ಭಾನುವಾರ, ಏಪ್ರಿಲ್ 26, 2026

ಅಶ್ವತ್ಥರ ಅಪ್ರಕಟಿತ ಕಥೆಗಳು (ಭಾಗ- ೧) (ಪುಸ್ತಕ ಯಾನ - 377)


ಪುಸ್ತಕದ ಶೀರ್ಷಿಕೆ : ಅಶ್ವತ್ಥರ ಅಪ್ರಕಟಿತ ಕಥೆಗಳು (ಭಾಗ- ೧)

ಲೇಖಕರು : ಅಶ್ವತ್ಥ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು 

ಪ್ರಥಮ ಮುದ್ರಣ : 1996

ಎರಡನೇ ಮುದ್ರಣ : 2010 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 136

ಬೆಲೆ : 45 ರೂ.


ಅಶ್ವತ್ಥರ ಮರಣಾನಂತರ ಪ್ರಕಟಿತವಾದ ಅವರ ಹತ್ತು ಕಥೆಗಳ ಕಥಾಸಂಕಲನ ಇದಾಗಿದೆ. ಇವರ ಕಾದಂಬರಿ ರಂಗನಾಯಕಿಯನ್ನು ಮಾತ್ರ ಓದಿದ್ದೆ. ಈಗ ಇವರ ಕಥೆಗಳು ವಿಶಾಲ ಕಥಾವ್ಯಾಪ್ತಿಯ ಪರಿಚಯ ಮಾಡಿಸಿತು. 


ದೊಂಬರದಾಸ : ಈ ಕಥೆ ಅನಟಲೆ ಫ್ರಾನ್ಸ್ ರ Our Lady's Juggler ಎಂಬುದನ್ನು ಹೊಂದಿಸಿಕೊಂಡು ಬರೆದಿರುವುದು ಎಂದು ಉಲ್ಲೇಖವಾಗಿದೆ.

ಕಷ್ಟಗಳನ್ನೇ ಹೆಚ್ಚಾಗಿ ಅನುಭವಿಸಿದ್ದ ಜೀವ, ತನ್ನ ಜೀವನ ನಡೆಸಲು ಮಾತ್ರವೇ ತನ್ನ ವೃತ್ತಿಯನ್ನು ಮಾಡುತ್ತಿದ್ದವನಿಗೆ ದುರ್ಗಾದೇವಿಯಲ್ಲಿ ಬಹಳವೇ ಭಕ್ತಿ. ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದವನಿಗೆ ಒಂದು ಪರಿಸ್ಥಿತಿಯಲ್ಲಿ ಜಂಗಮಯ್ಯನವರ ದೆಸೆಯಿಂದ ದುರ್ಗಾದೇವಿಯ ಭಕ್ತನಾಗಲು ವಿಭಿನ್ನ ಅವಕಾಶ ದೊರೆತು ದೊಂಬರದಾಸನಾಗಿದ್ದವನು ಜಂಗಮದಾಸಿಮಯ್ಯನಾದ. ಮಠದಲ್ಲಿ.. ಉಳಿದ ಜಂಗಮರು ತೋರುತ್ತಿದ್ದ ಭಕ್ತಿಯನ್ನು ನೋಡಿ ಕೀಳಿರಿಮೆಗೆ ಜಾರುತ್ತಿದ್ದವನಿಗೆ ತನ್ನದೇ ಭಕ್ತಿಯ ಮಾರ್ಗ ಕಂಡಿತ್ತು. ಇಲ್ಲಿ ಮುಗ್ಧ ಭಕ್ತಿಯ, ನಿಷ್ಕಲ್ಮಶ ಮನಸ್ಸಿನ ಭಕ್ತನನ್ನು ಕಾಣಬಹುದು.


ಯುದ್ಧದ ನೆರಳಲ್ಲಿ : ಯುದ್ಧ ಎಲ್ಲರ ಮನಸ್ಸಿನಲ್ಲಿಯೂ ಕಳವಳವನ್ನು ಉಂಟುಮಾಡುವ ಶಬ್ದ. ಜಪಾನಿನ ಯುದ್ಧದ ಪರಿಣಾಮವಾಗಿ ಕಲ್ಕತ್ತೆಯಲ್ಲಿ ಉಂಟಾದ ಪರಿಣಾಮಗಳು ಇಲ್ಲಿವೆ. ಇದು ಹೆಚ್ಚಿನವರ ಸಾಂಸಾರಿಕ ಜೀವನದ ಮೇಲೆ ಪರಿಣಾಮ ಬೀರಿತು. ಹೆಚ್ಚಿನವರು ತಮ್ಮ ಹೆಂಡತಿ-ಮಕ್ಕಳನ್ನು ತವರಿಗೆ ಕಳಿಸಿದರು. ಇಂತಹ ಸಂದರ್ಭದಲ್ಲಿ  ಗಜಪತಿರಾಯರ ಮನೆಯ ಪಕ್ಕದಲ್ಲೇ ವಾಸವಿದ್ದರೂ.. ಅವರು ಇವರಿಗೆ, ಇವರು ಅವರಿಗೆ ಕೇವಲ ಮುಖ ಪರಿಚಯವಷ್ಟೇ.. ಅಂದು ರಾಯರ ಮನೆಯಲ್ಲಿ ಕೇಳಿ ಬಂದ ದೊಡ್ಡ ಶಬ್ದಗಳು ಇವರ ಮನೆಯಲ್ಲಿ, ಮನದಲ್ಲಿ ಉಂಟು ಮಾಡಿದ ಆಂದೋಲನ ಏನಿತ್ತು ಓದಿ ನೋಡಿ.


ಕಲ್ಯಾಣಿ : ವೃತ್ತಿಯಿಂದ ಮನುಷ್ಯರ ಮಾನವೀಯತೆಯನ್ನು ಹಾಗೂ ದಯೆಯನ್ನು ಅಳೆಯಲಾಗದು ಎಂಬುದನ್ನು ಈ ಕಥೆಯಲ್ಲಿ ಕಾಣಬಹುದು. ಕೆಂಪುದೀಪದ ನೆರಳಿನಲ್ಲಿ ಬಾಳ್ವೆ ಮಾಡುತ್ತಿದ್ದ ಕಲ್ಯಾಣಿ ತಾನಾಗಿಯೇ ಆ ವೃತ್ತಿಯನ್ನು ಆಯ್ದುಕೊಂಡವಳಲ್ಲ ಅಥವಾ ಕುಟುಂಬದಿಂದಲೂ ಬಂದದ್ದಲ್ಲ. ಮೋಸದ ಬಲೆಗೆ ಬಿದ್ದು ವೇಶ್ಯಾವೃತ್ತಿಯನ್ನು ಸ್ವೀಕರಿಸಿದ್ದವಳು. ಆ ವೃತ್ತಿಯನ್ನು ಬಿಟ್ಟುಬಿಡುವ ಆಲೋಚನೆ ಮಾಡಿದ್ದ ಸಂದರ್ಭದಲ್ಲಿ, ಅವಳಿಗೆ ಅತ್ಯವಶ್ಯಕವಾಗಿದ್ದ ಹಣ ಶ್ರೀಮಂತ ಗಿರಾಕಿಯಿಂದ ಚಿನ್ನದುಂಗುರದ ರೂಪದಲ್ಲಿ ಸಿಕ್ಕಿದರೂ ಆತನ ಕೋಪಕ್ಕೆ, ಆಶಾಭಂಗಕ್ಕೆ ಕಾರಣವಾಗುತ್ತಾಳೆ. ಆತನ ಉಂಗುರ, ಹಣವನ್ನೆಲ್ಲಾ ಹಿಂದಿರುಗಿಸಿಬಿಡುತ್ತಾಳೆ. ಅದಕ್ಕೆಲ್ಲಾ ಕಾರಣವೇನು..?


ಆ ಗಂಟು : ಬೊಂಬಾಯಿಯ ಲೋಕಲ್ ಟ್ರೈನ್ ನ ಸೆಕೆಂಡ್ ಕ್ಲಾಸ್ ಬೋಗಿಯಲ್ಲಿ ಪ್ರಯಾಣ ಮಾಡುವಾಗ ತನ್ನ ಹ್ಯಾಟ್ ಇಡಲು ಹೋದ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಗಂಟೊಂದು ಕಣ್ಣಿಗೆ ಬೀಳುತ್ತದೆ. ಆ ಗಂಟು ಹೇಗಿತ್ತು ಅದರೊಳಗೆ ಏನಿರಬಹುದು ಎಂಬ ಆಲೋಚನೆಯಿಂದ ಹಿಡಿದು ಅದು ಹುಟ್ಟಿಸುವ ವಿಭಿನ್ನ ತರ್ಕಗಳು, ವ್ಯಕ್ತಿಯೊಬ್ಬರ ಆಲೋಚನೆ ರೂಪದಲ್ಲಿ ಕುತೂಹಲ ಕೆರಳಿಸುತ್ತಾ ಕಥೆಯಾಗಿ ಮೂಡಿಬಂದಿದೆ. ಅಷ್ಟಕ್ಕೂ ಆ ಗಂಟು ಯಾರದ್ದು..? ಅದರೊಳಗೆ ಏನಿತ್ತು..? ಎಂಬುದು ತಿಳಿಯಿತೇ..? ಒಂದು ಅಪರಿಚಿತ ಗಂಟಿನ ಕಥೆ ಇದು. ಮನುಷ್ಯನ ಆಲೋಚನೆಗಳು ಹಾಗೂ ಪ್ರಾಮಾಣಿಕತೆಯ ನಡೆಯನ್ನು ಕಾಣಬಹುದು.


ಬೆತ್ತ ಮುರಿಯಿತು : ಮೇಷ್ಟ್ರು ನಂಜಪ್ಪನವರು ಹಾಗೂ ಗೌರಮ್ಮನವರ ಏಕೈಕ ಮಗ ಶ್ರೀಕಂಠ. ಬಂದ ಸಂಬಳದಿಂದಲೇ ಮನೆ ನಡೆಸಬೇಕಾಗಿದ್ದ ಮೇಷ್ಟ್ರ ಕೈಯಲ್ಲಿ ಹಣ ಉಳಿಯುತ್ತಿದ್ದದ್ದು ಕಡಿಮೆಯೇ. ಆದರೆ, ವಿದ್ಯಾದಾನದಲ್ಲಿ ಕಡಿಮೆಯಿರಲಿಲ್ಲ. ಮನೆಯಲ್ಲಿಯೇ ಹೇಳುತ್ತಿದ್ದ ಟ್ಯೂಷನ್ಗೆ ಯಾರಿಂದಲೂ ಹಣ ಪಡೆದವರಲ್ಲ. ಮೇಷ್ಟ್ರು ಎಂದರೆ.. ಅವರ ಪಾಠವೆಂದರೆ ಎಷ್ಟು ಕಟ್ಟುನಿಟ್ಟೋ.. ಅದರ ಜೊತೆಗೆ ಅವರ ಬೆತ್ತವೂ ಅಷ್ಟೇ ಮನೆಮಾತಾಗಿತ್ತು. ಶ್ರೀಕಂಠನ ಗೋಲಕದಲ್ಲಿದ್ದ ದುಡ್ಡನ್ನು ಆತ ತೆಗೆದುಕೊಂಡು ಮಂಡ್ಯಗೆ ಹೋದದ್ದು ಮೇಷ್ಟರಿಗೆ ಗೊತ್ತಾದ ಸಂದರ್ಭ. ಅಷ್ಟಕ್ಕೂ ಅದು ಗೊತ್ತಾದದ್ದು ಹೇಗೆ..? ಆತ ಹಣ ತೆಗೆದುಕೊಂಡು ಹೋದದ್ದಾದರೂ ಏಕೆ..? ಇಲ್ಲಿ ಬೆಟ್ಟ ಮುರಿದದ್ದು ಯಾವ ಕಾರಣಕ್ಕೆ..? ಒಂದು ಮನಮಿಡಿಯುವ ಕಥೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಅದರಿಂದ ಆಗುವ ಪರಿಣಾಮವೇನಿರುತ್ತದೆ? ಎಂಬುದನ್ನು ಸೂಕ್ಷ್ಮವಾಗಿ ಹೇಳಿರುವ ಕಥೆ.


ತಿರುಗ ಮುರುಗ : ಮೈಸೂರಿನಿಂದ ಕಾಶಿಗೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ದಂಡು ಬಂದಿತ್ತು. ಅವರನ್ನು ಹೇಗೆಲ್ಲಾ ಆತಿಥ್ಯ ಮಾಡಬೇಕು ಎಂದುಕೊಂಡಿದ್ದವರು ಇವರು. ಆದರೆ, ಇವರ ಆತಿಥ್ಯದ ಕಲ್ಪನೆ ಅವರಿಗಿರಲಿಲ್ಲವಾದ್ದರಿಂದ ಇವರ ಆಲೋಚನೆಗಳನ್ನೆಲ್ಲಾ ತಿರುಗಮುರುಗ ಮಾಡುವಂತೆ ನಡೆದ ಪ್ರಸಂಗಗಳು ಹೇಗಿದ್ದವು ಹಾಗೂ ಇವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಓದಿ ನೋಡಿ.


ಗೀಳು : ಈ ಕಥಾಸಂಕಲನದಲ್ಲಿ ಪತ್ತೇದಾರಿ ಕಥೆಯಂತೆ ಕಂಡ ವಿಭಿನ್ನವಾದ ಕಥೆ ಹಾಗೂ ತಲ್ಲಣ ಹುಟ್ಟಿಸಿದ ಕಥೆ ಇದು. ಊರಿನಲ್ಲೆಲ್ಲಾ ಅನಿಶ್ಚಿತ ಬೆರೆತ ಭಯ ಹುಟ್ಟಿದ್ದ ಕಾರಣವೆಂದರೆ.. ಸರಣಿಯಾಗಿ ಕೊಲೆಯಾಗಿರುತ್ತಿದ್ದ ಹೆಣ್ಣುಮಕ್ಕಳು. ಅದರಲ್ಲಿಯೂ ಹೆಣ್ಣುಮಕ್ಕಳ ವಿಚಿತ್ರವಾದ ಕೊಲೆ. ಈ ಭೀಕರ ಕೃತ್ಯವನ್ನು ಭೇದಿಸದೆ ಯಾರಿಗೂ ನಿದ್ದೆ ಬರುವಂತಿರಲಿಲ್ಲ. ಇದನ್ನು ಭೇದಿಸಲು ಹೊರಟ ಭರಮಪ್ಪನ ವೈಯಕ್ತಿಕ ವಿಚಾರ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಈತನ ಇಬ್ಬರು ಪತ್ನಿಯರು ಈಗಾಗಲೇ ತೀರಿಕೊಂಡಿದ್ದರು. ಈತನದ್ದು ಸಣ್ಣಪುಟ್ಟ ಸಂಸಾರವೇನಲ್ಲ. 9 ಮಕ್ಕಳಿದ್ದ ಸಂಸಾರ. ಸದ್ಯಕ್ಕೆ ಹಿರಿಯ ಮಗಳು ಸರಸ್ವತಿ ಅದರ ಭಾರ ಹೊತ್ತಿದ್ದಳು. ಆ ಹೀನ ಕೃತ್ಯ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿಕೊಂಡನಾದರೂ.. ಆತನ ಸಾವು ಸಂಭವಿಸಿದ್ದು ಇನ್ನೂ ವಿಕಾರವಾಗಿತ್ತು. ಇದರ ಜೊತೆಗೆ ಸರಸ್ವತಿಯ ಸಾವು ಮರೆಯುವಂಥದ್ದಲ್ಲ. ಈ ಎರಡೂ ಘಟನೆಗಳಿಗೆ ಸಂಬಂಧವಿದೆಯೇ ಓದಿ ನೋಡಿ. ವಿಭಿನ್ನವಾಗಿರುವ ಈ ಕಥೆ ಮನುಷ್ಯನ ಗೀಳು ಆತನನ್ನು ಬಲಿಪಡೆಯುವ ರೀತಿಯನ್ನು ಬಿಚ್ಚಿಡುತ್ತದೆ.


ಶ್ರೀ ಮರಿಕೆಂಪ ವಿಜಯ : ಈ ಕಥೆಯನ್ನು ಓದಿದ ಸಂದರ್ಭ ಹಾಗೂ ಈಗಿನ ದಿನಮಾನಗಳು ಈ ಕಥೆಯನ್ನು ಹೆಚ್ಚು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ತೊಣಚಿಕೊಪ್ಪಲಿನ ಬಡ ವಿಧವೆ ಬಂಗಾರವ್ವನ ಒಬ್ಬನೇ ಮಗ ಮರಿಕೆಂಪ. ಒಂದು ದಿನ.. ಅದರಲ್ಲಿಯೂ ವಿಜಯದಶಮಿಯ ದಿನ, ಅಮ್ಮ ಹಬ್ಬದ ಸಂಭ್ರಮದಲ್ಲಿದ್ದಾಗ ಅಲ್ಲಿಂದ ಆಕೆಯ ಅರಿವಿಗೆ ಬಾರದಂತೆ, ತನಗೂ ಅರಿವಿಲ್ಲದ ರೀತಿಯಲ್ಲಿ ಮೈಸೂರಿಗೆ ಬಂದುಬಿಡುತ್ತಾನೆ. ಇಡೀ ಮೈಸೂರನ್ನು ಅವನ ಮೂಲಕ ನಮಗೆ ದರ್ಶನ ಮಾಡಿಸುತ್ತಾರೆ ಲೇಖಕರು. ಅದರಲ್ಲಿಯೂ ದಸರೆಯ, ವಿಜಯದಶಮಿಯ ದಿನದ ವರ್ಣನೆ ಓದಿಯೇ ತಣಿಯಬೇಕು. ಅಮ್ಮನಿಗೆ ಮಗ ಸಿಕ್ಕನೇ..? ಮಗ ಮತ್ತೆ ಮನೆಗೆ ಮರಳಿದನೇ..? ಎಂಬ ಆತಂಕ ಮನದಲ್ಲಿದ್ದರೂ ಮರಿಕೆಂಪನ ವಿಜಯವನ್ನು ಓದುವಾಗ ಮೈಸೂರು ಹೆಚ್ಚೇ ಆಪ್ತವಾಗುತ್ತದೆ. ಆತಂಕದೊಂದಿಗೆ ಕುತೂಹಲವನ್ನು ಹುಟ್ಟಿಸುತ್ತಾ ಸಾಗುವ ಈ ಕಥೆ ಹಿಡಿದಿಡುತ್ತದೆ.


ಬಂಡೆಪ್ಪ : ಒಂದು ದೊಡ್ಡ ಬಂಡೆ ನಿರಾಕಾರ ಬಂಡೆಪ್ಪ ದೇವರಾಗಿ, ಸುಪ್ರಸಿದ್ಧವಾದ ದೇವರಾಗಿತ್ತು. ಜನ ಮರುಳೋ, ಜಾತ್ರೆ ಮರುಳೋ ಎನ್ನುವಂತೆ ಶುರುವಾದ ಪ್ರಖ್ಯಾತಿ ಮುಂದೆ ಹೆಚ್ಚುಹೆಚ್ಚು ಖ್ಯಾತಿ ಪಡೆಯಿತು. ಇಂತಹ ದೈವದ ಸನ್ನಿಧಿಯಲ್ಲಿ ಇಬ್ಬರು ಸ್ನೇಹಿತರು ಸಿಗುತ್ತಾರೆ. ಆಸ್ತಿಕನಾಗಿದ್ದ ದೇವರಯ್ಯ ಹಾಗೂ ನಾಸ್ತಿಕನಾಗಿದ್ದು ಈಗ ಆಸ್ತಿಕನಾಗಿ ಬದಲಾದಂತೆ ಕಾಣುತ್ತಿದ್ದ ವಿರೂಪಾಕ್ಷಪ್ಪ. ನಿಜಕ್ಕೂ ವಿರೂಪಾಕ್ಷಪ್ಪ ಬದಲಾಗಿದ್ದನೇ ಎಂದು ಆಲೋಚಿಸುವಷ್ಟರಲ್ಲಿಯೇ ಆತ ಮಾಡಿದ ಒಂದು ಕೆಲಸ ಬಂಡೆಪ್ಪನ ಅಸ್ತಿತ್ವವನ್ನೇ ಕದಲಿಸುತ್ತದೆ. ಅಷ್ಟಕ್ಕೂ ಅವನ ಆ ಕೃತ್ಯದಿಂದ ಎಲ್ಲವೂ ಬಂಡೆಪ್ಪಮಯವಾಯಿತೆ, ಅಥವಾ ಆ ಅಸ್ತಿತ್ವವೇ ಮಾಯವಾಯಿತೇ ಓದಿನೋಡಿ.


ಇಪ್ಪತ್ತು ಸಾವಿರ ! : ಇದು ವರದಕ್ಷಿಣೆ ಪಿಡುಗನ್ನು ತೆರೆದಿಡುವ ಕಥೆ. ಸಾವಿತ್ರಿ ತನ್ನ ತವರು ಮನೆಯಲ್ಲಿ ಬಹಳ ಮುದ್ದಾಗಿ ಬೆಳೆದಿದ್ದವಳು. ಆದರೆ, ಗಂಡನ ಮನೆಯಲ್ಲಿ ಬೇರೆಯದೇ ವಾತಾವರಣವಿದ್ದರೂ.. ಅದೆಲ್ಲದಕ್ಕೂ ಹೊಂದಿಕೊಂಡು ಹೋಗುತ್ತಿದ್ದಳು. ಮೊದಲ ಬಾರಿ ವರದಕ್ಷಿಣೆಯಾಗಿ ಹತ್ತುಸಾವಿರ ತರಲು ಕಳುಹಿಸಿದ್ದಾಗಲೇ.. ಆಕೆ ನಿರಾಕರಿಸುತ್ತಿದ್ದರು ಪರಿಣಾಮವಾಗಿ ಅತ್ತೆಮನೆಯಲ್ಲಿ ಸಿಕ್ಕಿದ್ದ ಶಿಕ್ಷೆ, ಜೊತೆಗೆ ತವರಿನಲ್ಲಿ ಆಕೆ ಉಳಿದರೆ ಆಗುತ್ತಿದ್ದ ಪರಿಣಾಮವನ್ನು ಆಕೆಯ ತಂದೆ-ತಾಯಿ ಬಿಂಬಿಸಿದ್ದ ರೀತಿ ಆಕೆಯ ಮನಸ್ಸಿನಲ್ಲಿ ಉಳಿದಿತ್ತು. ಈಗ ಮತ್ತೊಮ್ಮೆ ಇಪ್ಪತ್ತು ಸಾವಿರವನ್ನು ವರದಕ್ಷಿಣೆಯಾಗಿ ತರಬೇಕಿತ್ತು. ಇಲ್ಲವಾದಲ್ಲಿ ಸೀಮೆಎಣ್ಣೆ ಸುರಿದು ಆಕೆಯನ್ನು ಕೊಂದು ಹಾಕಲು ಸಂಚು ರೂಪಿತವಾಗಿತ್ತು. ತವರಿನ ಬಡತನ, ಗಂಡನ ಮನೆಯವರ ದರ್ಪ ಎರಡನ್ನೂ ಮನಸ್ಸಿನಲ್ಲಿಟ್ಟುಕೊಂಡ ಸಾವಿತ್ರಿ ತೆಗೆದುಕೊಂಡ ನಿರ್ಧಾರವೇನು..? 

ಈ ಕಥೆಯ ಅಂತ್ಯ ಹೀಗಾಗಿರಲಾರದು ಎಂದುಕೊಂಡು, ಹೀಗೆ ಆಗಲಿ ಎಂದು ಬಯಸಿದಕ್ಕಿಂತ ವಿಭಿನ್ನ ಅಂತ್ಯವನ್ನು ಕಂಡು ಅಚ್ಚರಿಯಾಯಿತು. ಎಲ್ಲಾಹೆಣ್ಣು ಮಕ್ಕಳು ಇಷ್ಟೇ ದಿಟ್ಟರಾದರೆ, ಇಂತಹ ವರದಕ್ಷಿಣೆಯ ಪಿಡುಗು ಮಾಯವಾಗಬಹುದಾ ಎಂಬ ಆಲೋಚನೆಯೂ ಹುಟ್ಟಿತು. ದಿಟ್ಟತನದ, ಬಂಡಾಯದ ಕಥೆ ಇದು. 


ಈ ಕಥಾ ಸಂಕಲನದ 10 ಕಥೆಗಳೂ ವಿಭಿನ್ನ. ಈ ಲೇಖಕರ ಕಥಾಶೈಲಿಯೂ ಇಷ್ಟವಾಯಿತು. ಇವರ ಬೇರೆ ಪುಸ್ತಕಗಳು ಲಭ್ಯವಿದ್ದಲ್ಲಿ ಓದಬೇಕೆನ್ನಿಸಿದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ