ಭಾನುವಾರ, ಏಪ್ರಿಲ್ 26, 2026

ಭಯಂಕರ ಬೈರಾಗಿ (ಪುಸ್ತಕ ಯಾನ - 382)


ಪುಸ್ತಕದ ಶೀರ್ಷಿಕೆ : ಭಯಂಕರ ಬೈರಾಗಿ

ಲೇಖಕರು : ಎನ್. ನರಸಿಂಹಯ್ಯ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಪರಿಷತ್ತಿನಿಂದ ಮುದ್ರಣ : 2014

ಪುಟಗಳು : 264

ಬೆಲೆ : 150 ರೂ.


ಭಯಂಕರ ಬೈರಾಗಿ ಕಾದಂಬರಿಯಲ್ಲಿ ಎನ್. ನರಸಿಂಹಯ್ಯನವರು ಉಪಕ್ರಮಣಿಕೆ ಎಂದು ಬೈರಾಗಿಯ ಆಗಿನ ವಸ್ತುಸ್ಥಿತಿಯನ್ನು ತಿಳಿಸುತ್ತಾರೆ. ಅದರಲ್ಲಿ ಶ್ರೀ ಜಗದ್ಗುರುಗಳ ಉಪನ್ಯಾಸವೆಂದು ಆತ ಹೇಳುತ್ತಿದ್ದ ಉಪನ್ಯಾಸದ ಉನ್ನತ ವಿಚಾರಗಳನ್ನು ತೆರೆದಿಡುತ್ತಾರೆ. ಆ ಗುರುಗಳ ಹೆಸರು ಶ್ರೀ ಶ್ರೀ ಜಗದ್ಗುರುಗಳು ರಾಮಕರ್ಣಾನಂದ ಸ್ವಾಮಿಗಳು. ಈ ಉಪನ್ಯಾಸ ನಡೆದದ್ದು ರಾಜನಗರದಲ್ಲಿ. ಈ ಸ್ವಾಮಿಯವರ ಕೀರ್ತಿಯು ಎಲ್ಲೆಡೆ ಹರಡಿತ್ತು. ಈ ಉಪನ್ಯಾಸದಲ್ಲಿ ಹೇಳಿದ ವಿಚಾರಗಳು ಜ್ಞಾನ ಸ್ವರೂಪವಾಗಿ ಹಾಗೂ ಅತ್ಯಂತ ಅನುಭವದಿಂದ ಕಂಡುಕೊಂಡ ಮಾತುಗಳು ಎಂದೇ ಭಾಸವಾಗುತ್ತವೆ. ಈ ಉಪನ್ಯಾಸದ ನಂತರ ಭಕ್ತರ ಕೋರಿಕೆಯಂತೆ ಕೆಲವು ಕಾಲ ಅಲ್ಲಿಯೇ ತಂಗಿದ್ದು ಭಕ್ತಾದಿಗಳಿಗೆ ದರ್ಶನ ಕೊಡುತ್ತೇವೆ ಎಂದು ಹೇಳುತ್ತಾರಾದರೂ... ಈ ನಗರದ ಸ್ಮಶಾನದ ಬಳಿಯಲ್ಲಿಯೇ ಪರ್ಣಶಾಲೆಯನ್ನು ಭಕ್ತರು ಕಟ್ಟಿಕೊಟ್ಟು, ವಾರಕ್ಕೊಮ್ಮೆ ದರ್ಶನ ಪಡೆಯುವ ವಿಚಾರದಂತೆಯೇ ನಡೆದು ಈ ಸ್ವಾಮಿಗಳ ಕೀರ್ತಿ ಎಲ್ಲೆಡೆ ಹರಡುತ್ತಿತ್ತು. 


ಇದೇ ಸಮಯದಲ್ಲಿ ಕಾಂಚಿನಗರದ ಸ್ವತಂತ್ರ ಮತ್ತು ಸುಪ್ರಸಿದ್ಧ ಪತ್ತೇದಾರನಾದ ಪುರುಷೋತ್ತಮ ತನ್ನ ಪತ್ನಿ - ಪುತ್ರರೊಂದಿಗೆ ರಾಜನಗರಕ್ಕೆ ಬಂದು ಕೆಲವು ಕಾರಣಗಳಿಂದ ಅಲ್ಲಿಯೇ ನೆಲೆಸುತ್ತಾನೆ. ಆತನ ಜೊತೆ ಅವನನ್ನೇ ಅನುಸರಿಸುತ್ತಿದ್ದ ಸಹಾಯಕ ರಾಮನಾಥನೂ ಪತ್ನಿ- ಪುತ್ರರೊಂದಿಗೆ ಅಲ್ಲಿಯೇ ನೆಲೆಸುತ್ತಾನೆ. 


ರಾಜನಗರಕ್ಕೆ ಬಂದ ಸ್ವಲ್ಪ ಸಮಯದಲ್ಲಿಯೇ ಅಲ್ಲಿನ ಇನ್ಸ್ಪೆಕ್ಟರ್ ವಿಶ್ವನಾಥ ಬಂದು ಅಚ್ಚರಿಗೊಳಿಸುವ ವಿಚಾರವೊಂದಿದೆ ಎಂದು ಪೊಲೀಸ್ ಠಾಣೆಯ ಹಿಂಭಾಗಕ್ಕೆ ಕರೆದೊಯ್ದು ಅಲ್ಲಿದ್ದ ಹಲಸಿನ ಮರದಲ್ಲಿ ನೇತು ಹಾಕಿದ್ದ ಅನಾಮಿಕ ಶವವೊಂದನ್ನು ತೋರುತ್ತಾನೆ. ಆದರೆ, ಆ ಕೊಲೆ ಭಯಾನಕವಾಗಿತ್ತು. ಶವದ ಕೆಳಭಾಗದಲ್ಲಿ ಒಂದು ತೊಟ್ಟು ರಕ್ತವೂ ಇರಲಿಲ್ಲ. ಶವದ ಮುಖದ ಮೇಲಿನ ಬಟ್ಟೆ ತೆಗೆದರೆ ಮುಖವನ್ನು ಯಾವ ವಿಧದಲ್ಲಿಯೂ ಗುರುತಿಸಲು ಸಾಧ್ಯವಾಗುವಂತಿರಲಿಲ್ಲ. ಮುಖದ ತುಂಬಾ ಚಾಕುವಿನ ತಿವಿತದ ಗಾಯಗಳಿದ್ದು, ಕಿವಿ, ಮೂಗುಗಳು ಇರಲಿಲ್ಲ. ಶರೀರದ ಒಂದೆರಡು ಕಡೆ ಆಯುಧದ ಗಾಯವಾಗಿತ್ತು. ಮೈ ಮೇಲಿನ ಉಡುಪು ಸಹ ಅವನದ್ದಾಗಿರಲಿಲ್ಲ. ಕೊಲೆಗಾರ ಮತ್ತೆಲ್ಲೋ ಕೊಲೆ ಮಾಡಿ ಅದನ್ನು ಪೊಲೀಸ್ ಠಾಣೆಯ ಹಿಂಭಾಗಕ್ಕೆ ತಂದು ನೇತು ಹಾಕಿದ್ದಲ್ಲದೆ ಒಂದು ಕಾಗದವನ್ನೂ ಇಟ್ಟಿದ್ದನು. ಎಲ್ಲರನ್ನೂ ಯಾಮಾರಿಸಿ ನೇತು ಹಾಕಿದ್ದ ಶವ, ರಹಸ್ಯವಾದ ಭೀಕರ ಕೊಲೆ ಅನಾಥವಾದ ಶವ ಎಲ್ಲರ ಬಾಯಲ್ಲಿಯೂ ಸುದ್ದಿಯಾಯಿತು.


ಇದರ ಹಿಂದೆ ಹೊರಟವರಿಗೆ ರಾಜನಗರದಲ್ಲಿ ಇದ್ದ ಕೆಲವು ಪ್ರಮುಖರ ಪರಿಚಯವನ್ನು ಮಾಡಿಕೊಳ್ಳುವಂತಾಗುತ್ತದೆ. 


ರಾಜನಗರದ ವೇಶ್ಯೆ. ಅವಳ ಮಾಯಾ ಪಾಶಕ್ಕೆ ಸಿಲುಕಿದ ಯಾವ ಶ್ರೀಮಂತರೂ ಉಳಿಯುವಂತಿರಲಿಲ್ಲ. ಆಕೆಯನ್ನು ಮೋಹಿಸಿ ಬಂದ ಮಧ್ಯಮ ವರ್ಗದವರಿಗೂ ಸರಿಯಾದ ಬುದ್ದಿ ಕಲಿಸುತ್ತಿದ್ದಳು. ಅಲ್ಲದೆ, ಅವರಿಗೆ ಅವಳನ್ನು ಮುಟ್ಟಲೂ ಅವಕಾಶ ಮಾಡಿಕೊಡುತ್ತಿರಲಿಲ್ಲ. ಗೌಪ್ಯವಾಗಿದ್ದ ಅವಳ ನಡೆಯೇ ವಿಚಿತ್ರವಾಗಿತ್ತು. ಆದರೆ, ಆ ನಗರದಲ್ಲಿ ಕಲಾವತಿಯನ್ನು ಮೋಹಿಸದೆ ಉಳಿದವರು ಶ್ರೀಮಂತರಾಗಿದ್ದ ಲಕ್ಷ್ಮಣರಾಯರು ಮಾತ್ರವೇ.


ಮತ್ತೊಂದು ಕಾಗದ ಅದಾಗಲೇ ಪುರುಷೋತ್ತಮನ ಕೈ ಸೇರಿತ್ತು. ಕೊಲೆಗಾರ ನಗರದಲ್ಲಿಯೇ ಇದ್ದು ಸಾಹಸವನ್ನು ತೋರಿಸಿದ್ದಾನೆ ಎಂಬುದು ಸ್ಪಷ್ಟವಾಗಿತ್ತು.


ಲಕ್ಷ್ಮಣರಾಯರ ಇದ್ದೊಬ್ಬ ಮಗ ಪ್ರಭಾಕರ ಲಾ ಕಾಲೇಜ್ನಲ್ಲಿ ಓದುತ್ತಿದ್ದನು. ಇದೀಗ ಆತನ ವಿವಾಹದ ವಯಸ್ಸು. ಆತ ಸುಶೀಲೆಯನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದ. ಬೇರೆಯವರನ್ನು ಒಪ್ಪುವಂತಿರಲಿಲ್ಲ. ಲಕ್ಷ್ಮಣರಾಯರು ಆಕೆಯನ್ನು ಒಪ್ಪುವಂತಿರಲಿಲ್ಲ. ಅದಕ್ಕೆ ಕಾರಣ ಶತ್ರುತ್ವ. ಅದರ ಮರ್ಮವೇನು..?


ಸುಪ್ರಸಿದ್ಧ ಚಾಂಪಿಯನ್ ಪರಮಶಿವ ಕುಸ್ತಿ ಅಖಾಡದಲ್ಲಿ ಆ ಊರಿಗೆ ಸವಾಲು ಹಾಕಿದ್ದ. ಅದಕ್ಕೆ ಆ ಊರಿನ ಪೈಲ್ವಾನರು ಮುನ್ನುಗ್ಗಿ ಹೋಗಿರಲಿಲ್ಲ. ಆದರೆ, ದೇಹಬಲ ಮಾತ್ರವಿದ್ದ ರಾಮನಾಥ ಆತನ ಸವಾಲನ್ನು ಸ್ವೀಕರಿಸಿ ಕೆಲವು ದಿನಗಳಲ್ಲಿಯೇ ತಯಾರಾಗಿ ಆತನೊಡನೆ ಕುಸ್ತಿಗೆ ಹೋಗುತ್ತಾನೆ. ಆತ ಸೋತನೇ.. ಗೆದ್ದನೇ..?


ಪ್ರಭಾಕರನ ಆಪ್ತಮಿತ್ರ ಶಿರೋಮಣಿ, ಲಕ್ಷ್ಮಣರಾಯರು ಹಾಗೂ ಕಮಲಮ್ಮನವರ ಮಾತಿಗೆ ಕಟ್ಟುಬಿದ್ದು ತನ್ನ ಗೆಳೆಯನನ್ನು ಕನ್ಯೆ ನೋಡಲು ಕರೆದೊಯ್ಯುತ್ತಾನೆ. ಪ್ರಭಾಕರ ತನ್ನ ಮಟ್ಟಿಗೆ ಅಸಾಧ್ಯವೆಂದು ಭಾವಿಸಿದ್ದ 13 ಕರಾರುಗಳನ್ನು ಹಾಕುತ್ತಾನೆ. ಆದರೆ, ಅದೆಲ್ಲವನ್ನು ಒಪ್ಪಿ ತಮ್ಮ ಮಗಳು ಸಾವಿತ್ರಿಯನ್ನು ವಿವಾಹ ಮಾಡಿಕೊಡುತ್ತಾರೆ ವೆಂಕಟರಾಯರು. ಆದರೆ, ಎಲ್ಲವನ್ನೂ ಕಿರುಬೆರಳಿನಲ್ಲಿಯೂ ಮುಟ್ಟದ ಪ್ರಭಾಕರನ ಮನಸ್ಸಿನಲ್ಲಿ ಏನಿತ್ತು..?


ಕುಸ್ತಿಯ ನಂತರ ರಾಮನಾಥನ ಪರಿಸ್ಥಿತಿ ದಿನೇದಿನೇ ವಿಷಮಿಸುತ್ತಿತ್ತು. ಅದೇ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ವಿಶ್ವನಾಥನ ಮಾತನ್ನು ನಂಬಿಕೊಂಡು ಪುರುಷೋತ್ತಮ ಗುರುಗಳ ಬಳಿ ಹೋಗಿ ಅಲ್ಲಿಂದ ತಂದಿದ್ದ ಔಷಧಿಯನ್ನು ರಾಮನಾಥನಿಗೆ ಕೊಡುತ್ತಾನೆ. ಪುರುಷೋತ್ತಮನಂತಹ ಪುರುಷೋತ್ತಮನೇ ಮೋಸ ಹೋಗಿದ್ದು ಇಲ್ಲಿಯೇ..! ಅದು ಭಯಂಕರ ವಿಷವಾಗಿತ್ತು. ಇದನ್ನು ಅರಿಯದ ರಾಮನಾಥ ಪುರುಷೋತ್ತಮನೇ ತನ್ನನ್ನು ಹತ್ಯೆ ಮಾಡಲು ನೋಡಿದ್ದಾನೆಂದು ತಪ್ಪಾಗಿ ಭಾವಿಸುತ್ತಾನೆ. ನಂತರ ಆತನ ಮಗ ಶೂರವಿಜಯನು ತಕ್ಷಣಕ್ಕೆ ಪುರುಷೋತ್ತಮನನ್ನು ಕರೆತಂದಿದ್ದಕ್ಕೆ ರಾಮನಾಥ ಉಳಿಯುತ್ತಾನೆ. ಆ ಒಂದು ಕೃತ್ಯವೇ ಅವನೇ ಭಯಂಕರ ಭೈರಾಗಿ ಎಂದು ಪುರುಷೋತ್ತಮನಿಗೆ ಗೊತ್ತು ಮಾಡಿಸುತ್ತದೆ. 


ಪೀಠಿಕೆಯಿಂದ ಕಾದಂಬರಿಯ ಹತ್ತಿರ ಹತ್ತಿರ ಅರ್ಧಭಾಗದವರೆಗೂ ನಡೆಯುವ ಈ ಘಟನೆಯಲ್ಲಿ ಆತನ ಹಿನ್ನೆಲೆ ಹಾಗೂ ಶೀರ್ಷಿಕೆಯನ್ನು ಕಂಡಾಗ ಈತನೇ ಭಯಂಕರ ಭೈರಾಗಿ ಇರಬಹುದು ಎಂಬ ನನ್ನ ಊಹೆ ಸರಿಯಾಗಿತ್ತು. ಆದರೆ, ಇದಕ್ಕಿಂತ ಮುಂದೆ ಕಾದಂಬರಿಯನ್ನು ಊಹಿಸಲು ಸಾಧ್ಯವಿಲ್ಲದ ಅನೇಕ ತಿರುವುಗಳು ನಮ್ಮ ಬುದ್ಧಿಶಕ್ತಿಗೆ ಸವಾಲಾಗುತ್ತವೆ. 


ಭಯಂಕರ ಭೈರಾಗಿ ಆತನೇ ಎಂದು ಕಂಡು ಹಿಡಿದು ಆತನನ್ನು ಹಿಡಿದ ನಂತರ ನಡೆಯುವ ಆತನ ಹಾಗೂ ಆತನ ಅನುಯಾಯಿಗಳ ಪರಾರಿಯ ಹಿಂದಿದ್ದವರು ಯಾರು..?


ಇಲ್ಲಿ ಆತನೇ ರಾಮಕರ್ಣಾನಂದ ಸ್ವಾಮಿಗಳು ಎಂದು ಎಲ್ಲರೂ ನಂಬಿದ್ದರಾದರೂ.. ನಿಜವಾದ ರಾಮಕರ್ಣಾನಂದ ಸ್ವಾಮಿಗಳು ಇದ್ದರೇ...? ಹಾಗಿದ್ದಲ್ಲಿ ಅವರೆಲ್ಲಿ..?


ಭಯಂಕರ ಭೈರಾಗಿಯ ವೇಷದಲ್ಲಿದ್ದ ನಿಜವಾದ ಅಪರಾಧಿ ಯಾರು ? ಆತನ ಅನುಯಾಯಿಗಳ ಜಾಲ ಹೇಗಿತ್ತು ಒಬ್ಬೊಬ್ಬರ ಸುಳಿವನ್ನೂ ಪುರುಷೋತ್ತಮ ಕಂಡುಹಿಡಿಯುವುದು ಹೇಗೆ..?


ಪುರುಷೋತ್ತಮ ಹಾಗೂ ರಾಮನಾಥರ ನಡುವಿನ ಅಪನಂಬಿಕೆಯ ಪೊರೆ ಕಳಚಿತಾದರೂ.. ಈ ಕಾರ್ಯದಲ್ಲಿ ಅವರು ಮತ್ತೆ ದೂರ ಇರಬೇಕಾಗಿ ಬಂದದ್ದಾದರೂ ಏಕೆ..?


ಕಲಾವತಿಯ ಹಿನ್ನೆಲೆ ಏನು? ಲಕ್ಷ್ಮಣರಾಯರು ಹಾಗೂ ವೆಂಕಟರಾಯರ ಸ್ಥಿತಿಗತಿಗಳೇನಾದವು..?


ಶಿರೋಮಣಿ ನಿಜಕ್ಕೂ ಪ್ರಭಾಕರನ ಸ್ನೇಹಿತನೇ ಅಥವಾ ಆತನ ಕೃತ್ಯದ ಹಿಂದೆ ಬೇರೆನಾದರೂ ಉದ್ದೇಶವಿತ್ತೇ.. ಸುಶೀಲೆ ಹಾಗೂ ಸಾವಿತ್ರಿಯರ ಗುಣಗಳು ಹೇಗಿದ್ದವು..? ಪ್ರಭಾಕರನ ವೈವಾಹಿಕ ಜೀವನ ಹಾಗೂ ಪ್ರೀತಿಯ ಬದುಕು ಏನಾಯ್ತು..?


ಪುರುಷೋತ್ತಮನಿಗೆ ಆತನ ಮಗ ವಿಜಯಕೇಸರಿ ಸಹಾಯ ಮಾಡಿದ ಹಾಗೂ ಸುಳಿವು ನೀಡಿದ ಬಗೆ ಹೇಗೆ..?


ಪತ್ತೇದಾರಿ ಕಾದಂಬರಿಯಲ್ಲಿ ಉಲ್ಲೇಖಿಸುವ ಸಣ್ಣ ಸಣ್ಣ ಅಂಶಗಳು ಮುಂದಿನ ಕಥೆಯಲ್ಲಿ ದೊಡ್ಡ ತಿರುವುಗಳನ್ನು ತೆಗೆದುಕೊಳ್ಳುವ ಬಗೆ, ಅನಿರೀಕ್ಷಿತವಾದ ಕೆಲ ವ್ಯಕ್ತಿಗಳು ಅವರಿಂದಾದ ಅಪಾಯ ಹಾಗೂ ಅವರಿಂದ ಆಗುವ ಸಹಾಯ ಎಲ್ಲವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ. ವ್ಯಕ್ತಿಯೊಬ್ಬನ ನಡೆ ಬದಲಾಗುವ ಸಂದರ್ಭಗಳು ಹಾಗೂ ಅವರ ಆ ಬದಲಾವಣೆಗೆ ಕಾರಣಗಳು, ಅದರ ಹಿನ್ನೆಲೆಯಲ್ಲಿ ಅಡಗಿರುವ ಗುಟ್ಟುಗಳು ಒಂದೊಂದಾಗಿ ಪತ್ತೇದಾರನ ಬುದ್ಧಿ ಶಕ್ತಿಯ ಹಾಗೂ ಸಹಾಯಕನ ಬಾಹುಬಲದ ಮೇಲೆ ನಿಂತಿರುವ ಬಗೆ ಹೀಗೆ ಹತ್ತು ಹಲವಾರು ಚಂದದ ಅಂಶಗಳನ್ನು ಕಾದಂಬರಿಯಲ್ಲಿ ಕಾಣಬಹುದು. 


ಇವರು ಹಳೆಯ ಲೇಖಕರು. ಇಂದಿನ ದಿನಗಳಲ್ಲಿ ಹಲವು ಪತ್ತೇದಾರಿ ಸೀರೀಸ್ ಹಾಗೂ ಸಿನಿಮಾಗಳನ್ನು ನೋಡಿರುತ್ತೇವೆ ಹಾಗೂ ಈ ಕಥೆ ಊಹಿಸಲು ಸುಲಭ ಎನ್ನುವವರ ಆಲೋಚನೆಯನ್ನು ತಿರುವುಮುರುವಾಗಿಸುವ ಲೇಖಕರು ಇವರು. ನಮ್ಮ ಬುದ್ಧಿಶಕ್ತಿಗೆ ಸವಾಲು ಹಾಕುವಂತಹ ಚಿತ್ರಣವನ್ನು ಕಟ್ಟಿಕೊಟ್ಟಿರುವ ಕಾದಂಬರಿ ಇದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ