ಈ ಯಾತ್ರೆ ನಿಜಕ್ಕೂ ಅಚ್ಚಳಿಯದ ನೆನಪು. ಲೇಖಕಿಯರ ಕುಟುಂಬದವರ ಭಾಗವಹಿಸುವಿಕೆ (ವಿಶೇಷವೆಂದರೆ ಈ ಪ್ರವಾಸ ಕಥನವನ್ನು ಇಬ್ಬರು ಅಳಿಯಂದಿರಿಗೆ ಅರ್ಪಿಸಿದ್ದಾರೆ) ಹಾಗೂ ಅವರ ಜೊತೆಗೆ ಒಡನಾಟ ಅವರ ಸಹಕಾರ ಎಲ್ಲವೂ ಹಿತವಾಗಿದೆ. ಹಿತವಾದ ಓದಿನ ಯಾನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ